'ಮಾಲ್ಗುಡಿ ಡೇಸ್' ದಿನಗಳು: ಶಂಕರ್ ನಾಗ್ ಕಾರ್ಯವೈಖರಿ ಸ್ಮರಿಸಿಕೊಂಡ ರಮೇಶ್ ಭಟ್!

1980ರ ದಶಕದಲ್ಲಿ ನಿರ್ಮಾಣಗೊಂಡು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತೆರೆಕಂಡ ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿ ಸೂಪರ್ ಹಿಟ್ ಆಗಿತ್ತು, ಹಲವು ಪ್ರಶಸ್ತಿಗಳನ್ನು ಸಹ ಬಾಚಿಕೊಂಡಿತ್ತು. ಇದೀಗ ಝೀ ಕನ್ನಡ ವಾಹಿನಿಯಲ್ಲಿ ಅದರ ಕನ್ನಡ ಡಬ್ಬಿಂಗ್ ಧಾರಾವಾಹಿ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ.
ಮಾಲ್ಗುಡಿ ಡೇಸ್ ಧಾರಾವಾಹಿ ದೃಶ್ಯ
ಮಾಲ್ಗುಡಿ ಡೇಸ್ ಧಾರಾವಾಹಿ ದೃಶ್ಯ
Updated on

1980ರ ದಶಕದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತೆರೆಕಂಡ ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿ ಸೂಪರ್ ಹಿಟ್ ಆಗಿತ್ತು, ಹಲವು ಪ್ರಶಸ್ತಿಗಳನ್ನು ಸಹ ಬಾಚಿಕೊಂಡಿತ್ತು. ಇದೀಗ ಝೀ ಕನ್ನಡ ವಾಹಿನಿಯಲ್ಲಿ ಅದರ ಕನ್ನಡ ಡಬ್ಬಿಂಗ್ ಧಾರಾವಾಹಿ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ.

ಈ ಸಂದರ್ಭದಲ್ಲಿ ಧಾರಾವಾಹಿಯ ಭಾಗವಾಗಿದ್ದ ಹಿರಿಯ ನಟ ರಮೇಶ್ ಭಟ್ ಅಂದು ಧಾರಾವಾಹಿ ನಿರ್ಮಾಣದ ಹಲವು ಸಂಗತಿಗಳನ್ನು ಮೆಲುಕು ಹಾಕಿದ್ದಾರೆ. ಇಂಗ್ಲಿಷಿನ ಖ್ಯಾತ ಕಾದಂಬರಿಕಾರ ಆರ್ ಕೆ ನಾರಾಯಣ್ ಅವರ ಮಾಲ್ಗುಡಿ ಡೇಸ್ ಕಾದಂಬರಿಯನ್ನು ಆಧಾರವಾಗಿಟ್ಟುಕೊಂಡು ತಯಾರಾದ ಧಾರಾವಾಹಿಯಿದು.

ರಮೇಶ್ ಭಟ್, ಶಂಕರ್ ನಾಗ್ ಅವರಿಗೆ ಆಪ್ತರಾಗಿದ್ದರು, ಮಾಲ್ಗುಡಿ ಡೇಸ್ ಗೂ ಮುನ್ನವೇ ಹಲವು ನಾಟಕ, ಸಿನೆಮಾಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ದಕ್ಷಿಣ ಭಾರತದ ಗ್ರಾಮೀಣ ಹಿನ್ನಲೆಯ ಕಥೆಗೆ ತಕ್ಕದಾದ ಸ್ಥಳ, ಕಲಾವಿದರ ಆಯ್ಕೆ, ಕಲಾವಿದರ ವೇಷಭೂಷಣ, ಪಾತ್ರಕ್ಕೆ ಜೀವಂತಿಕೆ ತುಂಬುವ ಕೆಲಸ, ಧಾರಾವಾಹಿಗೆ ಸೂಕ್ತವಾಗುವ ಸೆಟ್ಟಿಂಗ್ ಇತ್ಯಾದಿಗಳನ್ನು ಹೇಗೆ ಮಾಡಲಾಯಿತು ಎಂಬ ಬಗ್ಗೆ ಕುತೂಹಲದ ವಿಷಯಗಳನ್ನು ರಮೇಶ್ ಭಟ್ ಹೇಳಿದ್ದಾರೆ.

