
ಬೆಂಗಳೂರು: ನಟ ದುನಿಯಾ ವಿಜಯ್ ಬದುಕಿನ ದುನಿಯಾ ಬೀದಿಗೆ ಬಂದಿದೆ. ಪಾನಿಪುರಿ ಕಿಟ್ಟಿ ಅಣ್ಣನ ಮಗನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ನಟ ದುನಿಯಾ ವಿಜಯ್ ಜೈಲು ಪಾಲಾಗಿದ್ದಾಗ ಅವರ ಮನೆಯಲ್ಲಿ ನಡೆದ ಗಲಾಟೆಯಲ್ಲಿ ಮೊದಲ ಪತ್ನಿ ನಾಗರತ್ನ ಅವರೇ 2 ನೇ ಪತ್ನಿ ಕೀರ್ತಿಗೌಡ ಅವರ ಮೇಲೆ ಏಕಾಏಕಿ ದಾಳಿ ನಡೆಸಿ ಥಳಿಸಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
ದುನಿಯಾ ವಿಜಯ್ ಮನೆಯಲ್ಲಿ ಕೀರ್ತಿ ಗೌಡ ಮನೆಯವರು ಹಾಗೂ ಇತರ ಕೆಲವರೊಂದಿಗೆ ಕುಳಿತಿದ್ದಾಗ ಮೊದಲ ಪತ್ನಿ ನಾಗರತ್ನ ಅವರು ಏಕಾಏಕಿ ಮನೆಗೆ ನುಗ್ಗಿ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಅದು ಮಾಧ್ಯಮಗಳಿಗೆ ಸಿಕ್ಕಿದೆ.
ದುನಿಯಾ ವಿಜಯ್ ಜೈಲುಪಾಲಾಗಿದ್ದಾಗ ಮಕ್ಕಳನ್ನು ವಿಚಾರಿಸಿಕೊಂಡು ಬರಲೆಂದು ನಾನು ಹೋಗಿದ್ದಾಗ ಕೀರ್ತಿಗೌಡ ಅವಾಚ್ಯ ಶಬ್ದಗಳಿಂದ ಬೈದು ನನ್ನ ಮೇಲೆ ಹಲ್ಲೆ ನಡೆಸಿದಳು ಎಂದು ದಾಳಿ ನಡೆಸಿದ ಬಳಿಕ ನಾಗರತ್ನ ಅವರು ಗಿರಿನಗರ ಠಾಣೆಗೆ ತೆರಳಿ ದೂರು ನೀಡಿದ್ದರು.
ನಾಗರತ್ನ ಹಲ್ಲೆ ನಡೆಸಿದ ವೇಳೆ ಪುತ್ರಿ ಮೋನಿಕಾ ಮನೆಯೊಳಗಿದ್ದರು. ಮನೆಯಲ್ಲಿದ್ದ ಇತರರು ನಾಗರತ್ನ ಅವರನ್ನು ತಡೆದಿದ್ದರು. ಈ ಘಟನೆ ಸೆಪ್ಟೆಂಬರ್ 23ರಂದು ನಡೆದಿತ್ತು. ಆದರೆ ಘಟನೆಯನ್ನು ಮರೆಮಾಚಿ ಸುಳ್ಳು ಹೇಳಿ ಸಿಸಿಟಿವಿ ಕ್ಯಾಮರಾದಲ್ಲಿನ ದೃಶ್ಯಗಳನ್ನು ಮಗಳು ಮೋನಿಕಾ ತೆಗೆದುಹಾಕಿ ಬೀರುವಿನಲ್ಲಿಟ್ಟಿದ್ದರು. ಇತ್ತೀಚೆಗೆ ಮಗಳು ಮೋನಿಕಾ ಅದನ್ನು ತೆಗೆದುಕೊಂಡು ಬರಲೆಂದು ತಂದೆ ವಿಜಯ್ ಮನೆಗೆ ಹೋಗಿದ್ದಾಗ ಕಣ್ಣಿಗೆ ಬಿದ್ದಿದೆ. ಅದೀಗ ಮಾಧ್ಯಮಗಳ ಮುಂದೆ ಬಿಡುಗಡೆಯಾಗಿದೆ.
ವಿಜಯ್ ಅವರ ಸ್ನೇಹಿತ ಮಂಜು ಮತ್ತು ವಕೀಲರು ಇಂದು ಸುದ್ದಿಗೋಷ್ಠಿ ನಡೆಸಿ ನಾಗರತ್ನ ಅವರು ಸುಳ್ಳು ದೂರು ನೀಡಿ ವಿಜಯ್ ಅವರ ಮೇಲೆ ಸಂಚು ನಡೆಸಿದ್ದಾರೆ. ಅವರನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸದ್ಯ ನಾಗರತ್ನ ಮತ್ತು ಪುತ್ರಿ ಮೋನಿಕಾ ಅವರಿಗಾಗಿ ಗಿರಿನಗರ ಠಾಣೆಯ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Advertisement