ಕನ್ನಡದ ಹಿರಿಯ ನಟ ಬಿ.ಎಂ. ಕೃಷ್ಣೇಗೌಡ ವಿಧಿವಶ
ಕನ್ನಡ ಚಿತ್ರರಂಗ, ರಂಗಭೂಮಿಯ ಹಿರಿಯ ನಟ ಬಿ.ಎಂ. ಕೃಷ್ಣೇಗೌಡ (80) ಸೋಮವಾರ ನಿಧನರಾದರು.
ಕೆಲ ದಿನಗಳ ಹಿಂದೆ ಕೃಷ್ಣೇಗೌಡರಿಗೆ ಕೊರೋನಾ ಸೋಂಕು ತಗುಲಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖವಾಗಿದ್ದರು. ಆದರೆ ವಯೋಸಹಜ ಕಾಯಿಲೆಯಿಂದ ನರಳುತ್ತಿದ್ದ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
"ಮುಖ್ಯಮಂತ್ರಿ" ನಾಟಕದಲ್ಲಿನ ಪಾತ್ರದಿಂದ ಹೆಚ್ಚು ಜನಪ್ರಿಯವಾಗಿದ್ದ ಕೃಷ್ಣೇಗೌಡ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಅವರ ಕಲಾಸೇವೆಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಸಹ ಲಭಿಸಿತ್ತು.
ಇನ್ನು ಕೃಷ್ಣೇಗೌಡ ಕೇವಲ ಚಲನಚಿತ್ರ, ರಂಗಭೂಮಿಯ ನಟನೆಗೆ ಮಾತ್ರವಲ್ಲದೆ ರಾಜ್ಯ ಮಟ್ಟದ ವಾಲಿಬಾಲ್ ಆಟಗಾರರಾಗಿ ಸಹ ಹೆಸರಾಗಿದ್ದರು.
ಹಿರಿಯ ಕಲಾವಿದರ ನಿಧನಕ್ಕೆ ಚಿತ್ರೋದ್ಯಮದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕೊರೋನಾ ಕಾರಣದಿಂದ ಇತ್ತೀಚೆಗೆ ಕನ್ನಡ ಸಿನಿಮಾ ರಂಗದ ಅನೇಕರು ನಿಧನರಾಗಿದ್ದಾರೆ. ಶಂಖನಾದ ಅರವಿಂದ್, ರೇಣುಕಾ ಶರ್ಮಾ, ನಿರ್ಮಾಪಕ ರಾಮು. ರಂಗಭೂಮಿ ಕಲಾವಿದ ರಾಜಾರಾಂ, ಕನ್ನಡ ಸಿನಿಮಾದ ನಿರ್ಮಾಪಕ ಹಾಗೂ ವಿತರಕ ದೀಪಕ್ ಸಾಮಿದೊರೈ ಸೇರಿ ಅನೇಕರು ಇದಾಗಲೇ ಇಹಲೋಕ ತ್ಯಜಿಸಿದ್ದಾರೆ ಎನ್ನುವುದು ಖೇದದ ಸಂಗತಿ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