ಚೆನ್ನೈ: ಕಾಲಿವುಡ್ ಇಲೈ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ಸರ್ಕಾರ್ ಚಿತ್ರ ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಕಲೆಕ್ಷನ್ ಮಾಡಿದೆ.
ಸನ್ ಪಿಕ್ಟರ್ ನಿರ್ಮಾಣದಲ್ಲಿ ಎ. ಕೆ. ಮುರುಗದಾಸ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಕೀರ್ತಿ ಸುರೇಶ್, ವಿಜಯ ಲಕ್ಷ್ಮಿ, ಶರತ್ ಕುಮಾರ್, ಮತ್ತು ರಾಧಾ ರವಿ ತಾರಾಗಣವಿದ್ದು, ದೇಶಾದ್ಯಂತ ಸಾವಿರ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.
ತಮಿಳುನಾಡಿನ ರಾಜಕೀಯ ಹಿನ್ನೆಲೆಯಲ್ಲಿ ಕಥಾ ಹಂದರ ಹೊಂದಿರುವ ಈ ಚಿತ್ರ ಬಿಡುಗಡೆಯಾದ ಮೊದಲ ದಿನವೇ 47 ಕೋಟಿ ರೂಪಾಯಿ ಆದಾಯ ಗಳಿಸುವ ಮೂಲಕ ರಣಬೀರ್ ಕಪೂರ್ ಅಭಿನಯದ ಸಂಜು ದಾಖಲೆಯನ್ನು ಮೀರಿಸಿದೆ.
ಈ ಚಿತ್ರ ಬಿಡುಗಡೆ ನಂತರ ಅನೇಕ ಮಂದಿ ಸೆಕ್ಷನ್ 49 ಪಿ ಬಗ್ಗೆ ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದು, ಮತ್ತೊಂದು ದಾಖಲೆ ಸೃಷ್ಟಿಸಿದೆ. ಬಹುತೇಕ ಮಂದಿ ಸೆಕ್ಷನ್ 49 ಪಿ ದೃಶ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಇದರ ಪ್ರಕಾರ ಮತದಾರರು ತಮ್ಮ ಮತ ಮತ್ತು ಬ್ಯಾಲೆಟ್ ಕಾಗದವನ್ನು ಹಿಂದಕ್ಕೆ ಪಡೆದುಕೊಳ್ಳುವ ಹಕ್ಕು ಹೊಂದಿದ್ದಾರೆ.
ಆದಾಗ್ಯೂ, ತಮಿಳುನಾಡಿನ ಕೆಲ ಸಚಿವರಿಂದ ಸರ್ಕಾರ್ ಚಿತ್ರಕ್ಕೆ ತೊಂದರೆ ಎದುರಾಗಿದೆ. ಈ ಚಿತ್ರದಲ್ಲಿ ಕೆಲ ದೃಶ್ಯಗಳಿಗೆ ಕತ್ತರಿ ಹಾಕುವಂತೆ ತಮಿಳುನಾಡು ವಾರ್ತಾ ಮತ್ತು ಪ್ರಚಾರ ಸಚಿವರು ಸೂಚನೆ ನೀಡಿದ್ದಾರೆ.ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸಿ. ವಿ. ಷಣ್ಮುಗಂ ಸರ್ಕಾರ್ ಚಿತ್ರತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.
Advertisement