ವಿಷ್ಣು ಸ್ಮಾರಕ ಮೈಸೂರಲ್ಲಿಯೇ ಆಗಲಿ, ಇಲ್ಲದಿದ್ದರೆ ಬೇಡ: ಭಾರತಿ ವಿಷ್ಣುವರ್ಧನ್

ನಟ ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣ ವಿಚಾರ ಕುರಿತು ಚರ್ಚಿಸಲು ಶಾಸಕ, ನಿರ್ಮಾಪಕರ ಸಂಘದ ...
ಭಾರತಿ ವಿಷ್ಣುವರ್ಧನ್
ಭಾರತಿ ವಿಷ್ಣುವರ್ಧನ್

ಬೆಂಗಳೂರು: ನಟ ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣ ವಿಚಾರ ಕುರಿತು ಚರ್ಚಿಸಲು ಶಾಸಕ, ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಹಾಗೂ ನಿರ್ಮಾಪಕ ಕೆ. ಮಂಜು ಭಾರತಿ ವಿಷ್ಣುವರ್ಧನ್‌ ಅವರ ನಿವಾಸಕ್ಕೆ ತೆರಳಿದ್ದರು.  ಈ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರ ಹುಟ್ಟೂರು ಮತ್ತು ಅವರಿಗೆ ಬಹಳ ಅಚ್ಚುಮೆಚ್ಚಾಗಿರುವ ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಿಸುವಂತೆ ವಿಷ್ಣುವರ್ಧನ್ ಕುಟುಂಬದವರು ಒತ್ತಾಯಿಸಿದ್ದಾರೆ ಎಂದು ಮುನಿರತ್ನ ತಿಳಿಸಿದ್ದಾರೆ.

ನಿನ್ನೆ ಭಾರತಿ ವಿಷ್ಣುವರ್ಧನ್ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿಯೇ ವಿಷ್ಣು ಸ್ಮಾರಕ ನಿರ್ಮಿಸುವಂತೆ ಕುಟುಂಬದವರು  ಶಾಸಕನಾಗಿರುವ ನನ್ನ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ ಎಂದರು.

ವಿಷ್ಣುವರ್ಧನ್‌ ಕುಟುಂಬ ಸ್ಮಾರಕ ನಿರ್ಮಾಣ ಕುರಿತು ಮುಖ್ಯಮಂತ್ರಿಗೆ ಮನವಿ ಪತ್ರ ಬರೆದು, ನನಗೆ ನೀಡಿದ್ದಾರೆ. ಹಾಗಾಗಿ ಅದರಲ್ಲಿ ಏನಿದೆ ಎಂದು ನಾನು ಓದಲು ಹೋಗುವುದಿಲ್ಲ.  ಈ ಪತ್ರವನ್ನು ಮುಖ್ಯಮಂತ್ರಿಗಳಿಗೆ ತಲುಪಿಸಿ, ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸುತ್ತೇನೆ. ಸ್ಮಾರಕ ನಿರ್ಮಾಣ ವಿಚಾರವಾಗಿ ಚಿತ್ರರಂಗ ಹಾಗೂ ಅಭಿಮಾನಿಗಳ ಸಲಹೆ ಪಡೆದುಕೊಳ್ಳುತ್ತೇವೆ. ಆದರೆ, ಕುಟುಂಬದ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ. ಅದೇ ಅಂತಿಮ. ಈಗಾಗಲೇ ನಿರ್ಮಾಣವಾಗಿರುವ ಡಾ. ರಾಜ್‌ ಹಾಗೂ ಅಂಬರೀಶ್‌ ಸ್ಮಾರಕದಂತೆಯೇ, ವಿಷ್ಣುವರ್ಧನ್‌ ಸ್ಮಾರಕವೂ ನಿರ್ಮಾಣ ಆಗಬೇಕು, ಮೂವರಿಗೂ ಸಮಾನ ಪ್ರಾಶಸ್ತ್ಯ ನೀಡಬೇಕೆಂಬುದು ನಮ್ಮ ಆಸೆ' ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಭಾರತಿ ವಿಷ್ಣುವರ್ಧನ್‌, "ಅಭಿಮಾನ್‌ ಸ್ಟುಡಿಯೋ ಜಾಗ ವಿವಾದ ಕೋರ್ಟ್‌ನಲ್ಲಿದೆ. ಅದು ಬಗೆಹರಿಯದ ವ್ಯಾಜ್ಯ. ಹೀಗಾಗಿಯೇ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣವಾಗಲಿ ಎಂಬುದು ನಮ್ಮ ಆಶಯ. ಅದಕ್ಕಾಗಿ ಈಗಾಗಲೇ ಗುದ್ದಲಿ ಪೂಜೆ ಕೂಡ ಆಗಿದೆ. ಆದರೆ, ಅಲ್ಲೂ ಒಂದಷ್ಟು ಕಾನೂನು ಸಮಸ್ಯೆಗಳು ಬಂದಿದ್ದರಿಂದ  ಕೆಲಸ ನಿಂತು ಹೋಯ್ತು. ಅದನ್ನೆಲ್ಲ ಬಗೆಹರಿಸಿ ಸ್ಮಾರಕ ನಿರ್ಮಿಸಿದರೆ ಸಾಕು. ಈ ವಿಚಾರವನ್ನು ಮುಂದುವರಿಸಲು ನಮಗೂ ಇಷ್ಟವಿಲ್ಲ. ಆದಷ್ಟು ಬೇಗ ಸರಕಾರ ಈ ಬಗ್ಗೆ ನಿರ್ಧರಿಸಲಿ' ಎಂದರು.

