ಜು.12, ಶಿವರಾಜ್ ಕುಮಾರ್ ಜನ್ಮದಿನ. ಸೆಂಚೂರಿ ಸ್ಟಾರ್ ನ ಹುಟ್ಟುಹಬ್ಬವನ್ನ ಸಂಭ್ರಮದಿಂದ ಆಚರಿಸುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಆದರೆ ಕೊರೋನಾ ಸಾಂಕ್ರಾಮಿಕ ಇರುವ ಹಿನ್ನೆಲೆಯಲ್ಲಿ ತಮ್ಮ ಹುಟ್ಟುಹಬ್ಬ ಆಚರಣೆಯನ್ನು ಅದ್ಧೂರಿಯಿಂದ ಆಚರಣೆ ಮಾಡದೇ ಇರಲು ಶಿವರಾಜ್ ಕುಮಾರ್ ನಿರ್ಧರಿಸಿದ್ದಾರೆ.
ಈ ಬಾರಿಯ ನನ್ನ ಹುಟ್ಟುಹಬ್ಬ ಆಚರಣೆ ವಿಭಿನ್ನವಾಗಿರಲಿದೆ ಎಂದು ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಲು ಸಾಧ್ಯವಾಗದ ಪರಿಸ್ಥಿಗೆ ಬೇಸರದಿಂದಲೇ ಹೇಳಿದ್ದಾರೆ ಶಿವಣ್ಣ. ಮೊದಲು ಆರೋಗ್ಯಕ್ಕೆ ಆದ್ಯತೆ ಏಕೆಂದರೆ "ಆರೋಗ್ಯವೇ ಭಾಗ್ಯ" ನನ್ನ ಅಭಿಮಾನಿಗಳ ವಿಷಯದಲ್ಲಿ ನನಗೆ ವಿಶೇಷವಾದ ಜವಾಬ್ದಾರಿ ಇದೆ. ಆದ್ದರಿಂದ ನನ್ನ ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಲು ನಿರ್ಧರಿಸಿದ್ದೇನೆ, ಅಭಿಮಾನಿಗಳು ಮನೆಯಿಂದಲೇ ನನಗೆ ಶುಭಾಶಯ ಕೋರಬಹುದು ಎಂದು ವಿಡಿಯೋ ಸಂದೇಶದ ಮೂಲಕ ಕರೆ ನೀಡಿದ್ದಾರೆ.
ನನ್ನನ್ನು ಭೇಟಿ ಮಾಡಲು ಅಭಿಮಾನಿಗಳು ಯತ್ನಿಸಬೇಕಿಲ್ಲ. ಈಗಾಗಲೇ ಅಭಿಮಾನಿಗಳಿಂದ ಸಾಕಷ್ಟು ಉಡುಗೊರೆಗಳು ಬಂದಿವೆ, ಈ ಪೈಕಿ ವಿಶೇಷವಾದ ಹಾಡು ಸಹ ಇದೆ. ಅವರ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಶಿವಣ್ಣ ಹೇಳಿದ್ದಾರೆ. ಶಿವಣ್ಣನ ಬರ್ತ್ ಡೇ ದಿನದಂದು ಟೀಸರ್, ಹೊಸ ಸಿನಿಮಾದ ಘೋಷಣೆಗಳು ಬಿಡುಗಡೆಗೆ ಸಿದ್ಧವಿದೆ. ಎ.ಹರ್ಷ ನಿರ್ದೇಶನದ ಭಜರಂಗಿ-2 ಟೀಸರ್ ಬಿಡುಗಡೆಯಾಗಲಿದೆ. ಇನ್ನು ಮಾರ್ಕ್ ಲಕ್ಕಿ ಗೋಪಾಲ್ ನ ಮೊದಲ ನಿರ್ದೇಶನದ, ಶಿವಣ್ಣ ನಟನೆಯ ಚಿತ್ರವೂ ಘೋಷಣೆಯಾಗಲಿದೆ.
Advertisement