ರಂಗಭೂಮಿಯ 'ಹಿರಿಯಣ್ಣ' ಹಿರಣ್ಣಯ್ಯ ಜೀವನ ಪಯಣ

ಸಮಾಜ ಒಂದು ಮನೆಯಿದ್ದಂತೆ ಕಸ, ಕಡ್ಡಿ, ಓರೆ, ಕೋರೆ ಸಹಜ. ಇಂತಹ ಕೊಳೆ ತೊಳೆಯಲು ಸಾಹಿತಿಗಳು, ಸಮಾಜ ಸೇವಕರು, ಕಲಾವಿದರು, ಸಾಧು ಸಂತರು ಪೊರಕೆಗಳಂತೆ ಕೆಲಸ ಮಾಡುತ್ತಿರುತ್ತಾರೆ
ಮಾಸ್ಟರ್ ಹಿರಣ್ಣಯ್ಯ
ಮಾಸ್ಟರ್ ಹಿರಣ್ಣಯ್ಯ
Updated on
ಬೆಂಗಳೂರು: ಸಮಾಜ ಒಂದು ಮನೆಯಿದ್ದಂತೆ  ಕಸ, ಕಡ್ಡಿ, ಓರೆ, ಕೋರೆ ಸಹಜ.  ಇಂತಹ ಕೊಳೆ ತೊಳೆಯಲು ಸಾಹಿತಿಗಳು, ಸಮಾಜ ಸೇವಕರು, ಕಲಾವಿದರು, ಸಾಧು ಸಂತರು ಪೊರಕೆಗಳಂತೆ ಕೆಲಸ ಮಾಡುತ್ತಿರುತ್ತಾರೆ ಈ ಬಗೆಯ ನಿತ್ಯ ನಿರಂತರ ಕಾಯಕದಲ್ಲಿ ರಂಗಕರ್ಮಿಯಾಗಿ ತೊಡಗಿಸಿಕೊಂಡವರು ಮಾಸ್ಟರ್ ಹಿರಣ್ಣಯ್ಯ ಕನ್ನಡ ನಾಡು ಕಂಡ ರಂಗಭೂಮಿಯ ದೈತ್ಯ ಪ್ರತಿಭೆ, ವಾಕ್ಚಾತುರ್ಯದ ಮೂಲಕವೇ ಭ್ರಷ್ಟಾಚಾರಿಗಳಿಗೆ ಚಾಟಿ ಬೀಸುತ್ತಿದ್ದವರು ಇಂದು ಮೌನಕ್ಕೆ ಜಾರಿದ್ದಾರೆ.  
ರಂಗಭೂಮಿಯ ವಿಶ್ವವಿದ್ಯಾಲಯ ಎನಿಸಿಕೊಂಡಿದ್ದ ಮಾಸ್ಟರ್ ಹಿರಣ್ಣಯ್ಯ ಜನಿಸಿದ್ದು 1934 ಫೆಬ್ರವರಿ 15. ಬಾಲ್ಯದ ಹೆಸರು ನರಸಿಂಹಮೂರ್ತಿ.  ಓದಿದ್ದು ಇಂಟರ್ ಮೀಡಿಯೆಟ್ ವರೆಗೆ ಮಾತ್ರ. ತಾಯಿ ಶಾರದಮ್ಮ ಸದ್ಗೃಹಿಣಿ.  ತಂದೆ  ಹಿರಣ್ಣಯ್ಯನವರೇ ರಂಗಶಿಕ್ಷಕ.  
 ಹಿರಣ್ಣಯ್ಯನವರು ಬದುಕನ್ನು ಅರಸಿ ಮದರಾಸಿಗೆ ಹೋದಾಗ ಮಾಸ್ಟರ್ ಹಿರಣ್ಣಯ್ಯ ಇನ್ನೂ ಬಾಲಕ.  ಮದರಾಸಿನಲ್ಲಿದ್ದ  ಪರಿಣಾಮ ಇಂಗ್ಲೀಷ್, ತಮಿಳು, ತೆಲುಗು ಭಾಷೆಗಳನ್ನು ಕಲಿಯುವಂತಾಯಿತು. ಮೈಸೂರಿಗೆ ಬಂದ ಬಳಿಕ ಬನುಮಯ್ಯ ಮಾಧ್ಯಮಿಕ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದ ಅವರು, ಪರೀಕ್ಷಾ ಶುಲ್ಕಕ್ಕಾಗಿ ‘ಸಾಧ್ವಿ’, ‘ಮೈಸೂರು ಪತ್ರಿಕೆ’ಯನ್ನು ಮನೆ ಮನೆಗೆ ಹಂಚಿ ಹಣ ಸಂಪಾದಿಸುತ್ತಿದ್ದರಂತೆ.
