ಸಿಸಿಬಿಯಿಂದ ನೊಟೀಸ್ ಬಂದಿದ್ದು ನೋವಾಗಿಲ್ಲ, ನಂತರ ನನ್ನನ್ನು ಬಿಂಬಿಸಿದ ರೀತಿ ಬೇಸರ ತಂದಿದೆ- ಆಂಕರ್ ಅನುಶ್ರೀ

ಕನ್ನಡದ ಹಿರಿತೆರೆ, ಕಿರುತೆರೆಯ ಕೆಲವು ಕಲಾವಿದರು ಡ್ರಗ್ಸ್ ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಬಿ ತೀವ್ರ ವಿಚಾರಣೆ ನಡೆಸುತ್ತಿದ್ದು ಕೆಲ ದಿನಗಳ ಹಿಂದೆ ಮಂಗಳೂರು ಸಿಸಿಬಿ ಪೊಲೀಸರು ಆಂಕರ್ ಮತ್ತು ನಟಿ ಅನುಶ್ರೀಗೆ ನೊಟೀಸ್ ನೀಡಿತ್ತು.
ಕಳೆದ ವಾರ ಮಂಗಳೂರು ಸಿಸಿಬಿ ಕಚೇರಿಯಲ್ಲಿ ವಿಚಾರಣೆ ಮುಗಿಸಿ ಹೊರಬಂದ ಅನುಶ್ರೀ ಮಾಧ್ಯಮಗಳ ಜೊತೆ ಮಾತನಾಡುತ್ತಿರುವುದು
ಕಳೆದ ವಾರ ಮಂಗಳೂರು ಸಿಸಿಬಿ ಕಚೇರಿಯಲ್ಲಿ ವಿಚಾರಣೆ ಮುಗಿಸಿ ಹೊರಬಂದ ಅನುಶ್ರೀ ಮಾಧ್ಯಮಗಳ ಜೊತೆ ಮಾತನಾಡುತ್ತಿರುವುದು

ಬೆಂಗಳೂರು: ಕನ್ನಡದ ಹಿರಿತೆರೆ, ಕಿರುತೆರೆಯ ಕೆಲವು ಕಲಾವಿದರು ಡ್ರಗ್ಸ್ ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಬಿ ತೀವ್ರ ವಿಚಾರಣೆ ನಡೆಸುತ್ತಿದ್ದು ಕೆಲ ದಿನಗಳ ಹಿಂದೆ ಮಂಗಳೂರು ಸಿಸಿಬಿ ಪೊಲೀಸರು ಆಂಕರ್ ಮತ್ತು ನಟಿ ಅನುಶ್ರೀಗೆ ನೊಟೀಸ್ ನೀಡಿತ್ತು.

ಅದರಂತೆ ಅವರು ವಾರದ ಹಿಂದೆ ಮಂಗಳೂರಿನ ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿ ಬಂದಿದ್ದರು. ನಂತರ ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಬರುತ್ತಿರುವ ಸುದ್ದಿಗಳು, ಮಾತುಗಳ ಬಗ್ಗೆ ಸ್ವತಃ ಅನುಶ್ರೀಯೇ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಮೂಲಕ ಪ್ರತಿಕ್ರಿಯೆ ಕೊಟ್ಟಿದ್ದಾರೆ.

''ಸೆಪ್ಟೆಂಬರ್ 24, 2020, ನನ್ನ ಜೀವನದ ಯಾವ ಘಟ್ಟದಲ್ಲಿಯೂ ನಾನು ಮತ್ತೆ ನೆನಪಿಸಿಕೊಳ್ಳಲು ಇಷ್ಟಪಡದಿರುವ ದಿನ. 12 ವರ್ಷಗಳ ಹಿಂದೆ ನಾನು ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ಗೆದ್ದಾಗ ಅದರಿಂದ ನನಗೆ ಮುಂದೆ ಜೀವನದಲ್ಲಿ ಇದು ಮುಳ್ಳಾಗಬಹುದು ಎಂದು ಅಂದುಕೊಂಡಿರಲಿಲ್ಲ. ಈ ವಿಡಿಯೊವನ್ನು ನಾನು ನನ್ನನ್ನು ಸಮರ್ಥಿಸಿಕೊಳ್ಳಲು ಅಥವಾ ಜನರಿಂದ ಕರುಣೆ ಪಡೆದುಕೊಳ್ಳಲು ಮಾಡುತ್ತಿಲ್ಲ'' ಎಂದು ಹೇಳಿದ್ದಾರೆ.

''ನನಗೆ ಸಿಸಿಬಿ ನೊಟೀಸ್ ಬಂದು ವಿಚಾರಣೆಗೆ ಹಾಜರಾದ ನಂತರ ಹಲವರು ಹಲವು ರೀತಿಯಲ್ಲಿ ನನ್ನ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಸ್ಪಷ್ಟನೆ ಕೊಡಲು ನಾನು ವಿಡಿಯೊವನ್ನು ಮಾಡಿ ಹಾಕಿದ್ದೇನೆ, ನನಗೆ ಸಿಸಿಬಿ ನೊಟೀಸ್ ಬಂದಿದ್ದು ಬೇಸರವಾಗಿಲ್ಲ, ನೊಟೀಸ್ ಬಂದು ನಾನು ಸಿಸಿಬಿ ಕಚೇರಿಗೆ ಹೋದ ಮಾತ್ರಕ್ಕೆ ಆರೋಪಿ ಎಂದೊ, ಅಪರಾಧಿ ಎಂದೊ ಅರ್ಥವಲ್ಲ, ಆದರೆ ನಂತರ ನನ್ನನ್ನು ಬಿಂಬಿಸಿದ ರೀತಿ ತುಂಬಾ ಬೇಸರವನ್ನುಂಟುಮಾಡಿದೆ'' ಎಂದು ಅತ್ತುಕೊಂಡಿದ್ದಾರೆ.

''ಕಳೆದ ಒಂದು ವಾರದಿಂದ ನನ್ನ ಮತ್ತು ನನ್ನ ಕುಟುಂಬದವರ ನೆಮ್ಮದಿ ಹಾಳಾಗಿ ಹೋಗಿದೆ. ಈ ಕಷ್ಟಕಾಲದಲ್ಲಿ ನನ್ನ ಜೊತೆಗೆ ನಿಂತ ಕನ್ನಡಿಗರಿಗೆ, ನನಗೆ ಅನ್ನ ಹಾಕಿದ ಸಂಸ್ಥೆಗೆ, ಜೀ ಕನ್ನಡ ವಾಹಿನಿಯ ಸಿಬ್ಬಂದಿಗೆ ನಾನು ಋಣಿಯಾಗಿದ್ದೇನೆ. ಅವರ ಉಪಕಾರವನ್ನು ಎಂದಿಗೂ ಮರೆಯುವುದಿಲ್ಲ, ನನಗೆ ಹೆಸರು, ಯಶಸ್ಸು ತಂದುಕೊಟ್ಟಿದ್ದು ಇದೇ ಕನ್ನಡ ಜನತೆ, ಅದಕ್ಕೆ ಧಕ್ಕೆಯನ್ನುಂಟುಮಾಡುವ ತಪ್ಪು ಕೆಲಸವನ್ನು ಈ ಹಿಂದೆ ಮಾಡಿಲ್ಲ, ಇನ್ನು ಮುಂದೆ ಮಾಡುವುದೂ ಇಲ್ಲ'' ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com