ಕಿವಿಗೆ ಕಿಕ್ ನೀಡುವ ಮ್ಯೂಸಿಕ್ ವಿಡಿಯೊ 'ಭೇಟಿ': ಇಂಡಿಯನ್ ಐಡಲ್ ಖ್ಯಾತಿಯ ಕನ್ನಡಿಗ ನಿಹಾಲ್ ದನಿಯ ಜಾದೂ  

ಜೀವನದಲ್ಲೇ ಆಗಲಿ, ಕ್ರಿಕೆಟ್ ನಲ್ಲೇ ಆಗಲಿ ಮೊದಲ ಹೆಜ್ಜೆಗಳು, ರನ್ ಗಳು ನಿರ್ಣಾಯಕ. ಓಪನಿಂಗ್ ಚೆನ್ನಾಗಾದರೆ ಅದೆಷ್ಟೇ ಕಠಿಣ ಮ್ಯಾಚ್ ಆಗಿದ್ದರೂ ಗೆಲುವು ಕಟ್ಟಿಟ್ಟ ಬುತ್ತಿ. ಆಂಥದ್ದೇ ಮೊದಲ ಪ್ರಯತ್ನವಾಗಿ ವಿವೇಕ್ ಗೌಡ ಮತ್ತು ತಂಡ ನಿರ್ಮಿಸಿರುವ ಮ್ಯೂಸಿಕ್ ವಿಡಿಯೊ 'ಭೇಟಿ' ಕನ್ನಡಿಗರ ಮನ ಗೆಲ್ಲುತ್ತಿದೆ. ಈ ನವಿರಾದ ಪ್ರೀತಿಯ ಕಹಾನಿಯನ್ನು ನೋಡಲು ಮರೆಯದಿರಿ.
ಕಿವಿಗೆ ಕಿಕ್ ನೀಡುವ ಮ್ಯೂಸಿಕ್ ವಿಡಿಯೊ 'ಭೇಟಿ': ಇಂಡಿಯನ್ ಐಡಲ್ ಖ್ಯಾತಿಯ ಕನ್ನಡಿಗ ನಿಹಾಲ್ ದನಿಯ ಜಾದೂ  

ಸಂದರ್ಶನ ಬರಹ: ಹರ್ಷವರ್ಧನ್ ಸುಳ್ಯ 

ಬೆಂಗಳೂರು: ಮನುಷ್ಯನಿಗೆ ಸದಾ ಪ್ರೀತಿಯ ಹಸಿವು. ಯಾರು ಚೂರು ಪ್ರೀತಿ ತೋರಿಸಿದರೂ ಅವರ ಬಳಿಗೆ ಪುಸಕ್ಕನೆ ಅವನ ಮನಸ್ಸು ಜಾರುತ್ತದೆ ಶ್ವಾನದಂತೆ. ಪ್ರೀತಿ ವಿಷಯದಲ್ಲಿ ಮನುಷ್ಯನಿಗೂ ನಾಯಿಗೂ ಸ್ವಾಮ್ಯತೆ ತುಂಬಾ. ಮನುಷ್ಯತ್ವ ಎಂದರೇನೆ ಪ್ರೀತಿ. ನಾಯಿಯನ್ನೇ ಮುಖ್ಯ ಪಾತ್ರಧಾರಿಯನ್ನಾಗಿಟ್ಟುಕೊಂಡು ಪ್ರೀತಿಯ ಕಥೆ ಹೇಳುವ ಮ್ಯೂಸಿಕ್ ವಿಡಿಯೋ 'ಭೇಟಿ' ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಮಾತ್ರವಲ್ಲದೆ ಭಾಷೆಯ ಗಡಿ ಮೀರಿ ಶ್ವಾನಪ್ರಿಯರ ಮನಗೆಲ್ಲುತ್ತಿದೆ. ಬಿಡುಗಡೆಗೆ ಸಿದ್ಧವಾಗಿರುವ 'ಗರುಡ ಗಮನ ಋಷಭ ವಾಹನ' ಸಿನಿಮಾದ ನಿರ್ದೇಶಕ, ನಟ ರಾಜ್ ಬಿ. ಶೆಟ್ಟಿ ಈ ಮ್ಯೂಸಿಕ್ ವಿಡಿಯೋವನ್ನು ಬಿಡುಗಡೆಗೊಳಿಸಿದ್ದಾರೆ.

