'ಏಕ್ ಲವ್ ಯಾ'ಚಿತ್ರತಂಡದಿಂದ ಅಪ್ಪು ಭಾವಚಿತ್ರ ಮುಂದೆ ಶಾಂಪೇನ್ ಸಂಭ್ರಮ: ಅಭಿಮಾನಿಗಳ ಆಕ್ರೋಶ, ಕ್ಷಮೆಯಾಚನೆಗೆ ಆಗ್ರಹ
ನಿರ್ದೇಶಕ ಜೋಗಿ ಪ್ರೇಮ್ ಅವರ 'ಏಕ್ ಲವ್ ಯಾ' ಸಿನಿಮಾ ಬಿಡುಗಡೆಗೆ ಕಾಯುತ್ತಿದೆ. ಚಿತ್ರದ ಎಣ್ಣಿಗೂ ಹೆಣ್ಣಿಗೂ ಏನು ಸಂಬಂಧ ಎಂಬ ಹಾಡಿನ ವಿಡಿಯೊ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಸದ್ದು ಮಾಡುತ್ತಿದೆ.
Published: 13th November 2021 12:06 PM | Last Updated: 13th November 2021 12:46 PM | A+A A-

ಹಾಡಿನ ದೃಶ್ಯ
ಬೆಂಗಳೂರು: ನಿರ್ದೇಶಕ ಜೋಗಿ ಪ್ರೇಮ್ ಅವರ 'ಏಕ್ ಲವ್ ಯಾ' ಸಿನಿಮಾ ಬಿಡುಗಡೆಗೆ ಕಾಯುತ್ತಿದೆ. ಚಿತ್ರದ 'ಎಣ್ಣಿಗೂ ಹೆಣ್ಣಿಗೂ ಏನು ಸಂಬಂಧ'? ಎಂಬ ಹಾಡಿನ ವಿಡಿಯೊ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಸದ್ದು ಮಾಡುತ್ತಿದೆ.
ಏಕ್ ಲವ್ ಯಾ ಚಿತ್ರದ ಆಡಿಯೊ ಬಿಡುಗಡೆ ಸಮಾರಂಭವನ್ನು ನಿನ್ನೆ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಏರ್ಪಡಿಸಲಾಗಿತ್ತು. ಅದರಲ್ಲಿ ನಿರ್ದೇಶಕ ಪ್ರೇಮ್, ಚಿತ್ರದ ನಿರ್ಮಾಪಕಿ ರಕ್ಷಿತಾ ಪ್ರೇಮ್, ನಾಯಕ ರಕ್ಷಿತಾ ಅವರ ಸೋದರ ರಾಣಾ, ನಾಯಕಿ ರಚಿತಾ ರಾಮ್, ಹಾಡಿನ ಗಾಯಕಿ ಮಂಗ್ಲಿ ಮೊದಲಾದವರು ಭಾಗವಹಿಸಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗಷ್ಟೆ ನಿಧನರಾದ ಎಲ್ಲರ ಪ್ರೀತಿಯ ಅಪ್ಪು ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ನಮನವನ್ನು ಚಿತ್ರತಂಡ ಸಲ್ಲಿಸಿತು. ಅಷ್ಟಕ್ಕೇ ನಿಲ್ಲಿಸಿ ಕಾರ್ಯಕ್ರಮ ಮುಗಿಸಿದ್ದರೆ ವಿವಾದವಾಗುತ್ತಿರಲಿಲ್ಲ. ನಂತರ ಪುನೀತ್ ಭಾವಚಿತ್ರವಿರುವ ವೇದಿಕೆಯಲ್ಲಿಯೇ ಚಿತ್ರತಂಡ ಶಾಂಪೇನ್ ನ್ನು ಬಾಟಲ್ ಗೆ ಸುರಿದು ಸಂಭ್ರಮಾಚರಣೆ ಮಾಡಿತು.
ಪುನೀತ್ ರಾಜ್ ಕುಮಾರ್ ಅವರು ನಿಧನರಾಗಿ ಇನ್ನೂ 15 ದಿನಗಳಾಗಿಲ್ಲ, ಅವರ ಕುಟುಂಬಸ್ಥರು, ಅಭಿಮಾನಿಗಳು ತೀವ್ರ ದುಃಖದಲ್ಲಿದ್ದಾರೆ. ಹೀಗಿರುವಾಗ ಪರಮಾತ್ಮನ ಫೋಟೋ ಎದುರು ಶಾಂಪೇನ್ ಸುರಿದು ಚಿಯರ್ಸ್ ಎಂದು ಸಂಭ್ರಮಿಸುವ ಅಗತ್ಯವೇನಿತ್ತು ಇದು ನಟನಿಗೆ ಮಾಡಿರುವ ಅವಮಾನ ಎಂದು ಪುನೀತ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಚಿತ್ರತಂಡದಿಂದ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ ರಾ ಗೋವಿಂದ್, ನಮ್ಮ ಚಿತ್ರರಂಗದವರೇ ಇಂಥ ಕೆಲಸ ಮಾಡಿದರೆ ನಾವು ಯಾರ ಮೇಲೆ ಆಪಾದನೆ ಮಾಡೋದು ಹೇಳಿ. ಸಾರ್ವಜನಿಕರಿಗೆ ಇದರಿಂದ ಆಕ್ರೋಶ ಬರುತ್ತೋ ಇಲ್ಲವೋ? ದಯವಿಟ್ಟು ಇಂಥದ್ದನ್ನೆಲ್ಲ ಮಾಡಬೇಡಿ. ಪುನೀತ್ ಇಂದು ನಮ್ಮಿಂದ ದೂರವಾಗಿರಬಹುದು. ಆದರೆ ಅವರಿಗೆ ಅವಮಾನ ಆಗುವಂತಹ ಕೆಲಸವನ್ನು ಮಾಡಬೇಡಿ. ಪುನೀತ್ಗೆ ಅವಮಾನ ಆಗುವಂತೆ ನಮ್ಮ ಚಿತ್ರರಂಗದವರು ನಡೆದುಕೊಂಡಿರುವುದರಿಂದ ನಾವೆಲ್ಲರೂ ತಲೆ ತಗ್ಗಿಸುವಂತೆ ಆಗಿದೆ, ಈ ಬಗ್ಗೆ ಚಿತ್ರತಂಡ ಬೇಷರತ್ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.