'ಲವ್ವರ್ ಬಾಯ್' ಪಾತ್ರಕ್ಕಷ್ಟೆ ಸೀಮಿತ, ದ್ರಾಕ್ಷಿ ಉರುಳಿಸಿದ್ದು ಒಂದೇ ಸಲ: ರವಿಚಂದ್ರನ್ ಹರಟೆ

“ನನ್ನನ್ನು ಎಲ್ಲರೂ ಲವ್ವರ್ ಬಾಯ್ ಅಂತ ಕರೆದು ಪ್ರೇಮಿಯ ಪಾತ್ರಕ್ಕಷ್ಟೆ ಸರಿ ಎಂಬಂತೆ ಬಿಂಬಿಸಿದ್ದಾರೆ. ಆದರೆ ನಾನು ದ್ರಾಕ್ಷಿ ಉರುಳಿಸಿದ್ದು....
ರವಿಚಂದ್ರನ್
ರವಿಚಂದ್ರನ್
ಬೆಂಗಳೂರು: “ನನ್ನನ್ನು ಎಲ್ಲರೂ ಲವ್ವರ್ ಬಾಯ್ ಅಂತ ಕರೆದು ಪ್ರೇಮಿಯ ಪಾತ್ರಕ್ಕಷ್ಟೆ ಸರಿ ಎಂಬಂತೆ ಬಿಂಬಿಸಿದ್ದಾರೆ. ಆದರೆ ನಾನು ದ್ರಾಕ್ಷಿ ಉರುಳಿಸಿದ್ದು ಒಂದೇ ಸಲ’ ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ್ದಾರೆ.
'ಪಡ್ಡೆಹುಲಿ' ಬಿಡುಗಡೆಯ ಸುದ್ದಿಗೋಷ್ಠಿಯ ಸಂದರ್ಭದಲ್ಲಿ ಲೋಕಾಭಿರಾಮವಾಗಿ, ಖುಷಿ ಖುಷಿಯಾಗಿ ಎಲ್ಲರ ಜತೆ ಮಾತನಾಡಿದ ರವಿಮಾಮ, ತಮ್ಮ ಬಣ್ಣದ ಬದುಕು, ಶಿಕ್ಷಣ ಮೊದಲಾದ ವಿಷಯಗಳ ಬಗ್ಗೆ ಹರಟಿದರು.
“ಹೀರೋಯಿನ್ ಹೊಕ್ಕಳಿಗೆ ದ್ರಾಕ್ಷಿ ಉರುಳಿಸಿದ್ದು ಕೇವಲ ಒಂದೇ ಒಂದು ಚಿತ್ರದಲ್ಲಿ.  ಆದರೆ ಆ ದೃಶ್ಯ ಜನರ ಮನದಲ್ಲಿ ಎಷ್ಟರಮಟ್ಟಿಗೆ ಅಚ್ಚಾಗಿದೆ ಎಂದರೆ, ‘ಇಂತಹ ಚಿತ್ರಗಳೇ ರವಿಚಂದ್ರನ್ ಅವರಿಗೆ ಸೈ’ ಎಂದು ಭಾವಿಸಿಬಿಟ್ಟಿದ್ದಾರೆ.  ಆದರೆ ನಾನು ಎಲ್ಲ ಬಗೆಯ ಪಾತ್ರಗಳಿಗೂ ಸಿದ್ಧ.  ಪಡ್ಡೆಹುಲಿಯಲ್ಲಿ ತಂದೆಯಾಗಿದ್ದೇನೆ, ತಾತನ ಪಾತ್ರ ನಿರ್ವಹಣೆಗೂ ಆಫರ್ ಬಂದಿದೆ” ಎಂದರು.
