ಗಾನ ಗಂಧರ್ವ ಎಸ್ ಪಿಬಿ ಪ್ರಥಮ ಪುಣ್ಯತಿಥಿ: ಗಣ್ಯರು, ಕಲಾವಿದರಿಂದ ಸ್ಮರಣೆ, ಗಾನಗಾರುಡಿಗನಿಗೆ ಭಕ್ತಿಯ ನಮನ

ಹಾಡುಗಳ ಮೂಲಕ ಕೋಟ್ಯಾಂತರ ಜನರನ್ನು ರಂಜಿಸಿದ ಮಹಾನ್ ಗಾಯಕ, ಸರಿ ಸುಮಾರು 16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಎಲ್ಲರ ಮನಗೆದ್ದ ಸ್ವರ ಮಾಂತ್ರಿಕ, ಭಾರತೀಯ ಚಿತ್ರರಂಗದ ಮೇರು ಗಾಯಕ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಮೊದಲ ಪುಣ್ಯಸ್ಮರಣೆ ಇಂದು.
ಎಸ್ ಪಿ ಬಾಲಸುಬ್ರಹ್ಮಣ್ಯಂ
ಎಸ್ ಪಿ ಬಾಲಸುಬ್ರಹ್ಮಣ್ಯಂ
Updated on

ಬೆಂಗಳೂರು: ಹಾಡುಗಳ ಮೂಲಕ ಕೋಟ್ಯಾಂತರ ಜನರನ್ನು ರಂಜಿಸಿದ ಮಹಾನ್ ಗಾಯಕ, ಸರಿ ಸುಮಾರು 16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಎಲ್ಲರ ಮನಗೆದ್ದ ಸ್ವರ ಮಾಂತ್ರಿಕ, ಭಾರತೀಯ ಚಿತ್ರರಂಗದ ಮೇರು ಗಾಯಕ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಮೊದಲ ಪುಣ್ಯಸ್ಮರಣೆ ಇಂದು.

ಕೋವಿಡ್-19 ಸೋಂಕಿನಿಂದ ಕಳೆದ ವರ್ಷ ಆಗಸ್ಟ್ 5ರಂದು ಆರಂಭದಲ್ಲಿ ಚೆನ್ನೈಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಸುಮಾರು ಎರಡು ತಿಂಗಳು ಜೀವನ್ಮರಣ ಹೋರಾಟ ನಡೆಸಿ ಕೊರೋನಾ ಗೆದ್ದ ಗಾನಗಾರುಡಿಗ ಎಸ್ ಪಿಬಿ ಸಾವನ್ನು ಗೆಲ್ಲಲಿಲ್ಲ. ಅಸಂಖ್ಯಾತ ಅಭಿಮಾನಿಗಳು, ಶಿಷ್ಯರು, ಕುಟುಂಬವರ್ಗವನ್ನು ತೊರೆದು ಕಳೆದ ವರ್ಷ ಸೆಪ್ಟೆಂಬರ್ 25ರಂದು ಇಹಲೋಕ ತ್ಯಜಿಸಿದರು. ಅವರಿಗೆ ಆಗ 74 ವರ್ಷ ವಯಸ್ಸಾಗಿತ್ತು. 

ಎಸ್ ಪಿಬಿ ಹುಟ್ಟು, ಶಿಕ್ಷಣ, ಸಂಗೀತ ಪಯಣ: ೧೯46ರ ರ ಜೂನ್ 4ರಂದು ಎಸ್.ಪಿ. ಬಾಲಸುಬ್ರಹ್ಮಣ್ಯಂ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ತೆಲುಗು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಂದೆ ಸಾಂಬಮೂರ್ತಿ ಹರಿಕಥಾ ವಿದ್ವಾಂಸರು, ತಾಯಿ ಶಕುಂತಲಮ್ಮ. ಇಂಜಿನಿಯರಿಂಗ್ ಮಾಡಿದ್ದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಕಾಲೇಜು ದಿನಗಳಲ್ಲೇ ಸಂಗೀತ ಲೊಕದತ್ತ ಆಕರ್ಷಿತರಾಗಿದ್ದರು. ಕಾಲೇಜಿನಲ್ಲಿ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಅವರು, ಮೊದಮೊದಲು ಪಿ.ಬಿ. ಶ್ರೀನಿವಾಸ್ ಅವರ ಹಾಡುಗಳನ್ನು ಅದ್ಭುತವಾಗಿ ಹಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಸಂಗೀತ ಕಲೆಯನ್ನು ಮೊದಲಿಗೆ ಗುರುತಿಸಿದ್ದು ಸಂಗೀತ ನಿರ್ದೇಶಕ ಕೋದಂಡಪಾಣಿ ಅವರು.

