ಸಂಕಷ್ಟದಲ್ಲಿದ್ದೇವೆ ನೆರವು ನೀಡಿ: ರಾಜ್ಯ ಸರ್ಕಾರಕ್ಕೆ ಚಲನಚಿತ್ರ ರಂಗ ಮನವಿ

ಕೊರೋನಾ ವೈರಾಣು ಸೋಂಕಿನಿಂದಾಗಿ ದೇಶದ ವಿವಿಧ ಉದ್ಯಮಗಳಂತೆ ಸಂಕಷ್ಟಕ್ಕ ಸಿಲುಕಿರುವ ಚಿತ್ರರಂಗವು, ಸರ್ಕಾರದ ನೆರವು ಕೋರಿ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದೆ
ನೆರವು ನೀಡುವಂತೆ ಸಿಎಂ ಗೆ ಮನವಿ
ನೆರವು ನೀಡುವಂತೆ ಸಿಎಂ ಗೆ ಮನವಿ

ಬೆಂಗಳೂರು: ಕೊರೋನಾ ವೈರಾಣು ಸೋಂಕಿನಿಂದಾಗಿ ದೇಶದ ವಿವಿಧ ಉದ್ಯಮಗಳಂತೆ ಸಂಕಷ್ಟಕ್ಕ ಸಿಲುಕಿರುವ ಚಿತ್ರರಂಗವು, ಸರ್ಕಾರದ ನೆರವು ಕೋರಿ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದೆ.

ಚಿತ್ರರಂಗ ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ನಟಿ ಹಾಗೂ ಬಿಜೆಪಿ ನಾಯಕಿ ವಿಸ್ತೃತ ವರದಿಯೊಂದನ್ನು ಮುಖ್ಯಮಂತ್ರಿ ಬಿ ಎಸ್‍ ಯಡಿಯೂರಪ್ಪ ಅವರಿಗೆ ಸಲ್ಲಿಸಿದ್ದು, ಈ ವೇಳೆ ಬಿಜೆಪಿ ಮುಖಂಡರಾದ ರುದ್ರೇಶ್, ಮರಿಸ್ವಾಮಿಯವರು ಉಪಸ್ಥಿತರಿದ್ದರು.

ಈಗಿನ ಪರಿಸ್ಥಿತಿಯಲ್ಲಿ ಒಂದು ವೇಳೆ ಕೆಲ ದಿನಗಳ ನಂತರ ಲಾಕ್ಡೌನ್ ತೆರವಾದರೂ ಕೂಡ ನಮ್ಮ ಕನ್ನಡ ಚಲನಚಿತ್ರರಂಗ ಸುಧಾರಿಸಿಕೊಳ್ಳುವುದಕ್ಕೇ ಕನಿಷ್ಠ ಆರು ತಿಂಗಳು ಬೇಕಾಗಬಹುದು. ಕೋವಿಡ್-19 ರ ಮಾರಕ ದಾಳಿಯಿಂದಾಗಿ ನಿರ್ಮಾಣದ ಹಂತದಲ್ಲಿರುವ ಚಿತ್ರಗಳ ನಿರ್ಮಾಪಕರು, ಲಾಕ್ಡೌನ್ ಜಾರಿಯ ಮುನ್ನವಷ್ಟೇ ತಮ್ಮ ಚಲನಚಿತ್ರ ಬಿಡುಗಡೆ
ಮಾಡಿದ್ದ ನಿರ್ಮಾಪಕರು ಈಗಿನ ಪರಿಸ್ಥಿತಿಯಲ್ಲಿ ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ‌. ಹೀಗಾಗಿ ಈ ನಿರ್ಮಾಪಕರಿಗೆ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ನೀಡಬಹುದಾದ ನೆರವು ಹಾಗೂ ಯಾವುದೇ ನಿರ್ಮಾಪಕರಿಗೂ ನಷ್ಟವಾಗದಂತೆ ಚಿತ್ರ ಬಿಡುಗಡೆಗೆ ಮಾರ್ಗಸೂಚಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರದ ನೆರವು ಅತ್ಯಂತ ಅಗತ್ಯವಾಗಿದೆ ಎಂದು ಚಿತ್ರರಂಗ ಕೋರಿದೆ.