''ಮಾಲ್ಗುಡಿ ಡೇಸ್ ಧಾರಾವಾಹಿಗೆ ಕಲಾವಿದರಿಗೆ ವೇಷಭೂಷಣ ಆಯ್ಕೆಮಾಡುವುದು ಶಂಕರ್ ನಾಗ್ ಅವರಿಗೆ ಮುಖ್ಯವಾಗಿತ್ತು. ನನಗೆ ಅವರು ಬಹಳ ದೊಡ್ಡ ಜವಾಬ್ದಾರಿ ವಹಿಸಿದ್ದರು, ಬಟ್ಟೆ ಹೊಸದೇ ಆಗಬೇಕಿಂದಿರಲಿಲ್ಲ. ಆದರೆ ಆ ಪಾತ್ರಕ್ಕೆ ಸರಿಯಾಗಿ ಹೊಂದಿಕೆಯಾಗಬೇಕಿತ್ತು. ಬಟ್ಟೆಯ ಮೇಲೆ ಆಗಾಗ ಹಾಕಿಕೊಳ್ಳಲು ನಾವು ಗ್ರೀಸ್ ಬಾಟಲ್ ನ್ನು ಶೂಟಿಂಗ್ ನಡೆಯುತ್ತಿದ್ದಾಗ ಜೊತೆಗೆ ಒಯ್ಯುತ್ತಿದ್ದೆವು.

ಶೂಟಿಂಗ್ ಸೆಟ್ ನಲ್ಲಿ ಇಂಥವರು ಇಂಥಹದ್ದೇ ಕೆಲಸ ಮಾಡಬೇಕೆಂಬ ನಿಯಮವೇನು ಇರಲಿಲ್ಲ. ಆ ಸಂದರ್ಭಕ್ಕೆ ಏನು ಆಗಬೇಕಿತ್ತು ಅದನ್ನು ಯಾರು ಬೇಕಾದರೂ ಮಾಡುತ್ತಿದ್ದರು. ಅಕ್ಕಪಕ್ಕದಲ್ಲಿ ಕಸಕಡ್ಡಿ ಬಿದ್ದಿದ್ದರೆ ಸ್ವತಃ ಶಂಕರ್ ನಾಗ್ ಅವರೇ ಪೊರಕೆ ಹಿಡಿದು ಗುಡಿಸುತ್ತಿದ್ದರು. ಎಲ್ಲರನ್ನೂ ಕೆಲಸಕ್ಕೆ ಹುರಿದುಂಬಿಸುತ್ತಿದ್ದರು.ಉಳಿದವರು ಅವರನ್ನು ಅನುಸರಿಸಿಕೊಂಡು ಹೋಗುತ್ತಿದ್ದರು, ನಮ್ಮ ತಂಡ ತುಂಬಾ ಅದ್ಭುತವಾಗಿತ್ತು, ಅಂತಹ ಕಲಾವಿದರ ತಂಡ ಸಿಗುವುದು ಕಷ್ಟ. ಮಾಲ್ಗುಡಿ ಡೇಸ್ ಶೂಟಿಂಗ್ ಆರಂಭವಾಗಿ 3 ವರ್ಷದವರೆಗೆ ನಾನು ಬೇರೆ ಯಾವುದೇ ಅವಕಾಶ ಸಿಕ್ಕಿದರೂ ನಟಿಸಲು ಒಪ್ಪಿಕೊಂಡಿರಲಿಲ್ಲ. ಆ ಸಂದರ್ಭದಲ್ಲಿ ಅಷ್ಟು ಬದ್ಧತೆ ಆ ಧಾರಾವಾಹಿ ಮೇಲೆ ತೋರಿಸಬೇಕಾಗಿತ್ತು. ಧಾರಾವಾಹಿ ಬಿಡುಗಡೆಯಾದ ನಂತರ ಅದಕ್ಕೆ ಸಿಕ್ಕಿದ ಮನ್ನಣೆ, ಜನಪ್ರಿಯತೆ ಕಂಡು ನಾವೆಲ್ಲರೂ ಮೂಕವಿಸ್ಮಿತರಾದೆವು, ನಾವು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿತು, ಇಂದಿಗೂ ಅದು ಆ ಜನಪ್ರಿಯತೆಯನ್ನು ಹಾಗೆಯೇ ಉಳಿಸಿಕೊಂಡಿದೆ ಎಂದು ಖುಷಿಯಿಂದ ಹೇಳುತ್ತಾರೆ ರಮೇಶ್ ಭಟ್.

ಧಾರಾವಾಹಿಯಲ್ಲಿ ಬರುವ ಸ್ವಾಮಿ ಪಾತ್ರ ನಿರ್ವಹಿಸಿದ್ದು ಮಾಸ್ಟರ್ ಮಂಜುನಾಥ್. 1986ರ ಬೇಸಿಗೆಯಲ್ಲಿ ಆಗುಂಬೆಯಲ್ಲಿ ಧಾರಾವಾಹಿಗೆ ಮೊದಲ ಬಾರಿಗೆ ಶೂಟಿಂಗ್ ಆರಂಭಿಸಿದ ದಿನಗಳನ್ನು ಅವರು ನೆನಪು ಮಾಡಿಕೊಳ್ಳುತ್ತಾರೆ. ಮಾಲ್ಗುಡಿ ಎಂಬ ಕಾಲ್ಪನಿಕ ಊರನ್ನು ಸೃಷ್ಟಿಸಿದ ಬಗೆಯನ್ನು ಹೇಳುತ್ತಾರೆ. 3 ವರ್ಷದಲ್ಲಿ ಬಾಲನಟನಾಗಿ ನಟನೆ ಆರಂಭಿಸಿ 23 ಸಿನೆಮಾಗಳಲ್ಲಿ ಅಭಿನಯಿಸಿದ್ದರೂ ಈ ಧಾರಾವಾಹಿ ಎಷ್ಟು ವಿಭಿನ್ನ ಮತ್ತು ಕಷ್ಟವೆನಿಸಿತು ಎಂಬುದನ್ನು ಹೇಳುತ್ತಾರೆ.