1966ರಲ್ಲಿ 'ಶ್ರೀ ಶ್ರೀ ಮರ್ಯಾದ ರಾಮಣ್ಣ' ಎಂಬ ತೆಲುಗು ಸಿನಿಮಾ ಮೂಲಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸಿನಿಮಾ ಗಾಯನ ಕ್ಷೇತ್ರಕ್ಕೆ ಕಾಲಿಟ್ಟರು. ಅದೇ ವರ್ಷ ಅವರು 'ನಕ್ಕರೆ ಅದೇ ಸ್ವರ್ಗ' ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದರು. ಇದಾದ ಮೇಲೆ 'ಹೋಟೆಲ್ ರಾಮಣ್ಣ' ಎಂಬ ಸಿನಿಮಾ ಮೂಲಕ ತಮಿಳು ಚಿತ್ರರಂಗವನ್ನು ಪ್ರವೇಶಿಸಿದ್ದರು. ದಕ್ಷಿಣ ಭಾರತ ಚಿತ್ರರಂಗದಲ್ಲಿ ಅಗ್ರಗಣ್ಯ ಸಂಗೀತಗಾರನಾಗಿ ಸುಮಾರು 5 ದಶಕ ಮೆರೆದರು. 

ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆಯಿರುವಾಗಲೇ ಬಾಲಿವುಡ್ ಕೂಡ ಅವರನ್ನು ಕೈಬೀಸಿ ಕರೆಯಿತು. ಬಾಲಿವುಡ್ ನಲ್ಲಿ ಕೂಡ ಅವರ ಗೀತೆಗಳಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿ ಪ್ರಶಸ್ತಿಗಳು ಬಂದಿವೆ. ಹೀಗೆ 16ಕ್ಕೂ ಹೆಚ್ಚು ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಎಸ್ಪಿಬಿ ಹಾಡಿದ್ದಾರೆ. 

ಪ್ರಶಸ್ತಿಗಳು: ನಾಲ್ಕು ಭಾಷೆಗಳಲ್ಲಿ ಒಟ್ಟು 6 ರಾಷ್ಟ್ರ ಪ್ರಶಸ್ತಿಗಳು, ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ, ಆಂಧ್ರ ಪ್ರದೇಶದ ಪ್ರತಿಷ್ಠಿತ ನಂದಿ ಪ್ರಶಸ್ತಿ, ಹಲವು ವಿಶ್ವ ವಿದ್ಯಾಲಯಗಳಿಂದ ಡಾಕ್ಟರೇಟ್ ಗಳಿಸಿರುವ ಎಸ್ ಪಿಬಿ ಕೇವಲ ಗಾಯಕನಾಗಿರದೆ ಸಿನಿಮಾಗಳಲ್ಲಿ ನಟನೆ, ಕಂಠದಾನ ಕಲಾವಿದ, ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ.

ನಾಡಿನ ಮುಖ್ಯಮಂತ್ರಿ ಸೇರಿದಂತೆ ರಾಜಕೀಯ ನಾಯಕರು, ಗಣ್ಯರು, ಕಲಾವಿದರು ಇಂದು ಅವರ ಮೊದಲ ಪುಣ್ಯಸ್ಮರಣೆಯಂದು ಸ್ಮರಿಸಿಕೊಂಡಿದ್ದಾರೆ. ಇಂದು ಹಲವು ಕಲಾವಿದರು ಎಸ್ ಪಿಬಿ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com