ಕಿಚ್ಚ ಸುದೀಪ್
ಸಿನಿಮಾ ಸುದ್ದಿ
ಸಿನಿಮಾದಲ್ಲಿ ಒಬ್ಬ ವಿಲನ್ ಹೀರೋನನ್ನು ಚೆನ್ನಾಗಿ ಕಾಣುವಂತೆ ಮಾಡುತ್ತಾನೆ, ಅದು ಇನ್ನೂ ಹೆಚ್ಚು ಖುಷಿ ಕೊಡುತ್ತದೆ: ಕಿಚ್ಚ ಸುದೀಪ್
ಅದು 2008ನೇ ಇಸವಿ, ಫೂಂಕ್ ಸಿನಿಮಾ ಮೂಲಕ ಕನ್ನಡದ ನಟ ಕಿಚ್ಚ ಸುದೀಪ್ ಬಾಲಿವುಡ್ ಗೆ ಪಾದಾರ್ಪಣೆ....
ಅದು 2008ನೇ ಇಸವಿ, ಫೂಂಕ್ ಸಿನಿಮಾ ಮೂಲಕ ಕನ್ನಡದ ನಟ ಕಿಚ್ಚ ಸುದೀಪ್ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ವರ್ಷ. ನಂತರ ರಣ್, ರಕ್ತ ಚರಿತ ಸಿನಿಮಾಗಳಲ್ಲಿ ನಟಿಸಿದರು. ಸುದೀಪ್ ಇನ್ನು ಕನ್ನಡಕ್ಕೆ ಗುಡ್ ಬೈ ಹೇಳಿ ಬಾಲಿವುಡ್ ನಲ್ಲಿಯೇ ನೆಲೆ ನಿಲ್ಲುತ್ತಾರಾ ಎಂಬ ಪ್ರಶ್ನೆ ಚಿತ್ರಪ್ರೇಮಿಗಳಲ್ಲಿ ಹುಟ್ಟಿಕೊಂಡಿತ್ತು. ಅದಕ್ಕೆ ಅವರು ಕೊಟ್ಟ ಉತ್ತರ ನಿರ್ದೇಶಕರು ಕರೆದಾಗ ಹೋಗಿ ನಟಿಸಿ ಬರುತ್ತೇನೆ, ಯಾವತ್ತಿಗೂ ಕನ್ನಡವೇ ನನ್ನ ಶಾಶ್ವತ ನೆಲೆ ಎಂದು.
ಕಿಚ್ಚ ಸುದೀಪ್ ಅಂದು ಆಡಿದ ಮಾತನ್ನು ಇಂದಿನವರೆಗೆ ಉಳಿಸಿಕೊಂಡು ಬಂದಿದ್ದಾರೆ. ನಂತರದ ವರ್ಷಗಳಲ್ಲಿ ತೆಲುಗು, ತಮಿಳಿನಲ್ಲಿ ಕೂಡ ನಟಿಸಿದರು. ಇದೀಗ ಮತ್ತೊಮ್ಮೆ ಬಾಲಿವುಡ್ ನತ್ತ ಮುಖ ಮಾಡಿದ್ದಾರೆ. ಸರಿಯಾಗಿ 10 ವರ್ಷಗಳ ನಂತರ ಪ್ರಭುದೇವ ನಿರ್ದೇಶನದಲ್ಲಿ ದಬಂಗ್ 3ಯಲ್ಲಿ ಸಲ್ಮಾನ್ ಖಾನ್ ಮುಂದೆ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಿನಿಮಾದಲ್ಲಿ ಯಾವ ಪಾತ್ರ, ಏನು ಎಂದು ಹೆಚ್ಚಿಗೆ ಯೋಚನೆ ಮಾಡಲು ಹೋಗುವುದಿಲ್ಲ. ನಿರ್ದೇಶಕರು ಏನು ಹೇಳಿದ್ದಾರೆ ಅದನ್ನು ಅವರ ನಿರೀಕ್ಷೆಗೆ ತಕ್ಕಂತೆ ಮಾಡಿ ಬರುತ್ತೇನೆ. ಸಿನಿಮಾ ಕಲಾವಿದನಿಗೆ ಭಾಷೆಯ ಮಿತಿ ಇಲ್ಲ ಎಂಬುದಷ್ಟೇ ನನಗೆ ಗೊತ್ತು ಎನ್ನುತ್ತಾರೆ ಸುದೀಪ್.
10 ವರ್ಷಗಳ ನಂತರ ಮತ್ತೆ ಬಾಲಿವುಡ್ ಗೆ ಹೋಗುತ್ತಿರುವ ಸಂದರ್ಭದಲ್ಲಿ ನನಗೆ ಯಾವುದೂ ಇನ್ನು ಮುಂದೆ ಹೊಸದಲ್ಲ ಎನಿಸುತ್ತದೆ, ಆದರೆ ಪ್ರತಿಯೊಂದು ಕೂಡ. ಅದು ವಾಸ್ತವ ಮತ್ತು ಗ್ರಹಿಕೆಯಾಗಿದೆ. ರಕ್ತ ಚರಿತ್ರ ನಂತರ ನಾನು ನನ್ನ ಗಮನವನ್ನು ಸಂಪೂರ್ಣವಾಗಿ ಕನ್ನಡ ಚಿತ್ರಗಳ ಮೇಲೆ ಹರಿಸಿದೆ. ನಂತರ ತೆಲುಗಿನಲ್ಲಿ ರಾಜಮೌಳಿಯವರಿಂದ 'ಈಗ' ಚಿತ್ರಕ್ಕೆ ಅವಕಾಶ ಬಂತು. ಅದು ನನ್ನ ವೃತ್ತಿಜೀವನದಲ್ಲಿ ಹೊಸ ದಿಕ್ಕನ್ನೇ ನೀಡಿತು. ನಾನು ಯಾವುದನ್ನೂ ಯೋಜನೆ ಮಾಡಿ ಮಾಡಿದವನಲ್ಲ, ಬಂದದ್ದನ್ನು ಸಿಕ್ಕಿದ್ದನ್ನು ಮಾಡಿಕೊಂಡು ಹೋಗಿದ್ದೇನೆ ಎಂದರು ಸುದೀಪ್.
