ನಟ ದಿಗಂತ್ ಅಭಿನಯಿಸಿ, ರಾಘವೇಂದ್ರ ಎಂ.ನಾಯಕ್ ನಿರ್ದಶಿಸಿರುವ ಚೊಚ್ಚಲ ಸಿನಿಮಾ ಮಾರಿಗೋಲ್ಡ್ ಶೂಟಿಂಗ್ ಪೂರ್ಣಗೊಂಡಿದ್ದು ಸೆನ್ಸಾರ್ ಮಂಡಳಿ ಅಂಗಳಕ್ಕೆ ತೆರಳಲು ಸಿದ್ಧವಾಗಿದೆ.
ಈಗಾಗಲೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಚಿತ್ರದ ಡಬ್ಬಿಂಗ್ ಕಾರ್ಯ ಮುಗಿದು, ಹಿನ್ನೆಲೆ ಸಂಗೀತ ಅಳವಡಿಕೆ ಕೊನೆಯ ಹಂತದಲ್ಲಿದೆ. ಕ್ರೈಮ್ ಥ್ರಿಲ್ಲರ್ ಕಥಾನಕ ಹೊಂದಿರುವ ಈ ಚಿತ್ರವನ್ನು ರಾಘವೇಂದ್ರ ಎಂ.ನಾಯಕ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಸಿನಿಮಾ ಶೂಟಿಂಗ್ ಮುಗಿದಿದ್ದು, ರಿರೆಕಾರ್ಡಿಂಗ್ ಮಾಡುತ್ತಿದ್ದೇವೆ, ಇದರ ಜೊತೆಗೆ ಸಿನಿಮಾದ ಟ್ರೇಲರ್ ಅನ್ನು ಆದಷ್ಟು ಶೀಘ್ರವೇ ಬಿಡುಗಡೆ ಮಾಡಲು ಸಿದ್ಧತೆ ಮಾಡುತ್ತಿದ್ದೇವೆ ಎಂದು ನಿರ್ದೇಶಕ ರಾಘವೇಂದ್ರ ನಾಯಕ್ ತಿಳಿಸಿದ್ದಾರೆ.
ಥಿಯೇಟರ್ ನಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿರುವ ಚೊಚ್ಚಲ ನಿರ್ದೇಶಕರು, ಒಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡುವ ಆಯ್ಕೆಯನ್ನು ಸಹ ತಳ್ಳಿಹಾಕುತ್ತಿಲ್ಲ. "ವಿವಿಧ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಮಾತುಕತೆಗಳು ನಡೆಯುತ್ತಿವೆ, ಮತ್ತು ಕೋವಿಡ್ ಪರಿಸ್ಥಿತಿ ಉತ್ತುಂಗಕ್ಕೆ ಬಂದರೆ, ನಾವು ಡಿಜಿಟಲ್ ಬಿಡುಗಡೆಗೆ ಹೋಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದು ರಾಘವೇಂದ್ರ ಅವರ ನಿರ್ದೇಶನದ ಚೊಚ್ಚಲ ಚಿತ್ರ. ದಿಗಂತ್ ಅವರ ಫಸ್ಟ್‌ಲುಕ್ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು, ಮೊದಲ ಬಾರಿಗೆ ದಿಗಂತ್ ಹೊಸ ರೀತಿಯ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎನ್ನುತ್ತಿದೆ ಚಿತ್ರತಂಡ. ಆರ್.ವಿ.ಕ್ರಿಯೇಷನ್ಸ್ ಮೂಲಕ ರಘುವರ್ಧನ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ರಘುವರ್ಧನ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಈ ಚಿತ್ರಕ್ಕೆ ವೀರ್ ಸಮರ್ಥ್ ಅವರ ಸಂಗೀತವಿದ್ದು, ಯೋಗರಾಜ್ ಭಟ್, ಕವಿರಾಜ್ ಮತ್ತು ವಿಜಯ್ ಭರಮಸಾಗರ ಅವರು ಸಾಹಿತ್ಯ ಬರೆದಿದ್ದಾರೆ.
ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ರಾಜ್ ಸಾಹಸ, ಕಲೈ ಅವರ ನೃತ್ಯ ನಿರ್ದೇಶನವಿದೆ. ಬೆಂಗಳೂರು, ಸಕಲೇಶಪುರದ ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರದಲ್ಲಿ ಸಂಗೀತಾ ಶೃಂಗೇರಿ ನಾಯಕಿಯಾಗಿದ್ದಾರೆ. ಉಳಿದಂತೆ ಸಂಪತ್‌ಕುಮಾರ್, ಕಾಕ್ರೋಚ್ ಸುಧಿ, ಯಶ್‌ಶೆಟ್ಟಿ, ವಜ್ರಾಂಗ್ ಶೆಟ್ಟಿ, ಬಾಲ ರಾಜ್ವಾಡಿ, ಗಣೇಶ್‌ರಾವ್, ಭಾಸ್ಕರ್ ಪಾಂಡವಪುರ, ಮನಮೋಹನ್ ರೈ, ಮಹಾಂತೇಶ್ ಹೀರೆಮಠ, ಮಿಮಿಕ್ರಿ ಗೋಪಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.
Advertisement