
ಬೆಂಗಳೂರು: ನಮಗೆ ಯಾವುದೇ ಕಾರಣಕ್ಕೂ ಯಾರ ಮನಸ್ಸನ್ನೂ ನೋಯಿಸುವ ಉದ್ದೇಶವಿಲ್ಲ, ನಮಗೆ ಅದರ ಅಗತ್ಯವೂ ಇಲ್ಲ, ನಮ್ಮ ಯಜಮಾನ್ರು ವಿಷ್ಣುವರ್ಧನ್ ಸ್ಮಾರಕ ನಿರ್ಮಿಸುವುದಾದರೆ ಮೈಸೂರಿನಲ್ಲಿ ನಿರ್ಮಾಣ ಮಾಡಿ. ಅಲ್ಲಿ ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ಪ್ರಕ್ರಿಯೆ ಆರಂಭವಾಗಿದೆ, ಇಲ್ಲದಿದ್ದರೆ ಅಭಿಮಾನ್ ಸ್ಟುಡಿಯೋದಲ್ಲೇ ಮಾಡಿ. ನಮ್ಮದೇನೂ ವಿರೋಧವಿಲ್ಲ. ಆದರೆ ಯಾವುದೋ ಕಾರಣ ಕೊಟ್ಟು ಸುಮ್ಮನಿರಬಾರದು ಎಂದು ಭಾರತಿ ವಿಷ್ಣುವರ್ಧನ್ ಸರ್ಕಾರವನ್ನು ಕೋರಿಕೊಂಡಿದ್ದಾರೆ.
ವಿಷ್ಣುವರ್ಧನ್ ಸ್ಮಾರಕ ವಿಳಂಬವಾಗುತ್ತಿರುವ ಬಗ್ಗೆ ನಿನ್ನೆ ತಮ್ಮ ಪುತ್ರಿ ಕೀರ್ತಿ ಮತ್ತು ಅಳಿಯ ಅನಿರುದ್ಧ ಜೊತೆ ಪತ್ರಿಕಾಗೋಷ್ಠಿ ನಡೆಸಿದ ಅವರು, ನಮ್ಮ ಯಜಮಾನರು ತೀರಿಕೊಂಡು 9 ವರ್ಷಗಳಾದವು, ಸ್ಮಾರಕ ನಿರ್ಮಾಣ ಮಾಡುವ ವಿಚಾರವಾಗಿ ಹಲವು ಮುಖ್ಯಮಂತ್ರಿಗಳನ್ನು, ಅಧಿಕಾರಿಗಳನ್ನು ಭೇಟಿ ಮಾಡಿ ಮನವಿಗಳನ್ನು ಕೊಟ್ಟು ಸಾಕಾಗಿ ಹೋಗಿದೆ, ಸರ್ಕಾರ ಇನ್ನೂ ಕೂಡ ಈ ಬಗ್ಗೆ ತೀರ್ಮಾನಕ್ಕೆ ಬಂದಿಲ್ಲ, ಬರಲು ಸಾಧ್ಯವಾಗುತ್ತಿಲ್ಲ ಎಂದಾದರೆ ಏನರ್ಥ ಎಂದು ತಮ್ಮ ಅಸಮಾಧಾನ ಹೊರಹಾಕಿದರು.
ವಿಷ್ಣುವರ್ಧನ್ ಗೆ ಸ್ಮಾರಕವೇ ಬೇಕಾಗಿಲ್ಲ. ನನ್ನ ಯಜಮಾನ್ರು ಎಲ್ಲಿ ಇದ್ದರೂ ಎಲ್ಲರ ಹೃದಯದಲ್ಲೂ ಶಾಶ್ವತವಾಗಿ ಇರುತ್ತಾರೆ. ಅವರ ನಿಜವಾದ ಅಭಿಮಾನಿಗಳಿಗೆ ಎಷ್ಟು ವರ್ಷಗಳಾದರೂ ಅವರ ಮೇಲಿನ ಪ್ರೀತಿ, ಅಭಿಮಾನ ಕಡಿಮೆಯಾಗುವುದಿಲ್ಲ. ಅಷ್ಟಕ್ಕೂ ನಮ್ಮ ಲಾಭಕ್ಕೆ ಸ್ಮಾರಕ ನಿರ್ಮಾಣವನ್ನು ನಾವು ಕೇಳುತ್ತಿಲ್ಲ ಎಂದು ಹೇಳಿದರು.