ಕನ್ನಡ, ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ ನಿಮಗೆ ಬಾಲಿವುಡ್ ಹೊಸ ಲೋಕ ಅನ್ನಿಸುತ್ತದೆಯೇ ಎಂದು ಕೇಳಿದ್ದಕ್ಕೆ ಸುದೀಪ್ ಹೇಳಿದ್ದು ಹೀಗೆ.
ಇಂದು ದಕ್ಷಿಣ ಭಾರತದ ಚಿತ್ರರಂಗ ದೇಶದ ಗಮನ ಸೆಳೆದಿದೆ. ಚಿತ್ರಪ್ರೇಮಿಗಳಿಗೆ ಇಂದು ಭಾಷೆಯ ಚೌಕಟ್ಟು ಇಲ್ಲ. ಆದರೆ ಉದ್ಯಮ, ವ್ಯಾಪಾರ, ಹಣದ ವಿಚಾರ ಬಂದಾಗ ಹಿಂದಿ ಚಿತ್ರೋದ್ಯಮ ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ. ತೆಲುಗಿನ ಬಾಹುಬಲಿ ಚಿತ್ರ ಇಡೀ ಭಾರತೀಯರ ಗಮನ ಸೆಳೆಯಿತು. ಇಂದು ಬೇರೆ ಭಾಷೆಗಳಲ್ಲಿ ಕೂಡ ಬಾಹುಬಲಿಯಂತೆ ಸಿನಿಮಾ ಕೊಂಡೊಯ್ಯಬೇಕು ಎಂಬ ಯೋಚನೆಗಳು ಬಂದಿವೆ. ಬಾಲಿವುಡ್ ಗೆ ತನ್ನದೇ ಆದ ನಿಖರತೆ, ವಿಶ್ವಾಸಾರ್ಹತೆಯಿದೆ. ಇನ್ನು ಸಮಾನತೆ, ಹಣ ವೆಚ್ಚ, ಸೃಜನಾತ್ಮಕತೆ ವಿಚಾರದಲ್ಲಿ ಕಲಾವಿದನಾಗಿ ನಾನು ಎಲ್ಲಾ ಭಾಷೆಯ ಚಿತ್ರಗಳನ್ನು ಸಮಾನವಾಗಿ ಕಾಣುತ್ತೇನೆ ಎಂದರು.
ದಬಂಗ್ ಚಿತ್ರದ ಹಿಂದಿನ ಸರಣಿಗಳ ಅಭಿಮಾನಿಗಳಲ್ಲಿ ನಾನು ಕೂಡ ಒಬ್ಬ. ದಬಂಗ್ ಮೂರನೇ ಅವತರಣಿಕೆಯಲ್ಲಿ ನಟಿಸುತ್ತಿರುವುದು ತುಂಬಾ ಜವಾಬ್ದಾರಿಯ ಕೆಲಸ ಮತ್ತು ಅಷ್ಟೇ ಉತ್ಸುಕನಾಗಿದ್ದೇನೆ. ನನ್ನಿಂದ ಏನು ನಿರೀಕ್ಷಿಸುತ್ತಿದ್ದಾರೆ ಅದನ್ನು ನಾನು ಈಡೇರಿಸಬೇಕು.
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುತ್ತಿರುವುದು ಹೊಸ ಅನುಭವ. ಅವರ ಜೊತೆ ನಟಿಸುವಾಗ ಆರಂಭದಲ್ಲಿ ಹೊಸಬನಂತೆ ಅನಿಸಿತು. ಅದು ನಟನಾಗಿ ನನ್ನನ್ನು ಪರೀಕ್ಷೆಗೆ ಹಚ್ಚಿದ ಸಮಯವಾಗಿತ್ತು. ಆದರೆ ಅಷ್ಟೇ ಉತ್ಸುಕನಾಗಿದ್ದೆ ಎಂದರು.
ಹೀರೋ ಇಮೇಜ್ ನ ನಿಮಗೆ ಇಲ್ಲಿ ವಿಲನ್ ಪಾತ್ರ ಹೇಗನ್ನಿಸುತ್ತದೆ ಎಂದಾಗ, ಹೀರೋ ಎಂದರೆ ಒಳ್ಳೆಯವ ಎಂಬ ಭಾವನೆ ಖುಷಿ ಕೊಡುತ್ತದೆ. ಆದರೆ ವಿಲನ್ ಪಾತ್ರ ಚಿತ್ರದಲ್ಲಿ ಹೀರೋಗೆ ಒಳ್ಳೆಯವ ಎಂಬ ಭಾವನೆ ಕೊಡುವ ಪಾತ್ರ ಅದು ಇನ್ನೂ ಹೆಚ್ಚು ಖುಷಿ ಕೊಡುತ್ತದೆ.
ದಬಂಗ್ 3 ಒಂದು ಫುಲ್ ಮೀಲ್ಸ್ ಇದ್ದಂತೆ. ನನ್ನ ಸೋದರ ಸೊಹೈಲ್ ಖಾನ್, ನಿರ್ದೇಶಕ ಪ್ರಭುದೇವ್, ಸಲ್ಮಾನ್ ಖಾನ್ ಎಲ್ಲರೂ ಇರುವುದು ಖುಷಿ ನೀಡಿದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