ಬೆಂಗಳೂರು: ನಿರ್ದೇಶಕ ಈರೇ ಗೌಡರಿಗೀಗ ಅಂಗೈನಲ್ಲಿ ಆಕಾಶ ಗಿಟ್ಟಿದೆ. ಅವರ ನಿರ್ದೇಶನದ ಚಿತ್ರ ’ಬಳೇಕೆಂಪ’ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ 2018 ಕ್ಕೆ ನಾಮನಿರ್ದೇಶನಗೊಂಡಿದೆ. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನ ವರ್ಗದಡಿಯಲ್ಲಿ ಚಿತ್ರವು ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆಯಾಗಿದೆ.
’ತಿಥಿ’ ಚಿತ್ರದ ಚಿತ್ರಕಥೆಗಾರರಾಗಿದ ಈರೇ ಗೌಡ ತನ್ನ ನಿರ್ದೇಶನದ ಪ್ರಥಮ ಚಿತ್ರಕ್ಕೆ ಅಂತರಾಷ್ಟ್ರೀಯ ಮನ್ನಣೆ ದೊರಕಿರುವುದಕ್ಕೆ ಅತ್ಯಂತ ಸಂತಸಗೊಂಡಿದ್ದಾರೆ. ಅವರು ಇದೇ ಮೇ 7ಕ್ಕೆ ನ್ಯೂಯಾರ್ಕ್ ಗೆ ತೆರಳಲಿದ್ದಾರೆ.
’ಬಳೆಕೆಂಪ’ ಚಿತ್ರಕ್ಕೆ ಎನ್ ಎಫ್ ಡಿಸಿ ಚಿತ್ರೋತ್ಸವದಲ್ಲಿ ಪ್ರಶಸ್ತಿ ಸಿಕ್ಕಿದೆ. ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ರೊಟರ್ಡಾಮ್ 2018 ನಲ್ಲಿಸಹ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಇದರಿಂದ ಚಿತ್ರಕ್ಕೆ ಅಂತರಾಷ್ಟ್ರೀಯ ಮನ್ನಣೆ ದೊರಕಿದಂತಾಗಿದೆ" ನ್ಯೂಯಾರ್ಕ್ ಚಿತ್ರೋತ್ಸವದಲ್ಲಿ ಈ ಚಿತ್ರವು ಮೇ 9ಕ್ಕೆ ಪ್ರದರ್ಶನ ಕಾಣಲಿದೆ. ಫಲಿತಾಂಶವು ಮೇ 12ಕ್ಕೆ ಘೋಷಣೆಯಾಗಲಿದೆ.
’ಬಳೆಕೆಂಪ’ ಎನ್ನುವುದು ಬಳೆ ವ್ಯಾಪಾರಿಯೊಬ್ಬನ ಜೀವನಾಧಾರಿತ ಕಥೆ. ಬಳೆ ವ್ಯಾಪಾರಿ ಹಾಗೂ ಆತನ ಪತ್ನಿಯ ಸಂಬಂಧದ ಸುತ್ತ ಕಥೆ ಸಾಗುತ್ತದೆ. ವಿವೇಕ್ ಗೋಂಬರ್ ಈ ಚಿತ್ರದ ನಿರ್ಮಾಪಕರಾಗಿದ್ದು ಜ್ಞಾನೇಶ್, ಭಾಗ್ಯ ಶ್ರೀ, ಚಂದ್ರಶೇಖರ್ ಸಿ.ಎಸ್ ಮತ್ತು ನಾಗರಾಜು ಡಿಪಿ ಮೊದಲಾದವರ ಅಭಿನಯವಿದೆ.
ಬೆನಡಿಕ್ಟ್ ಟೈಲರ್ ಚಿತ್ರಕ್ಕೆ ಸಂಗೀತ ನೀಡಿದ್ದರೆ ನರೇನ್ ಚಂದಾವರ್ಕರ್, ಸೌಮ್ಯಾನಂದ ಸಾಹಿ ಅವರುಗಳು ಛಾಯಾಗ್ರಹಣ ನೆರವೇರಿಸಿದ್ದಾರೆ.