ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಗಾಂಧಿ ಕುರಿತ ಕನ್ನಡದ 2 ಚಿತ್ರಗಳ ಪ್ರದರ್ಶನ

ನಗರದಲ್ಲಿ ಫೆ. 21ರಿಂದ ನಡೆಯಲಿರುವ 11ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಈ ಬಾರಿ ಹಲವು ವಿಶೇಷಗಳನ್ನು ತೆರೆಗೆ ತರಲು ಸಜ್ಜಾಗಿದೆ.
ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಗಾಂಧಿ ಕುರಿತ ಕನ್ನಡದ 2 ಚಿತ್ರಗಳ ಪ್ರದರ್ಶನ
ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಗಾಂಧಿ ಕುರಿತ ಕನ್ನಡದ 2 ಚಿತ್ರಗಳ ಪ್ರದರ್ಶನ
ಬೆಂಗಳೂರು: ನಗರದಲ್ಲಿ ಫೆ. 21ರಿಂದ ನಡೆಯಲಿರುವ 11ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಈ ಬಾರಿ ಹಲವು ವಿಶೇಷಗಳನ್ನು ತೆರೆಗೆ ತರಲು ಸಜ್ಜಾಗಿದೆ. 
ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಚಿತ್ರೋತ್ಸವದಲ್ಲಿ  ಗಾಂಧೀಜಿ ಕುರಿತ ವಿಶೇಷ ಚಿತ್ರ ಪ್ರದರ್ಶನ ಏರ್ಪಡಿಸಲಾಗಿದ್ದು, ಅದರಲ್ಲಿ ಕನ್ನಡದ ಎರಡು ಚಿತ್ರಗಳು ಸ್ಥಾನ ಪಡೆದುಕೊಂಡಿವೆ. 
ಕನ್ನಡದ ನಾಗರತ್ನ ಮಾಧವರಾವ್ ಜೋಷಿ ನಿರ್ದೇಶನದ 'ಗಾಂಧಿ ದೇವಿ' ಹಾಗೂ ಗಿರೀಶ್ ಕಾಸರವಳ್ಳಿ ನಿರ್ದೇಶನದ 'ಕೂರ್ಮಾವತಾರ' ಚಿತ್ರಗಳು ಈ  ವಿಭಾಗದಲ್ಲಿ ಪ್ರದರ್ಶನಗೊಳ್ಳಲಿವೆ.  ಫಿರೋಜ್‍ ಅಬ್ಬಾಸ್‍ ಖಾನ್‍ ಅವರ 'ಗಾಂಧಿ, ಮೈ ಫಾದರ್' ಹಾಗೂ ಶ್ಯಾಮ್ ಬೆನೆಗಲ್‍ ಅವರ 'ದಿ ಮೇಕಿಂಗ್ ಆಫ್‍ ಮಹಾತ್ಮಾ' ಚಿತ್ರಗಳು ಕೂಡ ಈ ಪಟ್ಟಿಯಲ್ಲಿವೆ. 
ಇತ್ತೀಚೆಗೆ ನಿಧನರಾದ ಹಿರಿಯ ನಟ ಅಂಬರೀಷ್‍ ಅವರಿಗೆ ಚಿತ್ರೋತ್ಸವದಲ್ಲಿ ವಿಶೇಷ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಅವರ ಪ್ರಥಮ ಚಿತ್ರ 'ನಾಗರಹಾವು', 'ಅಂತ', 'ಪಡುವರಹಳ್ಳಿ ಪಾಂಡವರು', 'ಏಳು ಸುತ್ತಿನ ಕೋಟೆ', 'ರಂಗನಾಯಕಿ' ಚಿತ್ರಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುತ್ತಿದೆ.  ಈ ಚಿತ್ರಗಳು ಇಂದಿಗೂ ಕೂಡ ಜನಮಾನಸದಲ್ಲಿ ನೆಲೆಯೂರಿದ್ದು, ಅವುಗಳನ್ನು ಮತ್ತೊಮ್ಮೆ ಜನರ ಮುಂದೆ ತರುವ ಮೂಲಕ ಅಂಬರೀಷ್‍ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದು ಕಾರ್ಯಕ್ರಮದ ಆಯೋಜಕರು ಮಾಹಿತಿ ನೀಡಿದ್ದಾರೆ. 