ನಿರ್ದೇಶಕರು, ಛಾಯಾಗ್ರಾಹಕರು, ಸಂಕಲನಕಾರರು, ಪೋಷಕ ಕಲಾವಿದರು, ಒಕ್ಕೂಟದ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರಿಗೆ ನೆರವು : ಕನ್ನಡ ಚಲನಚಿತ್ರರಂಗದ ನರನಾಡಿಗಳಂತೆ ಜೀವತುಂಬಿ ಕೆಲಸ ಮಾಡುವ ಕನ್ನಡ ಚಲನಚಿತ್ರ ನಿರ್ದೇಶಕರು, ಛಾಯಾಗ್ರಾಹಕರು, ಸಂಕಲನಕಾರರು, ಪೋಷಕ ಕಲಾವಿದರು, ಒಕ್ಕೂಟದ ಕಾರ್ಮಿಕರು
ಹಾಗೂ ಅಸಂಘಟಿತ ಕಾರ್ಮಿಕರ ಪೈಕಿ ಬಹುತೇಕರು ಬಹಳ ಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ‌. ಲೈಟ್ ಬಾಯ್ ನಿಂದ ಹಿಡಿದು ತಂತ್ರಜ್ಞರವರೆಗೂ, ಪೋಷಕ ಕಲಾವಿದರು, ಉದಯೋನ್ಮುಖ ನಿರ್ದೇಶಕರು, ಸಹಾಯಕ ನಿರ್ದೇಶಕರು ಬಹಳ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲೇ ತಿಂಗಳಿಗೆ ಒಂದು ವಾರ ಕೆಲಸ ಸಿಕ್ಕರೇ ನಮ್ಮ ಪುಣ್ಯ ಅಂದುಕೊಂಡು ಆ ದುಡಿಮೆಯಲ್ಲೇ ಸಂಸಾರ ಸಾಗಿಸುವ ಜೀವಗಳೂ ಇಲ್ಲಿವೆ.

ಲಾಕ್ಡೌನ್ ನ ಈ ಸಂಕಷ್ಟದ ಸಂಧರ್ಭದಲ್ಲಿ ಈ ವರ್ಗದ ಕಾರ್ಮಿಕರಿಗೆ ನಿತ್ಯದ ಬದುಕು ಸಾಗಿಸಲು ಬವಣೆ ಪಡುತ್ತಿರುವವರ ನೆರವಿಗೆ ಮುಂದಾಗಲೇಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.

ಹೀಗಾಗಿ ನಿರ್ಮಾಪಕರು ಮತ್ತಿತರರಿಗೆ ರಾಜ್ಯ ಸರ್ಕಾರ ನೀಡಬಹುದಾದ ನೆರವು ನೀಡಬಹುದಾದ ರೂಪುರೇಷೆಗಳ ಬಗ್ಗೆ ಮನವಿ ಮಾಡಿದ್ದು, ಬಡ್ಡಿಗೆ ಸಾಲ ಮಾಡಿ ಹಣ ತಂದು ಚಲನಚಿತ್ರ ನಿರ್ಮಿಸಿ ಈಗ ಬಂದೊದಗಿರುವ ಲಾಕ್ಡೌನ್ ಸಂಕಷ್ಟದಿಂದಾಗಿ ಬಡ್ಡಿ ಕಟ್ಟಲೂ ಸಾಧ್ಯವಾಗದೇ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ನಿರ್ಮಾಣ ಹಂತದಲ್ಲಿರುವ ಕನ್ನಡ ಚಲನಚಿತ್ರಗಳ ನಿರ್ಮಾಪಕರಿಗೆ ಸಾಲ ನೀಡಿರುವ ಫೈನ್ಯಾನ್ಶಿಯರ್ ಗಳು ಮಾನವೀಯತೆಯ ದೃಷ್ಟಿಯಿಂದ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬಹುದು ಅಥವಾ ಬಡ್ಡಿ ಕಡಿಮೆ ಮಾಡುವಂತೆ ಮನವೊಲಿಸಬಹುದು.

