ಬೆಂಗಳೂರು: ಬ್ಯಾಂಕಿನಲ್ಲಿ ಸಾಲ ಕೊಡಿಸುವ ವಿಚಾರದಲ್ಲಿ ಶ್ಯೂರಿಟಿ ಹಾಕುವ ಮೂಲಕ ನಟ ದರ್ಶನ್ ಗೆ 25 ಕೋಟಿ ರೂಪಾಯಿ ವಂಚನೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಆರೋಪಿ ಮಹಿಳೆ ಅರುಣ ಕುಮಾರಿ ನಿರ್ಮಾಪಕ ಉಮಾಪತಿ ಮೇಲೆ ನೇರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಪ್ರತಿಕ್ರಿಯೆ ನೀಡಿದ ನಿರ್ಮಾಪಕ ಉಮಾಪತಿ, ಅರುಣಾ ಕುಮಾರಿಯವರ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ, ಆಕೆ ನನಗೆ ಲೆಕ್ಕಕ್ಕಿಲ್ಲ. ನಾನು ನೇರ ವ್ಯಕ್ತಿ, ತಪ್ಪು ಮಾಡಿಲ್ಲ, ಹಾಗಾಗಿ ಯಾರ ಮಾತಿಗೂ, ಆರೋಪಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ಪ್ರಕರಣ ಸುಖಾಂತ್ಯವಾಗಿದೆ ಎಂದು ದರ್ಶನ್ ಅವರೇ ಹೇಳಿದ್ದಾರೆ, ಹಾಗಾಗಿ ಇನ್ನು ಮುಂದೆ ನಾವು ಯಾವುದೂ ಮಾತನಾಡುವುದಿಲ್ಲ, ಕಾನೂನು ಪ್ರಕಾರ ಮುಂದುವರಿಯುತ್ತೇನೆ, ನಾನು ಕಾನೂನಿಗೆ ತಲೆಬಾಗುವ ವ್ಯಕ್ತಿ, ಅಷ್ಟಕ್ಕೂ ನಾನು ತಪ್ಪು ಮಾಡಿದ್ದರೆ ದಾಖಲೆ ಇದ್ದರೆ ತೋರಿಸಲಿ ಎಂದರು.
ಇದೊಂದು ಸಣ್ಣ ವಿಷಯ, ನಾನಾಗಲಿ-ದರ್ಶನ್ ಅವರಾಗಲಿ ಆರೋಪ ಮಾಡುತ್ತಿಲ್ಲ, ದರ್ಶನ್ ಅವರು ಬಂದು ದೂರು ನೀಡಿ ಮಾಧ್ಯಮಗಳ ಮುಂದೆ ಮಾತಾಡಿದ್ದರಿಂದ ವಿಷಯ ದೊಡ್ಡದಾಯಿತು. ನನ್ನ ಮತ್ತು ದರ್ಶನ್ ಸರ್ ಮಧ್ಯೆ ಈ ವಿಚಾರದಲ್ಲಿ ಯಾವ ಮನಸ್ತಾಪವೂ ಇಲ್ಲ, ಇಲ್ಲಿಗೇ ಬಿಟ್ಟುಬಿಟ್ಟಿದ್ದೇವೆ ಎಂದರು.
ಇದಕ್ಕೂ ಮುನ್ನ ಅವರು ಬೆಂಗಳೂರಿನ ಬನಶಂಕರಿ ಅಮ್ಮನ ದೇಗುಲಕ್ಕೆ ಪತ್ನಿ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
Advertisement