
ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ನಿಧನರಾಗುವ ಹಿಂದಿನ ದಿನ ರಾತ್ರಿ ಸಂಗೀತ ನಿರ್ದೇಶಕ ಗುರು ಕಿರಣ್ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಲ್ಲಿ ಹಲವು ವಿಚಾರಗಳ ಕುರಿತು ಮಾತನಾಡಿದ್ದರಂತೆ. ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ರಮೇಶ್ ಅರವಿಂದ್ ಅಂದು ಅಪ್ಪು ಆಡಿದ್ದ ಮಾತುಕತೆಗಳ ಬಗ್ಗೆ ಪ್ರಸ್ತಾಪಿಸಿದರು.
ಅವರ ನಿರ್ದೇಶನದ 100 ಸಿನಿಮಾ ಇದೇ ತಿಂಗಳು ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಟ್ರೈಲರ್ ಲಾಂಚ್ ಕಾರ್ಯಕ್ರಮದ ವೇಳೆ ಪತ್ರಕರ್ತರ ಮುಂದೆ ರಮೇಶ್ ಅರವಿಂದ್ ಹಲವು ವಿಚಾರಗಳನ್ನು ಮೆಲುಕು ಹಾಕಿದ್ದಾರೆ. ಅಂದು ತಾವು ಮತ್ತು ಅಪ್ಪು ಆಡಿದ್ದ ಮಾತುಕತೆಗಳ ಬಗ್ಗೆ ಪ್ರಸ್ತಾಪಿಸಿ ಭಾವುಕರಾದರು.ಅಂದು ಅಪ್ಪು ಆಡಿದ್ದ ಮಾತುಗಳು ಮತ್ತು ಮರುದಿನ ನಡೆದ ಘಟನೆಗಳು ಕಾಕತಾಳೀಯವೋ, ಕಲ್ಪನೆಯೋ ಗೊತ್ತಾಗುತ್ತಿಲ್ಲ ಎಂದಿದ್ದಾರೆ ರಮೇಶ್ ಅರವಿಂದ್.
ಗುರುಕಿರಣ್ ಬರ್ತ್ ಡೇ ಕಾರ್ಯಕ್ರಮದಲ್ಲಿ ನಾನು ನನ್ನ ಪತ್ನಿ ಅರ್ಚನ, ಅಪ್ಪು ಅವರ ಪತ್ನಿ ಅಶ್ವಿನಿ ಒಂದು ಮೂಲೆಯಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದೆವು. ಅವತ್ತು ಅಪ್ಪು ಎರಡು ಗಂಟೆಗಳ ಕಾಲ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದ್ದರು. ಮರುದಿನವೇ ಅವರ ಕಣ್ಣುಗಳು ದಾನ ಮಾಡಿದ್ದರು ಎಂದರೆ ನಂಬಲಾಗುತ್ತಿಲ್ಲ. ಕಳೆದ ರಾತ್ರಿ ನೋಡಿದ್ದೆ, ಸಾಕಷ್ಟು ಮಾತನಾಡಿದ್ದೆ, ಮರುದಿನ ಅವರಿಲ್ಲ ಎಂದರೆ ನಂಬಲಾಗುತ್ತಿಲ್ಲ.
ಊಟಕ್ಕೆ ಕುಳಿತಾಗ ಸಿನಿಮಾ, ಐಪಿಎಲ್ ಹೀಗೆ ಸಾಕಷ್ಟು ವಿಚಾರಗಳನ್ನು ಮಾತನಾಡಿದೆವು. ನಮ್ಮ ಜೊತೆ ಅನಿರುದ್ಧ ಕೂಡ ಇದ್ದ. ನಾನು ಬುದ್ಧನ ಬಗ್ಗೆ ಹೇಳಿದೆ. ಬುದ್ಧ ಒಂದು ಕಡೆ ಹೇಳುತ್ತಾನೆ, ನಾವು ನಮ್ಮ ಜೀವನದಲ್ಲಿ ತುಂಬಾ ಇಷ್ಟಪಡುವ ವಿಚಾರಗಳನ್ನು ಒಂದು ದಿನ ಕಳೆದುಕೊಳ್ಳಬೇಕು, ನನ್ನ ಕೂದಲು ತುಂಬಾ ಇಷ್ಟ, ಅದು ಒಂದು ದಿನ ಉದುರಿ ಹೋಗುತ್ತದೆ, ಹಲ್ಲು ಇಷ್ಟ ಅದು ಕೂಡ ಬಿದ್ದು ಹೋಗುತ್ತದೆ. ಯೌವ್ವನ ಎಂದರೆ ನಾವೆಲ್ಲ ಎಷ್ಟು ಸಂಭ್ರಮಪಡುತ್ತೇವೆ, ಆದರೆ ಮುಪ್ಪು ಬರುವುದಕ್ಕೆ ಕಾಯುತ್ತಿರುತ್ತದೆ ಎಂದು ಹೇಳಿದೆ, ಆಗ ಅಪ್ಪು, ''ಬೆಳಕು ಹೋದ ಮೇಲೆ ರಾತ್ರಿ ಬರಬೇಕಲ್ಲವಾ, ಅದೇ ಅಲ್ವ ಸರ್ ವೈರಾಗ್ಯ'' ಅಂತ ಹೇಳಿದ್ದ, ಅದು ಆತನ ಜೀವನಕ್ಕೆ ಎಷ್ಟು ಕನೆಕ್ಟ್ ಆಯಿತು ಎನಿಸಿತು.
ಅಪ್ಪುಗೆ ಎಲ್ಲರೂ ಮನಸೋತಿದ್ದರು. ಅದಕ್ಕೆ ಕಾರಣ ಅಪ್ಪುವಿನ ವ್ಯಕ್ತಿತ್ವ. ಅಪ್ಪು ಅವರಲ್ಲಿದ್ದ ಹಲವು ಗುಣಗಳೇ ಅದಕ್ಕೆ ಕಾರಣ, ಒಂದು ಕಡೆ ಡ್ಯಾನ್ಸ್, ಫೈಟ್, ನಟನೆ, ಮತ್ತೊಂದು ಕಡೆ ಅವರಿಗಿದ್ದ ಫ್ಯಾಮಿಲಿ ಸೆಂಟಿಮೆಂಟ್, ವಿನಯತೆ, ಸರಳತೆ ಅವೆಲ್ಲವೂ ಸೇರಿ ಅಪ್ಪು ಆಗಿದೆ, ನಾಳೆ ಒಬ್ಬ ಫೈಟರ್, ಆಕ್ಟರ್, ಡ್ಯಾನ್ಸರ್ ಬರಬಹುದು, ಆದರೆ ಎಲ್ಲವೂ ಸೇರಿ ಒಬ್ಬನಾಗುವುದು ಕಷ್ಟ, ಎಲ್ಲವೂ ಸೇರಿ ಅಪ್ಪು ಆಗಿದ್ದು ಪರಿಪೂರ್ಣ ಶೂನ್ಯ. ಆ ಪರಿಪೂರ್ಣ ಶೂನ್ಯಕ್ಕೆ ಪರ್ಯಾಯವಿಲ್ಲ. ಈಗಿರುವುದು ಅವರ ಸವಿ ನೆನಪುಗಳು ಮಾತ್ರ. ಆ ನೆನಪುಗಳನ್ನು ಸಂಭ್ರಮಿಸಬೇಕು ಅಷ್ಟೆ ಎಂದು ರಮೇಶ್ ಅರವಿಂದ್ ಹೇಳಿದರು.
Advertisement