ಸ್ಮಾರಕ ನಿರ್ಮಾಣಕ್ಕೆ ಮೈಸೂರೇ ಕಡೆ ಆಯ್ಕೆ ಎಂಬುದು ನಮ್ಮ ಕುಟುಂಬದ ನಿರ್ಧಾರ. ಇಲ್ಲಾ ಅಂದ್ರೆ ಸ್ಮಾರಕ ನಿರ್ಮಾಣ ಮಾಡುವ ಯೋಚನೆಯೇ ಬೇಡ ಎಂದು ವಿಷ್ಣುವರ್ಧನ್‌ ಮಗಳು ಕೀರ್ತಿ ಹೇಳಿದರು.

ಇನ್ನೊಂದೆಡೆ ಅಭಿಮಾನ್‌ ಸ್ಟುಡಿಯೋದ ಮಾಲೀಕತ್ವ ಹೊಂದಿರುವ ಹಿರಿಯ ನಟ ದಿವಂಗತ ಬಾಲಕೃಷ್ಣ ಅವರ ಪುತ್ರ ಗಣೇಶ್‌, "ವಿಷ್ಣು ಸಮಾಧಿ ನಿರ್ಮಾಣಕ್ಕೆ 50/150 ಅಳತೆಯ ಜಾಗವನ್ನು ಉಚಿತವಾಗಿ ನೀಡಲು ಸಿದ್ಧ' ಎಂದು ಘೋಷಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಗಣೇಶ್‌, "ಇಲ್ಲಿವರೆಗೆ ಈ ಸ್ಟುಡಿಯೋ ಮಾಲೀಕತ್ವದ ವಿವಾದ ಕೋರ್ಟ್‌ನಲ್ಲಿತ್ತು. ಈಗ ವ್ಯಾಜ್ಯ ಬಗೆಹರಿದಿದ್ದು, ಸಂಪೂರ್ಣ ಮಾಲೀಕತ್ವ  ನನಗೆ ಬಂದಿದೆ. ಹಾಗಾಗಿ, ಸ್ಮಾರಕ ನಿರ್ಮಾಣಕ್ಕೆ ಬೇಕಾದ ಜಾಗವನ್ನು ಉಚಿತವಾಗಿ ನೀಡಲಿದ್ದೇನೆ. ಆದರೆ, ಸರ್ಕಾರ ನಮಗೆ ಸಹಕಾರ ನೀಡಬೇಕು' ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com