ಶಿಕ್ಷಣದ ಬುನಾದಿ ಅತ್ಯಗತ್ಯ
“ನಾನಂತೂ ಓದಲಿಲ್ಲ. ಆದರೂ ತಂದೆಯ ಹಾಗೂ ಗುರು ಹಿರಿಯರ ಆಶೀರ್ವಾದದಿಂದ ಚಂದನವನದಲ್ಲಿ ನಾಯಕನಾಗಿ ನಟಿಸುವ ಅವಕಾಶ ಸಿಕ್ಕಿತು. ‘ರವಿಚಂದ್ರನ್ ಓದದೇ ಇದ್ದರೂ ಹೀರೋ ಆಗಲಿಲ್ಲವೇ’ಎಂದು ಇಂದಿನ ಯುವಜನತೆ ಶಿಕ್ಷಣವನ್ನು ಕಡೆಗಣಿಸಬಾರದು.  ಪ್ರತಿಯೊಬ್ಬರ ಜೀವನದಲ್ಲೂ ಶಿಕ್ಷಣ ಅತ್ಯಗತ್ಯ.  ನನಗೆ ಬರವಣಿಗೆಯಲ್ಲಿ ಆಸಕ್ತಿ ಇದೆಯಾದರೂ, ಓದುವ ಸಮಯದಲ್ಲಿ ಸರಿಯಾಗಿ ಗಮನ ನೀಡದ ಕಾರಣ ಕಾಗುಣಿತ ಲೋಪವಾಗುತ್ತದೆ.  ಗಿಟಾರ್ ಕಲಿಕೆಯನ್ನೂ ಅರ್ಧಕ್ಕೇ ನಿಲ್ಲಿಸಿದ್ದರಿಂದ ಬಹುದೊಡ್ಡ ನಷ್ಟವಾಯಿತು ಅಂತ ಈಗ ಗೊತ್ತಾಗುತ್ತಿದೆ.  ಹೀಗಾಗಿ ಎಲ್ಲ ಮುಗಿದ ಮೇಲೆ ಪಶ್ಚಾತ್ತಾಪ ಪಡುವ ಬದಲು ತಕ್ಕ ಸಮಯದಲ್ಲಿ ಸರಿಯಾಗಿ ಓದಬೇಕು” ಎಂದು ರವಿಚಂದ್ರನ್ ಹೇಳಿದರು.
ಮತ್ತೆ ಹೀರೋ ಆಗ್ತೀನಿ!
ಈವರೆಗೂ ಹಲವು ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿದ್ದೀರಿ. ಮುಂದೆ ಯಾವ ಬಗೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುತ್ತೀರಿ ಎಂಬ ಪ್ರಶ್ನೆಗೆ, ‘ಪಡ್ಡೆಹುಲಿ’ ಚಿತ್ರದಲ್ಲಿ ತಂದೆಯ ಪಾತ್ರದಲ್ಲಿ ನಟಿಸಿದ್ದೇನೆ. ಇದಕ್ಕೂ ಮೊದಲು ಮಾಣಿಕ್ಯದಲ್ಲೂ ಸುದೀಪ್ ತಂದೆಯಾಗಿ ಕಾಣಿಸಿಕೊಂಡಿದ್ದೇನೆ.  ಆದರೆ ಇನ್ನು ಮುಂದೆ ನಿರ್ಮಾಪಕರು ನನಗೆ ಹೀರೋ ಪಾತ್ರವನ್ನೇ ಕೊಡುತ್ತಾರೆ” ಎಂದು ರವಿಚಂದ್ರನ್ ಹೇಳಿದರು. 
ಮಾತಿನ ನಡುವೆ ರಾಜಕೀಯ ಪ್ರವೇಶಿಸಲು ಬಯಸುತ್ತೀರಾ ಎಂಬ ಪ್ರಶ್ನೆಗೆ ‘ಖಂಡಿತ ಇಲ್ಲ.  ರಾಜಕಾರಣಕ್ಕೂ ನನಗೂ ಆಗಿಬರೋದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಮಗಳಿಗಾಗಿ ಕವನ ಬರೆದ ಕ್ರೇಜಿ
ಈ ವಾರ ‘ಪಡ್ಡೆಹುಲಿ’ ಚಿತ್ರದ ಬಿಡುಗಡೆ, ಮುಂದಿನ ತಿಂಗಳು ಮೇ 29ರಂದು ಮಗಳ ಮದುವೆ ಇರುವ ಕಾರಣ ರವಿಚಂದ್ರನ್ ಬಹಳ ಬ್ಯುಸಿ.  ಇದರ ನಡುವೆಯೇ ಮಗಳು ಗೀತಾಂಜಲಿಗಾಗಿ ಕವನವೊಂದನ್ನು ರಚಿಸಿ ಸಂಗೀತ ಸಂಯೋಜಿಸಿದ್ದಾರೆ. ಗೌತನ್ ಶ್ರೀವಾತ್ಸವ್ ಹಾಡಿದ್ದಾರೆ.’ಬೆಳೆದ ಮೇಲೆ ನೀನು ನಾನು ಮಗುವಾದೆ. . . ಯಾಕೋ, ಏನೋ ತಿಳಿಯದೇನೆ ಚಡಪಡಿಸಿದೆ ಮನಸು. . ನೋವು, ನಲಿವ ಜೊತೆಗೆ ಸಂಭ್ರಮ ಅಡಗಿದೆ.  ಓ ನನ್ನ ಮಗಳೇ” ಎಂಬ ಹಲವು ಭಾವನೆಗಳು ಮಿಶ್ರವಾದ ಹಾಡು ಹೃದಯ ಮುಟ್ಟುವಂತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com