ಹಿಂದಿ ಭಾಷೆಯಲ್ಲಿ ಒಂದಕ್ಷರ ಮಾತನಾಡಲು ಬಾರದಿದ್ದರೂ ಶಂಕರ್ ನಾಗ್ ಮಾಸ್ಟರ್ ಮಂಜುನಾಥ್ ಅವರ ಬಳಿಯೇ ಸ್ವಾಮಿ ಪಾತ್ರ ಮಾಡಿಸಬೇಕೆಂದು ಕರೆದುಕೊಂಡು ಹೋದರಂತೆ. ಈ ಸಂದರ್ಭದಲ್ಲಿ ನನಗೆ ಹಿಂದಿ, ಇಂಗ್ಲಿಷ್ ನಲ್ಲಿ ಮಾತನಾಡಲು ಸಹಾಯ ಮಾಡಿದ್ದು ಅರುಂಧತಿ ನಾಗ್ ಮತ್ತು ಪದ್ಮಾವತಿ ರಾವ್ ಎಂದು ಸ್ಮರಿಸಿಕೊಳ್ಳುತ್ತಾರೆ ಮಂಜುನಾಥ್.

ಇವರಿಗೆ ಅರ್ಥವಾಗಲೆಂದು ಕನ್ನಡಕ್ಕೆ ಭಾಷಾಂತರ ಮಾಡಿ ಹೇಳುತ್ತಿದ್ದರಂತೆ. ಅದನ್ನು ಮಂಜುನಾಥ್ ಉರು ಹೊಡೆಯುತ್ತಿದ್ದರಂತೆ. ಧಾರಾವಾಹಿ ಅರ್ಧ ಶೂಟಿಂಗ್ ಮುಗಿಯುವ ಹೊತ್ತಿಗೆ ಮಂಜುನಾಥ್ ಅವರಿಗೆ ಸ್ವಲ್ಪ ಸ್ವಲ್ಪ ಇಂಗ್ಲಿಷ್, ಹಿಂದಿ ಮಾತನಾಡಲು ಅಭ್ಯಾಸವಾಯಿತಂತೆ.

ಶಂಕರ್ ನಾಗ್ ಅವರ ಮಾಲ್ಗುಡಿ ಡೇಸ್ ಬಂದು 20 ವರ್ಷಗಳು ಕಳೆದ ನಂತರ 2000ದ ಹೊತ್ತಿಗೆ ಹೊಸ ರೂಪದಲ್ಲಿ ಮಾಲ್ಗುಡಿ ಡೇಸ್ ಕಥೆಯನ್ನು ಪ್ರೇಕ್ಷಕರಿಗೆ ಸಿನೆಮಾ ರೂಪದಲ್ಲಿ ನೀಡಲು ಕವಿತಾ ಲಂಕೇಶ್ ಪ್ರಯತ್ನ ಮಾಡಿದರು. 1980ರ ದಶಕದಲ್ಲಿ ಇದ್ದ ಆಗುಂಬೆಗೂ 2000ದ ಹೊತ್ತಿನ ಆಗುಂಬೆಗೂ ಅಜಗಜಾಂತರ ವ್ಯತ್ಯಾಸವುಂಟಾಗಿತ್ತು. ಅಂದಿನ ಗ್ರಾಮೀಣ ಸೊಗಡು ಕಣ್ಮರೆಯಾಗಿ ವಾಣಿಜ್ಯೀಕರಣವಾಗಿತ್ತು. ಶಂಕರ್ ನಾಗ್ ನಿರ್ದೇಶನ ಸಮಯದಲ್ಲಿ ಆಗುಂಬೆಯಲ್ಲಿ ಸುಲಭವಾಗಿ ಚಿತ್ರೀಕರಣಕ್ಕೆ ಸಾಧ್ಯವಾಗಿದ್ದರೆ ನಂತರ ನಗರೀಕರಣ, ಜನ ಸಂಚಾರದಿಂದ ಶೂಟಿಂಗ್ ಗೆ ಕಷ್ಟವಾಯಿತು ಎನ್ನುವ ಕವಿತಾ ಲಂಕೇಶ್ ಅವರ ಸಿನೆಮಾ ನಿರ್ಮಾಣ ಕನಸು ಇನ್ನೂ ಕೈಗೂಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com