ನಟ ವಿಶಾಲ್
ಸಿನಿಮಾ ಸುದ್ದಿ
ಕಾಲಿವುಡ್ ನಟ ವಿಶಾಲ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್
ಆದಾಯ ತೆರಿಗೆ ಇಲಾಖೆ ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲಿವುಡ್ ನಟ ವಿಶಾಲ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಲಾಗಿದೆ.
ಚೆನ್ನೈ: ಚಿತ್ರ ನಿರ್ಮಾಣ ಸಂಸ್ಥೆ ವಿಶಾಲ್ ಫಿಲ್ಮ್ ಕಾರ್ಖಾನೆ ಐದು ವರ್ಷಗಳಿಂದಲೂ ಟಿಡಿಎಸ್ ಪಾವತಿಸದಿರುವ ಬಗ್ಗೆ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ -11( ಎಸಿಎಂಎಂ-11) ಗೆ ಹಾಜರಾಗದ ಕಾಲಿವುಡ್ ನಟ ವಿಶಾಲ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಲಾಗಿದೆ.
ಕಳೆದ ಐದು ವರ್ಷಗಳಿಂದ ನೌಕರರಿಂದ ಕಡಿತಗೊಳಿಸಲಾದ ಟಿಡಿಎಸ್ ನ್ನು ಸರ್ಕಾರಿ ಖಾತೆಗೆ ರವಾನಿಸದ ವಾಡಪಾಲನಿಯಲ್ಲಿರುವ ವಿಶಾಲ ಫಿಲ್ಮ್ ಕಾರ್ಖಾನೆಗೆ ಸಂಬಂಧಿತ ಪ್ರಕರಣದಲ್ಲಿ ವಿಶಾಲ್ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದ್ದು, ಬಂಧನದ ಭೀತಿಯಲ್ಲಿದ್ದಾರೆ. 2017ರಲ್ಲಿ ಆದಾಯ ತೆರಿಗೆ ಇಲಾಖೆಯಿಂದ ದಾಳಿ ಕೂಡಾ ನಡೆಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸಮನ್ಸ್ ನ್ನು ಸ್ವೀಕರಿಸಿಲ್ಲ ಎಂದು ವಿಶಾಲ್ ಪರ ವಕೀಲರು ನ್ಯಾಯಾಧೀಶ ಮಲರ್ ಮತ್ತಿ ಮುಂದೆ ವಾದಿಸಿದರು. ಆದಾಗ್ಯೂ, ಸಮನ್ಸ್ ಸ್ವೀಕರಿಸಿಲ್ಲ ಎಂದು ಆರೋಪಿ ಪರ ವಕೀಲರು ಹೇಳುತ್ತಿದ್ದರೂ ಹಾಜರಾತಿ ಪತ್ರ ಹಾಗೂ ಆರೋಪಿ ಅನುಪಸ್ಥಿತಿ ಅರ್ಜಿಯನ್ನು ಹೇಗೆ ಸಲ್ಲಿಸಿದರು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಎಂ ಶೀಲಾ ವಾದಿಸಿದರು.
ಎರಡನೇ ಬಾರಿಗೆ ವಿಶಾಲ್ ಅವರಿಗೆ ಸಮನ್ಸ್ ಕಳುಹಿಸಿದ್ದರೂ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಜಾಮೀನು ರಹಿತ ವಾರೆಂಟ್ ನೀಡಬೇಕೆಂದು ಪಬ್ಲಿಕ್ ಪ್ರಾಸಿಕ್ಯೂಟರ್ ಮನವಿ ಮಾಡಿಕೊಂಡರು.
ವಾದ- ವಿವಾದ ಆಲಿಸಿದ ನ್ಯಾಯಾಧೀಶರು, ವಿಶಾಲ್ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿ, ಮುಂದಿನ ವಿಚಾರಣೆಯನ್ನು ಆಗಸ್ಟ್ 28ಕ್ಕೆ ಮುಂದೂಡಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