ಹತ್ತು ಅವತಾರಗಳಲ್ಲಿ ನಟ ಶರಣ್: ಡಿಸೆಂಬರ್ 10ರಂದು "ಅವತಾರ ಪುರುಷ" ತೆರೆಗೆ

ಪುಷ್ಕರ್ ಫಿಲಂಸ್ ಲಾಂಛನದಲ್ಲಿ ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಿಸಿರುವ "ಅವತಾರ ಪುರುಷ" ಚಿತ್ರ ಇದೇ ಡಿಸೆಂಬರ್ 10ರಂದು ಬಿಡುಗಡೆಯಾಗುತ್ತಿದೆ.
ಶರಣ್ - ಆಶಿಕಾ ರಂಗನಾಥ್
ಶರಣ್ - ಆಶಿಕಾ ರಂಗನಾಥ್
Updated on

ಬೆಂಗಳೂರು: ಪುಷ್ಕರ್ ಫಿಲಂಸ್ ಲಾಂಛನದಲ್ಲಿ ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಿಸಿರುವ "ಅವತಾರ ಪುರುಷ" ಚಿತ್ರ ಇದೇ ಡಿಸೆಂಬರ್ 10ರಂದು ಬಿಡುಗಡೆಯಾಗುತ್ತಿದೆ.

ನಟ ಶರಣ್ ಹತ್ತು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದು ತಮ್ಮ ಸಿನಿಪಯಣದಲ್ಲೇ ದೊಡ್ಡ ಬಜೆಟ್ ನ ಚಿತ್ರ ಎಂದು ಹೇಳಿದ್ದಾರೆ. 

ನನ್ನ ಈವರೆಗಿನ ಸಿನಿಪಯಣದಲ್ಲೇ ದೊಡ್ಡ ಬಜೆಟ್ ನ‌ ಚಿತ್ರವಿದು. ಇಂತಹ ಅದ್ದೂರಿ ಚಿತ್ರ ನಿರ್ಮಾಣಕ್ಕೆ ಮುಂದಾದ ನಿರ್ಮಾಪಕ ಪುಷ್ಕರ್ ಅವರ ಧೈರ್ಯ ಮೆಚ್ಚಲೇಬೇಕು. ಇನ್ನೂ ನಿರ್ದೇಶಕ‌ ಸಿಂಪಲ್ ಸುನಿ‌, ಅವರ ಹೆಸರಿನಲ್ಲ ಮಾತ್ರ ಸಿಂಪಲ್ ಇಲ್ಲ. ಸಿಂಪಲೆಸ್ಟ್ ಸುನಿ ಅವರು. ಅವರ ಕಾರ್ಯವೈಖರಿ ಬಗ್ಗೆ ಎಷ್ಟು ಹೇಳಿದರು ಕಡಿಮೆ. ಇನ್ನೂ ನಾಯಕಿ ಆಶಿಕಾ ರಂಗನಾಥ್ ಸೇರಿದಂತೆ ಈ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ‌ ಸೊಗಸಾಗಿ ‌ಮೂಡಿಬಂದಿದೆ. ನಾನು ಸುಮಾರು ಹತ್ತು ಅವತಾರಗಳಲ್ಲಿ ಕಾಣಿಸಬಹುದು. ಇದೇ ಡಿಸೆಂಬರ್ ಹತ್ತರಂದು "ಅವತಾರ ಪುರುಷ" ನ ಆಗಮನವಾಗಲಿದೆ. ನೋಡಿ ಹಾರೈಸಿ ಎಂದರು ನಾಯಕ ಶರಣ್.

