ಟಾಲಿವುಡ್ ನಲ್ಲಿ ದೊಡ್ಮನೆ ಹುಡುಗ ಪುನೀತ್!
ಬೆಂಗಳೂರು: ದೊಡ್ಮನೆ ಹುಡುಗ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಎರಡು ಸಿಹಿ ಸುದ್ದಿ ಲಭಿಸಿವೆ.
ಪುನೀತ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಯುವರತ್ನ ' ಚಿತ್ರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಚಿತ್ರದ ಕುರಿತು ದೊಡ್ಡ ಸುದ್ದಿಯೊಂದು ಸೋಮವಾರ ಬೆಳಗ್ಗೆ 11 ಗಂಟೆಗೆ ಅಭಿಮಾನಿಗಳಿಗೆ ನೀಡುವುದಾಗಿ ಹೇಳಿದ್ದರು. ಕೊಟ್ಟ ಮಾತಿನಂತೆ ‘ಯುವರತ್ನ’ದ ಮೊದಲ ಪವರ್ ಫುಲ್ ಹಾಡು ‘ಪವರ್ ಆಫ್ ಯೂತ್’ ಡಿ. 2ರಂದು ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದಾರೆ.
ಕೇವಲ ಪುನೀತ್ ಅವರ ಕನ್ನಡಾಭಿಮಾನಿಗಳಿಗೆ ಮಾತ್ರ ಸಿಹಿ ಸುದ್ದಿಯನ್ನು ಮೀಸಲಿಡದೇ, ಟಾಲಿವುಡ್ ನ ಸಿನಿರಸಿಕರಿಗೂ ಸಂತಸದ ಸುದ್ದಿಯೊಂದು ಚಿತ್ರತಂಡ ಹಂಚಿಕೊಂಡಿದೆ.
ಚಿತ್ರದ ಕುರಿತು ಟ್ವೀಟ್ ಮಾಡಿರುವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ‘ಯುವರತ್ನ' ಚಿತ್ರ ತೆಲುಗಿನಲ್ಲೂ ಬಿಡುಗಡೆಗೊಳ್ಳಲಿದ್ದು, ನಿಮ್ಮ ಬೆಂಬಲ ಮತ್ತು ಹಾರೈಕೆ ಇರಲಿ’ ಎಂದು ಬರೆದುಕೊಂಡಿದ್ದಾರೆ.
ಇದೇ ಮೊದಲ ಬಾರಿಗೆ ತೆಲುಗಿನಲ್ಲೂ ಈ ಚಿತ್ರ ತೆರೆ ಕಾಣಲಿದ್ದು, ಈ ಮೂಲಕ ಟಾಲಿವುಡ್‌ಗೂ ಪುನೀತ್ ಪದಾರ್ಪಣೆ ಮಾಡಲಿದ್ದಾರೆ. ಈ ಸುದ್ದಿ ತಿಳಿದ ಅಪ್ಪು ಅಭಿಮಾನಿಗಳು ಸಂತಸಗೊಂಡಿದ್ದು, ಚಿತ್ರ ನೋಡಲು ಕಾತರರಾಗಿದ್ದಾರೆ.
‘ಪವರ್ ಆಫ್ ಯೂತ್’ ಹಾಡಿಗೆ ರಾಮ್‌ಜೋಗಯ್ಯ ಶಾಸ್ತ್ರಿ ಸಾಹಿತ್ಯ ಬರೆದಿದ್ದು, ನಕಾಶ್ ಅಜೀಜ್ ಅವರ ಧ್ವನಿಯಲ್ಲಿ ಹಾಡು ಮೂಡಿ ಬಂದಿದೆ.
ಈಗಾಗಲೇ ಯುವರತ್ನ ಚಿತ್ರೀಕರಣ ಸಂಪೂರ್ಣವಾಗಿ ಪೂರ್ಣಗೊಂಡಿದೆ. ಚಿತ್ರದಲ್ಲಿ ಕಾಲಿವುಡ್ ಬೆಡಗಿ ಶಯೇಷಾ ಪುನೀತ್ ಗೆ ಜೋಡಿಯಾಗಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಡಿ ಈ ಚಿತ್ರಕ್ಕೆ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಪ್ರಕಾಶ್ ರಾಜ್, ವಸಿಷ್ಠ ಸಿಂಹ, ದಿಗಂತ್, ಸೋನು ಗೌಡ ನಟಿಸಿದ್ದಾರೆ.
ಎಸ್. ತಮನ್ ಸಂಗೀತ ಸಂಯೋಜನೆ ಮಾಡಿದ್ದು, ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣವಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