ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದು ಸಣ್ಣ ಮಿನಿ ಫಿಲ್ಮ್ ಸಿಟಿ ತಲೆಯೆತ್ತಲಿದೆ. ಅದರ ರೂವಾರಿ ಉಮಾಪತಿ ಶ್ರೀನಿವಾಸ್.
ಹೆಬ್ಬುಲಿ, ರಾಬರ್ಟ್, ಮದಗಜದಂತಹ ಚಿತ್ರಗಳನ್ನು ನಿರ್ಮಿಸಿದ ಉಮಾಪತಿ ಚಿತ್ರ ತಯಾರಕರ ಎಲ್ಲಾ ಅಗತ್ಯಗಳನ್ನು ಒಂದೆಡೆಯಲ್ಲಿಯೇ ಪೂರೈಸುವಂತಹ ಫಿಲ್ಮ್ ಸಿಟಿಯನ್ನು ನಿರ್ಮಿಸಲಿದ್ದಾರೆ.
ಈ ಮಿನಿ ಫಿಲ್ಮ್ ಸಿಟಿಯಲ್ಲಿ ರಿಯಾಲಿಟಿ ಶೋಗಳು, ಧಾರಾವಾಹಿಗಳ ಚಿತ್ರೀಕರಣಕ್ಕೆ ಪ್ರಶಸ್ತ ಸ್ಥಳವಾಗುವಂತೆ ಮಾಡಲು ಉಮಾಪತಿ ಯೋಜನೆ ರೂಪಿಸುತ್ತಿದ್ದಾರೆ. ಕನಕಪುರ ರಸ್ತೆಯಲ್ಲಿರುವ ಶ್ರೀ ಶ್ರೀ ರವಿಶಂಕರ ಆಶ್ರಮಕ್ಕೆ ಹತ್ತಿರ ಫಿಲ್ಮ್ ಸಿಟಿಯನ್ನು ನಿರ್ಮಿಸಲು ಅವರು ಯೋಜನೆ ರೂಪಿಸುತ್ತಿದ್ದಾರೆ. 16 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದೆ. ಉಮಾಪತಿ ನಿರ್ಮಾಣದ ದರ್ಶನ್ ಅಭಿನಯದ ರಾಬರ್ಟ್, ಶ್ರೀಮುರಳಿ ಅಭಿನಯದ ಮದಗಜ ತೆರೆಗೆ ಬರಲು ಸಿದ್ಧವಾಗುತ್ತಿದೆ.
ಇಲ್ಲಿ ಚಿತ್ರ ನಿರ್ಮಾಣಕ್ಕೆ ಯಾವುದೇ ಸೌಕರ್ಯಗಳಿಲ್ಲದಿರುವುದರಿಂದ ರಾಮೋಜಿ ಫಿಲ್ಮ್ ಸಿಟಿಗೆ ಹೋಗಬೇಕಾಗುತ್ತದೆ. ಅಲ್ಲಿಂದ ಶೇಕಡಾ 50ರಷ್ಟು ಸಿಬ್ಬಂದಿಯನ್ನು ಕರೆಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಚಿತ್ರಗಳಿಂದ ಬಂದ ಆದಾಯವನ್ನು ಕರ್ನಾಟಕ ಸರ್ಕಾರ ಕಳೆದುಕೊಳ್ಳಬೇಕಾಗುತ್ತದೆ. ಅಲ್ಲದೆ ಹೈದರಾಬಾದ್ ಗೆ ಶೂಟಿಂಗ್ ಗೆ ಹೋಗಲು ಕಷ್ಟವಾಗುತ್ತದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನಲ್ಲಿಯೇ ಮಿನಿ ಫಿಲ್ಮ್ ಸಿಟಿ ನಿರ್ಮಿಸಬೇಕೆಂದುಕೊಂಡಿದ್ದೇವೆ ಎಂದು ಉಮಾಪತಿ ಹೇಳುತ್ತಾರೆ.
Advertisement