
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಡ್ರಗ್ಸ್ ದಂಧೆಯ ಸಂಬಂಧ ದಿನಕ್ಕೊಂದು ಹೊಸ ಮಾಹಿತಿ ಹೊರಬೀಳುತ್ತಿವೆ. ಸಿಸಿಬಿ ಕಸ್ಟಡಿಯಲ್ಲಿರುವ ನಟಿ ರಾಗಿಣಿ ಈಗಾಗಲೇ ಬಂಧನಕ್ಕೊಳಗಾಗಿರುವ ಲೂಮ್ ಪೆಪ್ಪರ್ ಸಾಂಬಾ ಜತೆ ರಾಗಿಣಿ ಹಣಕಾಸಿನ ವ್ಯವಹಾರ ನಡೆಸಿರುವುದು ಗೊತ್ತಾಗಿದೆ.
ರಾಗಿಣಿಯನ್ನು ವಶಕ್ಕೆ ಪಡೆದುಕೊಂಡ ಮರುದಿನವೇ ಲೋಮ್ ಪೆಪ್ಪರ್ ಸಾಂಬಾ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ, ಸಾಂಬಾ ಜೊತೆ ಕಳೆದ ಆರು ತಿಂಗಳಿಂದ ರಾಗಿಣಿ ಸಂಪರ್ಕ ಹೊಂದಿರುವುದು ತಿಳಿದು ಬಂದಿದೆ. ಇನ್ನು ಡ್ರಗ್ಸ್ ದಂಧೆಯಲ್ಲಿ ತಮ್ಮಪಾಲ್ಗೊಂಡಿರುವಿಕೆ ಬಗ್ಗೆ ರಾಗಿಣಿ ಹೆಚ್ಚಿನ ಮಾಹಿತಿ ನೀಡುತ್ತಿಲ್ಲ.
ಪಾರ್ಟಿಯಲ್ಲಿ ಸಾಂಬಾನನ್ನು ಭೇಟಿಯಾಗಿದ್ದಾಗಿ ತಿಳಿಸಿರುವ ರಾಗಿಣಿ ತಾನು ಮತ್ತು ಆತ ಸ್ನೇಹಿತರಲ್ಲ ಎಂದು ಹೇಳಿದ್ದಾರೆ. ಆದರೆ ಹಲವು ತಿಂಗಳಿಂದ ಸಂಪರ್ಕದಲ್ಲಿರುವುದಾಗಿ ಹೇಳಿದ್ದಾರೆ, ಇಬ್ಬರ ನಡುವೆ ಕೋಡ್ ವರ್ಡ್ ನಲ್ಲಿ ಮೆಸೇಜ್ ಗಳು ನಡೆದಿವೆ. ಮಾರಾಟಗಾರ ಮತ್ತು ಖರೀದಿಸುವವರ ನಡುವೆ ನಡೆಯುವ ಸಂಭಾಷಣೆ ರೀತಿಯಲ್ಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಕೆ ಯಾವುದೇ ಪಾರ್ಟಿಗೆ ಹೋದರು ಅಲ್ಲಿಗೆ ಸಾಂಬಾ ಡ್ರಗ್ಸ್ ಪೂರೈಸುತ್ತಿದ್ದ ಎಂದು ತಿಳಿದು ಬಂದಿದೆ.
ಸಾಂಬಾ ಕಳುಹಿಸಿದ ಡ್ರಗ್ಸ್ ಅನ್ನು ಆಕೆ ಅಪ್ತರು ಕಲೆಕ್ಟ್ ಮಾಡುತ್ತಿದ್ದರು. ಇಬ್ಬರ ನಡುವೆ ನಡೆದಿರುವ ಹಣಕಾಸು ವ್ಯವಹಾರ ಪತ್ತೆಯಾಗಿದೆ. ಆದರೆ ಇದು ನೇರವಾಗಿ ಡ್ರಗ್ಸ್ ದಂಧೆಗೆ ನಡೆದಿರುವ ವ್ಯವಹಾರವೇ ಎಂಬುದು ಇನ್ನೂ ಪತ್ತೆಯಾಗಬೇಕಿದೆ. ಆದರೆ ಇಬ್ಬರ ನಡುವೆ ನಡೆದ ಸಂಭಾಷಣೆಯನ್ನು ನಟಿ ರಾಗಿಣಿ ಡಿಲೀಟ್ ಮಾಡಿದ್ದು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾರೆ . ಹೀಗಾಗಿ ನಮ್ಮ ತಜ್ಞರ ತಂಡ ಮೆಸೇಜ್ ಗಳನ್ನು ವಾಪಾಸ್ ಪಡೆಯಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ಮತ್ತೂಂದೆಡೆ ರಾಗಿಣಿ ಮತ್ತಿತರ ಆರೋಪಿಗಳ ಜತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಕೇರಳ ಮೂಲದ ನಿಯಾಜ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Advertisement