
ನಟ ಪ್ರಜ್ವಲ್ ದೇವರಾಜ್ ಮತ್ತೊಮ್ಮೆ ನಿರ್ದೇಶಕ ಪಿಸಿ ಶೇಖರ್ ಅವರ ಜೊತೆ ಸೇರಿ ಕೆಲಸ ಮಾಡಲಿದ್ದಾರೆ, ಪಿ ಸಿ ಶೇಖರ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ಪ್ರಜ್ವಲ್ ಕ್ಯಾಬ್ ಡ್ರೈವರ್ ಪಾತ್ರ ನಿರ್ವಹಿಸಲಿದ್ದಾರೆ.
ಈ ಬಗ್ಗೆ ಸ್ಷಷ್ಟನೆ ನೀಡಿರುವ ನಿರ್ದೇಶಕರು ತಮ್ಮ ಮುಂದಿನ ಥ್ರಿಲ್ಲರ್ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ನಟಿಸುತ್ತಿದ್ದು ಎಲ್ಲಾ ಸಿದ್ದತೆಗಳನ್ನು ಮಾಡುತ್ತಿರುವುದಾಗಿ ಖಚಿತ ಪಡಿಸಿದ್ದಾರೆ.
ಟೆರರಿಸ್ಟ್ ಸಿನಿಮಾ ನಿರ್ಮಾಪಕ ಅಲಂಕಾರ್ ಪಾಂಡಿಯನ್ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ, ಡಿಸೆಂಬರ್ 25 ಅಥವಾ ಜನವರಿ ತಿಂಗಳ ಮೊದಲಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ.
'ಅರ್ಜುನ' ಚಿತ್ರ ಮಾಡಿದ ನಂತರ ನಾವಿಬ್ಬರೂ ಎರಡನೇ ಬಾರಿ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ಈ ಚಿತ್ರದಲ್ಲಿ ಪ್ರಜ್ವಲ್ ಕ್ಯಾಬ್ ಡ್ರೈವರ್ ಆಗಿ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಲ್ಕು ಗಂಟೆಗಳ ಕಾಲ ನಡೆಯುವ ಕಥೆ ಚಿತ್ರದಲ್ಲಿದೆ. ರಿಯಲ್ ಟೈಮ್ ಸ್ಟೋರಿ. ನಾನ್ ಲೀನಿಯರ್ ಕಥೆ ಹೇಳಲಿದ್ದೇನೆ. ಬಹಳ ರಿಯಲಿಸ್ಟಿಕ್ ಆಗಿ ಮೂಡಿಬರಲಿದೆ. ಪ್ರೇಕ್ಷಕನಿಗೆ ತನ್ನ ಕಣ್ಣೆದುರೇ ನಡೆಯುತ್ತಿದೆ ಎಂಬ ಫೀಲಿಂಗ್ ಕೊಡಲಿದೆ, ಆ್ಯಕ್ಷನ್ ಓರಿಯೆಂಟೆಡ್ ಚಿತ್ರ ಇದಾಗಿದ್ದು, ಜನವರಿಯಲ್ಲಿ ಸೆಟ್ಟೇರಲಿದೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳೂ ಸೇರಿದಂತೆ ಹಿಂದಿಯಲ್ಲೂ ಇದು ರಿಲೀಸ್ ಆಗಲಿದೆ ಎಂದು ಪಿಸಿ ಶೇಖರ್ ತಿಳಿಸಿದ್ದಾರೆ.
ನಟ ಪ್ರಜ್ವಲ್ ದೇವರಾಜ್ ಕೈಯಲ್ಲಿ ಈಗಾಗಲೇ ಮೂರು ಚಿತ್ರಗಳಿವೆ. ಈಗ ಹೊಸ ಚಿತ್ರಕ್ಕೆ ಸಿದ್ಧರಾಗಿದ್ದಾರೆ. ಇನ್‌ಸ್ಪೆಕ್ಟರ್ ವಿಕ್ರಂ, ಅರ್ಜುನ್ ಗೌಡ, ವೀರಂ ಚಿತ್ರಗಳಲ್ಲಿ ನಟಿಸುತ್ತಿರುವ ಪ್ರಜ್ವಲ್, ರಾಮ್ ನಾರಾಯಣ್ ನಿರ್ದೇಶನದ ಹೊಸ ಚಿತ್ರಕ್ಕೂ ಸಹಿ ಮಾಡಿದ್ದಾರೆ.
Advertisement