ಎಲ್ಲರೊಡನೆ ಉತ್ತಮ ಬಾಂಧವ್ಯ ಬೆಸೆದ ಸಿನಿಮಾ "ಅವತಾರ ಪುರುಷ". ಈ ತಂಡದಲ್ಲಿ ಎಲ್ಲರೂ ಒಂದೇ ಕುಟುಂಬದವರ ಹಾಗೆ ಇದ್ದೆವು. ಶರಣ್ ಹಾಗೂ ಸುನಿ ಅವರ ಕಾಂಬಿನೇಶನಲ್ಲಿ ಈ ಚಿತ್ರ ಹೇಗೆ ಬರಬಹುದು? ಎಂಬ ಕುತೂಹಲ ಇದೆ. ನಾನು ಚಿತ್ರ ನೋಡುವ ಕಾತುರದಲ್ಲಿದ್ದೀನಿ. ನಿರ್ದೇಶಕ ಸುನಿ ಹಾಗೂ ನಿರ್ಮಾಪಕ ಪುಷ್ಕರ್ ಅವರ ಸರಳತೆ ಬಗ್ಗೆ ಎಷ್ಟು ಹೇಳಿದರು ಕಡಿಮೆ. ಒಟ್ಟಿನಲ್ಲಿ ಉತ್ತಮ ಸಿನಿಮಾದಲ್ಲಿ ಅಭಿನಯಿಸಿದ ತೃಪ್ತಿಯಿದೆ. ಜನರು ಕೂಡ ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆಯಿದೆ ಎಂದು ಆಶಿಕಾ ರಂಗನಾಥ್ ಹೇಳಿದ್ದಾರೆ.

ನಾನು ವೆಬ್ ಸಿರೀಸ್ ಗೆ ಅಂತಾ ಮಾಡಿದ ಕಥೆಯಿದು. ಪುಷ್ಕರ್ ಅವರು ಈ ಕಥೆ ಕೇಳಿ, ವೆಬ್ ಸಿರೀಸ್ ಬೇಡ . ಸಿನಿಮಾ ಮಾಡೋಣ ಅಂದರು. ಎರಡು ಭಾಗಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಮೊದಲ ಭಾಗ ಡಿಸೆಂಬರ್ 10ರಂದು ಬಿಡುಗಡೆಯಾಗಲಿದೆ. ಎರಡನೇ ಭಾಗದ ಚಿತ್ರೀಕರಣ ಬಹುತೇಕ ಮುಗಿದಿದೆ. ನಿರ್ದೇಶಕನಿಗೆ ಸಿನಿಮಾ ಬಗ್ಗೆ ತನ್ನದೇ ಆದ ಒಂದು ಇಮೇಜಿನೇಶನ್ ಇರುತ್ತದೆ.. ಆದರೆ ಇಮೇಜಿನೇಶನ್ ಗೂ ಮೀರಿ "ಅವತಾರ ಪುರುಷ" ಚಿತ್ರ ಬಂದಿದೆ. ಶರಣ್ - ಆಶಿಕಾ ರಂಗನಾಥ್ ಅವರ ಜೋಡಿ ನೋಡುಗರನ್ನು ಮೋಡಿ ಮಾಡಲಿದೆ. ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಭವ್ಯ, ಸುಧಾರಣಿ, ಮುಂತಾದ ಅನುಭವಿ ಕಲಾವಿದರು ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ. ವಿಜಯ್ ಚೆಂಡೂರ್ ನಟನೆಯೊಂದಿಗೆ ಸ್ಕ್ರಿಪ್ಟ್ ವರ್ಕ್ ನಲ್ಲೂ ನೆರವಾಗಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಉತ್ತಮವಾಗಿ ಮೂಡಿಬಂದಿದೆ. ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ "ಅವತಾರ ಪುರುಷ" ನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು ನಿರ್ದೇಶಕ ಸಿಂಪಲ್ ಸುನಿ ಹೇಳಿದ್ದಾರೆ.

ನನ್ನ ಪ್ರಕಾರ "ಆಪ್ತಮಿತ್ರ" ನಂತರ ಕನ್ನಡದಲ್ಲಿ ಬರುತ್ತಿರುವ ಸಿನಿಮಾ "ಅವತಾರ ಪುರುಷ". ಹತ್ತು, ಹದಿನೈದು ವರ್ಷಗಳಲ್ಲಿ ಈ ರೀತಿಯ ಸಿನಿಮಾ ಬಂದಿಲ್ಲ ಅನಿಸುತ್ತದೆ. ನಾಯಕ ಶರಣ್, ನಾಯಕಿ ಆಶಿಕಾ ರಂಗನಾಥ್ ಹಾಗೂ ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಎಲ್ಲಾ ಕಲಾವಿದರ ಸಹಕಾರದಿಂದ ಈ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಡಿಸೆಂಬರ್ ಹತ್ತರಂದು ಸುಮಾರು 350ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಭಾಗ 1 ಬಿಡುಗಡೆಯಾದ ನೂರನೇ ದಿನಕ್ಕೆ ಸರಿಯಾಗಿ ಈ ಚಿತ್ರದ ಎರಡನೇ ಭಾಗ ಕೂಡ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com