 ಹೀಗೆ ಬದುಕಿನಲ್ಲಿ ಕಂಡ ನೋವು, ನಲಿವು, ಅನಾಚಾರ, ದೌರ್ಜನ್ಯ, ಭ್ರಷ್ಟಾಚಾರ, ಲಂಚಗುಳಿತನಗಳೇ ಮುಂದೆ ಅವರ ನಾಟಕಕ್ಕೆ ವಸ್ತುಗಳಾದವು.  
 1953ರಲ್ಲಿ ತಂದೆಯನ್ನು ಕಳೆದುಕೊಂಡ ಬಳಿಕ ಅವರ ‘ಮಿತ್ರ ಮಂಡಳಿ’ ನಾಟಕ ಕಂಪನಿಯ ಜವಾಬ್ದಾರಿ ವಹಿಸಿಕೊಂಡು ಮುನ್ನಡೆಸಿದರು.  ‘ಮಕ್ಮಲ್ ಟೋಪಿ, ‘ನಡುಬೀದಿ ನಾರಾಯಣ’, ‘ದೇವದಾಸಿ’, ಲಂಚಾವತಾರ, ಪಶ್ಚಾತ್ತಾಪ, ಭ್ರಷ್ಟಾಚಾರ, ಚಪಲಾವತಾರ, ಲಾಟರಿ ಸರ್ಕಾರ, ಸನ್ಯಾಸಿ ಸಂಸಾರ, ಸದಾರಮೆ, ಎಚ್ಚಮ ನಾಯಕ, ಡಬ್ಬಲ್ ತಾಳಿ ಮೊದಲಾದ ನಾಟಕಗಳಿಂದ ಜನಮನ್ನಣೆ ಪಡೆದರು. 
 ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿದಂತೆ ನಾನಾ ಕಡೆಗಳಲ್ಲಿ ನಾಟಕ ಪ್ರದರ್ಶನ ನೀಡಿದ ಹೆಮ್ಮೆ ಮಾಸ್ಟರ್ ಹಿರಣ್ಣಯ್ಯನವರದು. ರಾಜಕಾರಣಿಯೊಬ್ಬರನ್ನು ನಾಟಕಕ್ಕೆ ಕರೆದು, ಅವರೆದುರೇ ಅವರ ಕರ್ಮಕಾಂಡಗಳನ್ನು ಬಿಚ್ಚಿಟ್ಟು ಸರಿದಾರಿಗೆ ಬರುವಂತೆ ಮಾಡುತ್ತಿದ್ದ ಖ್ಯಾತಿಯೂ ಹಿರಣ್ಣಯ್ಯನವರಿಗಿದೆ.  
 ಅಂತೆಯೇ ವೇದಿಕೆಯ ಮೇಲೆ ಮುಲಾಜಿಲ್ಲದೆ ಖಡಕ್ ನುಡಿಯಲ್ಲಿ ರಾಜಕಾರಣಿಗಳನ್ನು  ಟೀಕಿಸಿ, ಕೇಸುಗಳನ್ನು ಮೈಮೇಲೆ ಎಳೆದುಕೊಂಡು, ನ್ಯಾಯಾಲಯದಲ್ಲಿ ಅವುಗಳನ್ನು ಎದುರಿಸಿ ನ್ಯಾಯವನ್ನು ಪಡೆದ ಗಟ್ಟಿತನದ ವ್ಯಕ್ತಿತ್ವ ಅವರದ್ದು.
 ‘ಋಣ ಮುಕ್ತಳು’, ‘ಆನಂದ ಸಾಗರ’, ‘ಕೇರ್ ಆಫ್ ಫುಟ್ ಪಾತ್’ ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿಯೂ ಅವರು ನಟಿಸಿದ್ದಾರೆ.
 ಮಾಸ್ಟರ್ ಹಿರಣ್ಣಯ್ಯನವರ ಸಾಧನೆಯನ್ನು ಗುರುತಿಸಿ, ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ರಂಗಭೂಮಿ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ನವರತ್ನ ರಾಂ ಪ್ರಶಸ್ತಿ, ನಟ ರತ್ನಾಕರ ಪ್ರಶಸ್ತಿಗಳು ಅವರ ಕೊರಳನ್ನು ಅಲಂಕರಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com