ಲಾಕ್ಡೌನ್ ಜಾರಿಯ ಮುನ್ನವಷ್ಟೇ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಿಗೆ ಕಡ್ಡಾಯವಾಗಿ ರಾಜ್ಯ ಸರ್ಕಾರದ ಸಹಾಯಧನ (ಸಬ್ಸಿಡಿ) ದೊರೆಯುವಂತೆ ಮಾಡಬಹುದು. ಲಾಕ್ಡೌನ್ ತೆರವಾದ ನಂತರ ಕನ್ನಡ ಚಲನಚಿತ್ರಗಳ ನಿರ್ಮಾಪಕರಿಗೆ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿ ಅವುಗಳ ಪರಿಹಾರಕ್ಕೆ ಅಗತ್ಯ
ರೋಡ್ ಮ್ಯಾಪ್ ಸಿದ್ದಪಡಿಸುವುದು.

ಲಾಕ್ಡೌನ್ ನಿಂದಾಗಿ ಎದುರಾಗಿರುವ ಸಮಸ್ಯೆಯಿಂದ ಬಹುದೊಡ್ಡ ಸಂಕಷ್ಟಕ್ಕೆ ಸಿಲುಕಿರುವುದೇ ಕನ್ನಡ ಚಲನಚಿತ್ರಗಳ ನಿರ್ದೇಶಕರು, ಛಾಯಾಗ್ರಹಕರು, ಸಂಕಲನಕಾರರು,ಕಲಾವಿದರು, ಪೋಷಕ ಕಲಾವಿದರು, ಒಕ್ಕೂಟ, ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರು. ಇವರಲ್ಲಿ ಬಹುತೇಕರು ಕಡುಬಡವರಾಗಿದ್ದು, ಅವರಿಗೆ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಬಿ.ಪಿ.ಎಲ್‌ ಕಾರ್ಡ್ ಹಾಗೂ ಎ.ಪಿ.ಎಲ್ ಕಾರ್ಡ್ ನೀಡಬಹುದಾಗಿದೆ.


ಕನ್ನಡ ಚಲನಚಿತ್ರಗಳ ನಿರ್ದೇಶಕರು, ಛಾಯಾಗ್ರಹಕರು, ಸಂಕಲನಕಾರರು, ಕಲಾವಿದರು, ಪೋಷಕ ಕಲಾವಿದರು, ಒಕ್ಕೂಟ, ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರಿಗೆ ಆರೋಗ್ಯ ಭಾಗ್ಯ ಕಾರ್ಡ್ ಒದಗಿಸಿ ಉಚಿತ ಆರೋಗ್ಯ ಸೇವೆ ಲಭ್ಯವಾಗುವಂತೆ ಕಾಳಜಿ ವಹಿಸಬಹುದು.

ತಕ್ಷಣ ಈ ವರ್ಗದವರು ಅಗತ್ಯ ದಿನಸಿ ಹಾಗೂ ಔಷಧ ಕೊಳ್ಳಲು ಅನುಕೂಲವಾಗುವಂತೆ ಅಂದಾಜು 5 ಸಾವಿರ ರೂಪಾಯಿ ಮೊತ್ತದ ಕೂಪನ್ ಗಳನ್ನು ಒದಗಿಸುವ ಬಗ್ಗೆ ವರದಿಯಲ್ಲಿ ಮನವಿ ಮಾಡಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com