ಅಭಿಮಾನ್ ಸ್ಟುಡಿಯೋದ ವಿಚಾರ ನ್ಯಾಯಾಲಯದಲ್ಲಿ ಇದೆ. ಅದು ಇತ್ಯರ್ಥ ಆಗುವುದು ಯಾವ ಕಾಲಕ್ಕೋ. ಇಲ್ಲಾ ಅಭಿಮಾನ್ ಸ್ಟುಡಿಯೋದಲ್ಲೇ ಆಗಬೇಕಾ ಅಲ್ಲೇ ಮಾಡಿ. ಅದನ್ನು ಬಿಟ್ಟು ಅನಾವಶ್ಯಕವಾಗಿ ಕಾಲ ಕಳೆಯಬೇಡಿ. ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಅಂತ್ಯಸಂಸ್ಕಾರದ ಬಳಿಕ ಸ್ಮಾರಕದ ಬಗ್ಗೆ ಯಾರು ಮಾತನಾಡಿರಲಿಲ್ಲ. ಇದರಿಂದಾಗಿ ನನಗೆ ತುಂಬಾ ಸಂಕಟವಾಗಿತ್ತು. ಬಳಿಕ ನಾನೇ 7 ಲಕ್ಷ ರೂ, ಖರ್ಚು ಮಾಡಿ ಸ್ವಂತ ಹಣದಲ್ಲಿ ಪುಣ್ಯಭೂಮಿ ನಿರ್ಮಿಸಿದ್ದೇವು. ಅಲ್ಲಿ ಆರೋಗ್ಯ ಶಿಬಿರ, ಸಾಂಸ್ಕೃತಿಕ ಚಟುವಟಿಕೆ ನಡೆಸಿ ವಿಷ್ಣುವರ್ಧನ್ ಪುಣ್ಯಭೂಮಿ ಇದೆ ಅಂತಾ ಜನರಿಗೆ ಗೊತ್ತಾಯಿತು ಎಂದು ನೋವು ತೋಡಿಕೊಂಡರು.
ವಿಷ್ಣುಗೆ ಮೈಸೂರು ಅಂದರೆ ತುಂಬಾ ಇಷ್ಟ ಹೀಗಾಗಿ ಮೈಸೂರಿನಲ್ಲಿ ಸ್ಮಾರಕ ಮಾಡಿ ಅಂತ ಕೇಳಿಕೊಳುತ್ತಿದ್ದೇವೆ ಅಷ್ಟೇ. ಅಭಿಮಾನ್ ಸ್ಟುಡಿಯೋದಲ್ಲಿ ಜಾಗ ಸಿಗದ ಕಾರಣಕ್ಕೆ ಸರ್ಕಾರವೇ ಮೈಸೂರಿನಲ್ಲಿ ಜಾಗ ಗೊತ್ತುಪಡಿಸಿದೆ. ಹೀಗಾಗಿ ನಾವು ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಒಪ್ಪಿಕೊಂಡಿದ್ದೇವೆ. ಅಲ್ಲಿಯೂ ಕೂಡ ಅಡ್ಡಿಯಾಗುತ್ತಿದೆ. ಈ ಜಾಗ ನಮಗೆ ಜಾಗಬೇಕು ಎಂದು ರೈತರು ಅಂತಿದ್ದಾರೆ. ಯಾರೊಬ್ಬರೂ ಕಾಳಜಿ ತೆಗೆದುಕೊಳ್ಳದಿದ್ದರೆ ಹೇಗೆ ಸಮಸ್ಯೆ ಬಗೆಹರಿಯುತ್ತದೆ ಎಂದು ಸರ್ಕಾರವನ್ನ ಪ್ರಶ್ನೆ ಮಾಡಿದರು.
ಕೊನೆಯದಾಗಿ, ಇದರಲ್ಲಿ ನಾನು ಹೆಚ್ಚು ಮಾತನಾಡುವುದಿಲ್ಲ, ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ, ಯಾರಿಗೆ ಏನನ್ನಿಸುತ್ತೋ ಏನೋ ಅದನ್ನು ಮಾಡಲಿ ಎಂದರು.
