ಬೆಂಗಳೂರು: ದೇಶದಲ್ಲಿ ಕೊರೋನಾ ಎರಡನೇ ಅಲೆ ಮಿತಿ ಮೀರಿ ಹರಡುತ್ತಿರುವುದರಿಂದ ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರಗಳೇ ಲಾಕ್ ಡೌನ್ ಘೋಷಣೆ ಮಾಡುತ್ತಿವೆ. ಅಂತೆ ಕರ್ನಾಟಕದಲ್ಲೂ ಮೇ 10ರಿಂದ 14 ದಿನಗಳ ಕಾಲ ಲಾಕ್ ಡೌನ್ ಘೋಷಿಸಲಾಗಿದೆ.
ಇದರ ಮಧ್ಯೆ ಬಿಗ್ ಬಾಸ್ ಕನ್ನಡ ಸೀಸನ್ 8 ಆವೃತ್ತಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗುತ್ತಿರುವುದಾಗಿ ಕಲರ್ಸ್ ಕನ್ನಡ ವಾಹಿನಿ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅಧಿಕೃತ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಗುಂಡ್ಕಲ್ ಅವರು ಬಿಗ್ ಬಾಸ್ ಶುರುವಾಗಿ ಇವತ್ತಿಗೆ ಎಪ್ಪತ್ತೊಂದನೇ ದಿನ. ಆದರೆ ಅರ್ಧಕ್ಕೆ ಶೋವನ್ನು ನಿಲ್ಲಿಸಬೇಕಾಗಿದೆ. ಟಿವಿ ಅಸೋಸಿಯೇಷನ್ ಅಧ್ಯಕ್ಷ ಎಸ್ ವಿ ಶಿವಕುಮಾರ್ ರಿಯಾಲಿಟಿ ಶೋ ಹಾಗೂ ಧಾರಾವಾಹಿ ಶೂಟಿಂಗ್ ನಿಲ್ಲಿಸಬೇಕು ಎಂದು ಸುತ್ತೋಲೆ ಹೊರಡಿಸಿದ್ದಾರೆ. ಹೀಗಾಗಿ ನಾವು ನಮ್ಮ ಶೋವನ್ನು ನಿಲ್ಲಿಸುತ್ತಿರುವುದಾಗಿ ಹೇಳಿದ್ದಾರೆ.
ಗುಂಡ್ಕಲ್ ಫೇಸ್ ಬುಕ್ ನಲ್ಲಿ ಬರೆದಿರುವ ಸಾಲುಗಳು
ಬಿಗ್ ಬಾಸ್ ಶುರುವಾಗಿ ಇವತ್ತಿಗೆ ಎಪ್ಪತ್ತೊಂದನೇ ದಿನ. ಪಿಸಿಆರ್ ನಲ್ಲಿ ನಿಂತು ಈ ಮನೇಲಿರೋ ಹನ್ನೊಂದು ಜನ ಓಡಾಡುತ್ತಿರುವುದನ್ನು ನೋಡಿದಾಗ ಒಂದಕ್ಕಿಂತ ಹೆಚ್ಚು ಭಾವನೆಗಳು ಒಂದೇ ಸಲಕ್ಕೆ ಬಂದು ಮನಸ್ಸಿಗೆ ವಿಚಿತ್ರವಾದ ತಳಮಳ.
ಹೊರಗಡೆ ಎದುರಾಗಿರುವ ಕಷ್ಟದ ಸವಾಲು ಗೊತ್ತಿಲ್ಲದೇ ಒಳಗಡೆ ಇರುವವರೆಲ್ಲಾ ಖುಷಿಯಾಗಿದ್ದಾರೆ. ಐಸೋಲೇಷನ್ನಿನಲ್ಲಿ ಇರುವುದರಿಂದ ಸುರಕ್ಷಿತವಾಗಿಯೂ ಇದ್ದಾರೆ. ಎಲ್ಲರಿಗೂ ಹೊರಗಡೆ ಆಗಿರುವ ಬೆಳವಣಿಗೆ ತಿಳಿಸಿ ನಾಳೆ ಹೊರಗಡೆ ಕರೆಯುತ್ತಿದ್ದೇವೆ. ಅನಂತರ ಅವರನ್ನು ಮತ್ತು ತಂಡವನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲು ವ್ಯವಸ್ಥೆ ಆಗುತ್ತಿದೆ.
ನೂರಾರು ದಿನಗಳ ಕೆಲಸ. ನೂರಾರು ಜನರ ಕೆಲಸ. ಎಲ್ಲವನ್ನೂ ಪಕ್ಕಕ್ಕಿಟ್ಟು ಶ್ರದ್ಧೆಯಿಂದ ಕೆಲಸ ಮಾಡಿದ ಒಂದು ತಂಡದ ಕನಸು ಅರ್ಧಕ್ಕೇ ನಿಂತಿದೆ. ಕಷ್ಟದ ತೀರ್ಮಾನವಾದರೂ ಸಮಾಧಾನ ಕೊಟ್ಟ ತೀರ್ಮಾನ.
ಮನಸ್ಸು ಭಾರವಾಗಿದೆ. ಈ ಶೋ ನಿಲ್ಲುತ್ತಿದೆ ಅಂತಲ್ಲ. ಹೊರಗಡೆ ಗಾಳಿಯಲ್ಲಿ ಓಡಾಡುತ್ತಿರುವ ಕಣ್ಣಿಗೆ ಕಾಣದ ಅನಿಶ್ಚಿತತೆಯಿಂದ ಇನ್ನಿಲ್ಲದ ಕಳವಳ.
ಎಲ್ಲರಿಗೂ ಈ ಕಳವಳಕ್ಕೊಂದು ಉತ್ತರ ಬೇಗ ಸಿಗಲಿ. ಸುರಕ್ಷಿತವಾಗಿರಿ.
Advertisement