ಯುಎನ್ಐ ಕನ್ನಡ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್.ವಿದ್ಯಾಶಂಕರ್, ಇತ್ತೀಚೆಗೆ ನಿಧನರಾದ ಕನ್ನಡದ ಚಿತ್ರ ನಿರ್ಮಾಪಕ ಎಂ. ಭಕ್ತವತ್ಸಲ, ಗೀತ ರಚನೆಕಾರ ಎಂ.ಎನ್.ವ್ಯಾಸರಾವ್ ಹಾಗೂ ಹಿರಿಯ ನಟ ಸಿ.ಎಚ್. ಲೋಕನಾಥ್ ಅವರ ಪಾತ್ರವಿರುವ ತಲಾ ಒಂದು ಚಿತ್ರವನ್ನು ಪ್ರದರ್ಶಿಸಲಾಗುವುದು . ಜೊತೆಗೆ, ಸ್ವೀಡನ್ ನಿರ್ದೇಶಕ ಇಂಗ್ಮಾರ್ ಬರ್ಗ್ ಮ್ಯಾನ್,  ಕೇರಳದ ನಿರ್ದೇಶಕ ಶಾಜಿ ಕರುಣ್ ಅವರ ಸ್ಮರಣಾರ್ಥ ಚಿತ್ರಗಳ ಪ್ರದರ್ಶನ ಕೂಡ ಏರ್ಪಡಿಸಲಾಗಿದೆ.  ವಾಣಿಜ್ಯ ಚಿತ್ರಗಳ ವರ್ಗದ ಚಿತ್ರಗಳನ್ನು ಚಲನಚಿತ್ರ ವಾಣಿಜ್ಯ ಮಂಡಳಿಯೇ ಆಯ್ಕೆ ಮಾಡಿವೆ. ಕನ್ನಡ ಚಿತ್ರಗಳ ಸ್ಪರ್ಧೆ ವಿಭಾಗಕ್ಕೆ ಮಾತ್ರ ಪ್ರತ್ಯೇಕ ಆಯ್ಕೆ  ಸಮಿತಿ ರಚಿಸಲಾಗಿತ್ತು. ಈ ವಿಭಾಗಕ್ಕೆ ಬಂದಿದ್ದ 68 ಚಿತ್ರಗಳ ಪೈಕಿ ಸಮಿತಿ 14 ಚಿತ್ರಗಳನ್ನು ಅಂತಿಮಗೊಳಿಸಿದೆ ಎಂದರು. 
ಫೆ.21ರಂದು ವಿಧಾನಸೌಧದ ಬ್ಯಾಂಕ್ವೆಟ್‍ ಹಾಲ್‍ನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನಂತರ, ನಗರದ ಒರಾಯನ್‍ ಮಾಲ್ ನಲ್ಲಿ ಫೆ.28ರವರೆಗೆ ವಿವಿಧ ದೇಶಗಳ ಸುಮಾರು 200 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇದರಲ್ಲಿ ಆಸ್ಕರ್ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೆ ಭಾಜನವಾಗಿರುವ ಅಪರೂಪದ ಚಿತ್ರಗಳಿಗೆ ಅವಕಾಶ ಕಲ್ಪಿಸಲಾಗಿದೆ. 'ತೆರೆಮರೆಯ ಹೀರೋಗಳು' ವಿಭಾಗದಡಿ ಈಶಾನ್ಯ ಭಾರತ,  ಲಕ್ಷದ್ವೀಪ ಹಾಗೂ ವಿಶ್ವದ ಇತರ ಭಾಗಗಳ ಚಿತ್ರಗಳು ಆಯ್ಕೆಯಾಗಿವೆ. ತೀರ್ಪುಗಾರರ ಸಮಿತಿಯಲ್ಲಿ ನೆದರ್ ಲೆಂಡ್, ಟರ್ಕಿ, ಇಸ್ರೇಲ್ ಹಾಗೂ ಯೂರೋಪ್ ನ ತಜ್ಞ ಚಿತ್ರ ನಿರ್ಮಾಪಕರು, ನಿರ್ದೇಶಕರಿರಲಿದ್ದಾರೆ ಎಂದರು. ಚಿತ್ರೋತ್ಸವದ ಏಳು ದಿನಗಳು ಕೂಡ ಚಿತ್ರಕತೆ ಬರವಣಿಗೆ, ಛಾಯಾಗ್ರಹಣ, ನೃತ್ಯ, ಸೌಂಡ್ ಇಂಜಿನಿಯರಿಂಗ್, ಚಿತ್ರಗಳ ಮಾರಾಟ ಮತ್ತಿತರರ ಅಂಶಗಳ ಕುರಿತು ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಕನ್ನಡ ಚಿತ್ರೋದ್ಯಮಕ್ಕೆ ವಿಶೇಷವಾಗಿ ಚಿತ್ರ ನಿರ್ಮಾಣ ಹಾಗೂ ಸಹನಿರ್ಮಾಣದ ಕುರಿತು ತರಬೇತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು. 
ಅಂತಾರಾಷ್ಟ್ರೀಯ ಮಾನ್ಯತೆಗೆ  ಅರ್ಜಿ
ಚಿತ್ರೋತ್ಸವಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಪಡೆಯಲು ಅರ್ಜಿ ಸಲ್ಲಿಸಲಾಗುವುದು. ಹತ್ತು ವರ್ಷಗಳ ಚಿತ್ರೋತ್ಸವದ ಹಾದಿಯ ದಾಖಲೀಕರಣ ತಯಾರಿಸಲಾಗಿದ್ದು, ಪ್ರತ್ಯೇಕ ಅಕಾಡೆಮಿ ಹಾಗೂ ಕಚೇರಿಗಳು ಕೂಡ ಸಿದ್ಧಗೊಂಡಿವೆ. ಚಿತ್ರೋತ್ಸವ ಮುಗಿಯುತ್ತಿದ್ದಂತೆ ಮಾನ್ಯತೆಗೆ ಅರ್ಜಿ ಸಲ್ಲಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com