ಇದೇ ವೇಳೆ ಮಾತನಾಡಿದ ವಿಷ್ಣುವರ್ಧನ್ ಪುತ್ರಿ ಕೀರ್ತಿ, ಮೊದಲು ನಮ್ಮ ತಂದೆಯನ್ನು ಟಾರ್ಗೆಟ್ ಮಾಡುತ್ತಿದ್ದರು. ಈಗ ನಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಯಾಕ್ ಸರ್..ನಾವು ಒಂಬತ್ತು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದೇವೆ. ಅಂಬರೀಷ್ ಅಂಕಲ್ ಸಮಾಧಿ ಮಾಡಲು ಸುಮಲತಾ ಅವರ ಬಳಿ ಕೇಳಿ ಕಂಠೀರವ ಸ್ಟುಡಿಯೋ ಜಾಗ ಆಯ್ಕೆ ಮಾಡಿದರು, ನಮಗೆ ಮಾತ್ರ ಯಾಕೆ ಎಲ್ಲಾ ಕಚೇರಿ ಸುತ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 9 ವರ್ಷಗಳಿಂದ ಮುಖ್ಯಮಂತ್ರಿಗಳಿಗೆ ಮನವಿ ಪತ್ರಗಳನ್ನು ನೀಡುತ್ತಲೇ ಬಂದಿದ್ದೇವೆ. ಅಪ್ಪನ ಸ್ಮಾರಕದ ಯಾರೊಬ್ಬರೂ ಮಾತನಾಡಲಿಲ್ಲ. ಸಿಎಂ ಗಳು ಬದಲಾಗುತ್ತಾ ಬಂದರೇ ಹೊರತು, ಯಾರೊಬ್ಬರೂ ಸ್ಮಾರಕದ ಬಗ್ಗೆ ಯೋಚನೆ ಮಾಡಲಿಲ್ಲ. ಕುಮಾರಸ್ವಾಮಿ ಅವರು ಈಗ ನೀಡಿರುವ ಭರವಸೆಯನ್ನು ಈ ಹಿಂದೆಯೇ ನೀಡಬಹುದಿತ್ತು. ನಮ್ಮನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸಿದರು. ಸ್ಮಾರಕ ನಿರ್ಮಾಣ ಮಾಡಿದರೆ ನಮಗೆ ಏನು ಸಿಗುತ್ತದೆ. ನಾವೇನು ಅಲ್ಲಿಯೇ ಇರುತ್ತೀವಾ? ಕೆಲವರು ಅಪ್ಪಾಜಿಯನ್ನು ಕಡೆಗಣಿಸುತ್ತಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡುವವರು ನಮ್ಮ ಜೊತೆಗೆ ಕುಳಿತು ಚರ್ಚೆ ಮಾಡಲಿ. ಪರಿಸ್ಥಿತಿ ಏನು ಎನ್ನುವುದು ಅರ್ಥವಾಗುತ್ತದೆ ಎಂದು ಹೇಳಿದರು.
ವಿಷ್ಣು ಸ್ಮಾರಕದ ಬಗ್ಗೆ ತಾವು ನೀಡಿದ್ದ ಹೇಳಿಕೆ ವಿವಾದವೆದ್ದ ಹಿನ್ನಲೆಯಲ್ಲಿ ನಿನ್ನೆ ಮಾತನಾಡಿದ ನಟ ಅನಿರುದ್ಧ, ನಾನು ಸಿಎಂ ಹೆಚ್ ಡಿ ಕುಮಾರಸ್ವಾಮಿ ಅಥವಾ ಬೇರೆ ಸಿಎಂಗಳ ವಿರುದ್ಧ ವೈಯಕ್ತಿಕವಾಗಿ ಹೇಳಿದ್ದಲ್ಲ, ನಮಗಾದ ನೋವು, ಅನ್ಯಾಯದ ಬಗ್ಗೆ ಮಾತನಾಡುವಾಗ ಉದ್ವೇಗದಿಂದ ಆ ಪದ ಬಳಕೆ ಬಂತು. ಇದರಿಂದ ಸಿಎಂ ಕುಮಾರಸ್ವಾಮಿಯವರಿಗೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ಮುಖ್ಯಮಂತ್ರಿಗಳ ಕ್ಷಮೆ ಕೋರುತ್ತೇನೆ ಎಂದರು.
ಅಪ್ಪಾಜಿ ಸ್ಮಾರಕ ನಿರ್ಮಾಣ ಮೈಸೂರಿನಲ್ಲಿ ಆಗುವ ಬಗ್ಗೆ ಸರ್ಕಾರ ಸ್ಪಷ್ಟ ನಿಲುವು ಮತ್ತು ಆ ಜಾಗದ ಸಮಸ್ಯೆ ಇತ್ಯರ್ಥಪಡಿಸುವುದಕ್ಕೆ ಡಿಸೆಂಬರ್ 30ರವರೆಗೆ ಗಡುವು ನೀಡುತ್ತೇವೆ. ಆ ನಂತರವೂ ಯಾವುದೇ ಮುಂದಡಿಯಿಡದಿದ್ದರೆ ಅಭಿಮಾನಿಗಳ ಜೊತೆ ಹೋರಾಟಕ್ಕೆ ಮುಂದಾಡುತ್ತೇವೆ ಎಂದರು.
Advertisement