ಉದಯೋನ್ಮುಖ ವಿವೇಕ್ ಗೌಡ ಮತ್ತು ತಂಡ ಈ ಮ್ಯೂಸಿಕ್ ವಿಡಿಯೋದ ರೂವಾರಿಗಳು. ಮಂಗಳೂರಿನಲ್ಲಿ Blink Films ಎನ್ನುವ ಸ್ವಂತ ಪ್ರೊಡಕ್ಷನ್ ಸಂಸ್ಥೆ ನಡೆಸುತ್ತಿರುವ ವಿವೇಕ್ ಬಹುಮುಖ ಪ್ರತಿಭೆ. ಮ್ಯೂಸಿಕ್ ವಿಡಿಯೋ ನಿರ್ದೇಶನ, ಸಿನಿಮೆಟೊಗ್ರಫಿ ಮತ್ತು ಎಡಿಟಿಂಗ್ ಜವಾಬ್ದಾರಿ ವಿವೇಕ್ ಅವರದೇ. ಅವರ ಬೆಂಬಲಕ್ಕೆ ಸಹ ನಿರ್ದೇಶಕ ನೆಲ್ಸನ್ ಸಿಕ್ವೆರಾ, ಸಂಗೀತ ನೀಡಿರುವ ಪ್ರಸಾದ್ ಕೆ. ಶೆಟ್ಟಿ, ಗೀತೆ ರಚಿಸಿರುವ ಅರ್ಜುನ್ ಲೂಯಿಸ್, ಕಲರಿಸ್ಟ್ ಸುಮಂತ್ ಸುವರ್ಣ ಸೇರಿದಂತೆ ದೊಡ್ಡ ತಂಡವೇ ಈ ಮ್ಯೂಸಿಕ್ ವಿಡಿಯೋ ಹಿಂದೆ ಕಾರ್ಯ ನಿರ್ವಹಿಸಿದೆ. ಛಾಯಾಗ್ರಹಣಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿಗೂ ಪಾತ್ರರಾಗಿರುವ ವಿವೇಕ್ ಪ್ಯಾನಸೋನಿಕ್ ಸಂಸ್ಥೆಯ ಕ್ಯಾಮೆರಾ ರಾಯಭಾರಿಯೂ ಆಗಿದ್ದಾರೆ.

ನಿರ್ದೇಶಕ, ಸಿನಿಮೆಟೊಗ್ರಾಫರ್
ವಿವೇಕ್ ಗೌಡ

ಪ್ರೀತಿ ಮತ್ತು ಬದುಕಿನ ಸಮ್ಮಿಲನ ಎನ್ನುವುದು 'ಭೇಟಿ'ಯ ಅಡಿಬರಹ. ನಾಯಕನಿಗೆ ರಸ್ತೆ ಬದಿ ಅನಾಥ ನಾಯಿ ಮರಿಯೊಂದು ಸಿಗುತ್ತದೆ. ಅದನ್ನಾತ ಮನೆಗೆ ತಂದು ಸಾಕುತ್ತಾನೆ. ನಾಯಿ ಅವನ ಜೀವನದ ಅವಿಭಾಜ್ಯ ಅಂಗವಾಗುತ್ತದೆ. ಅವನ ನಗು, ಅಳು, ಜಗತ್ತೇ ಅದರ ಸುತ್ತ ಭ್ರಮಿಸತೊಡಗುತ್ತದೆ. ನಾಯಕನಿಗೆ ಮ್ಯಾಚ್ ಆಗುವ ಹುಡುಗಿ ಪರಸ್ಪರ ಭೇಟಿಯಾಗುವಲ್ಲಿ ನಾಯಿ ಪರೋಕ್ಷವಾಗಿ ಕಾರಣವಾಗುತ್ತದೆ. ಈ ಭೇಟಿ ಸ್ನೇಹಕ್ಕೆ ತಿರುಗಿ, ಪ್ರೀತಿಯಾಗಿ ಬದಲಾಗುತ್ತದೆ. ಅವರಿಬ್ಬರ ನಡುವೆ ಸೇತುವಾಗಿದ್ದು ನಾಯಿ.  ಗಂಟೆಗಳಲ್ಲಿ ಹೇಳಬಹುದಾಗಿದ್ದನ್ನು ಐದೂವರೆ ನಿಮಿಷಗಳ ಮ್ಯೂಸಿಕ್ ವಿಡಿಯೊ ಮೂಲಕ ಕಥೆ ಹೇಳುವ ವಿಧಾನ ಮನಗೆಲ್ಲುತ್ತದೆ. 

ದೃಶ್ಯ ಮಾಧ್ಯಮದ ಸಾಧ್ಯತೆಗಳು ಅಪರಿಮಿತ. ಶಬ್ದ, ಸಂಭಾಷಣೆ ಇಲ್ಲದೆ ಕೇವಲ ದೃಶ್ಯ ಮಾತ್ರದಿಂದಲೇ ಕಥೆಯನ್ನು ವೀಕ್ಷಕರಿಗೆ ತಲುಪಿಸಲು ಸಾಧ್ಯವಾದರೆ ಆ ಸಿನಿಮಾ, ಮ್ಯೂಸಿಕ್ ವಿಡಿಯೊ ತನ್ನ ಮಾಧ್ಯಮವನ್ನು ಯಶಸ್ವಿಯಾಗಿ ಬಳಸಿಕೊಂಡಿದೆ ಎಂದರ್ಥ. ಬಹಳ ಹಿಂದೆಯೇ ಚಲನಚಿತ್ರಗಳ ದಿಗ್ಗಜರು ಉಳಿಸಿಹೋಗಿರುವ ಮೂಕಿ ಸಿನಿಮಾಗಳೇ ಅದಕ್ಕೆ ಸಾಕ್ಷ್ಯ ನುಡಿಯುತ್ತವೆ. ಇದೇ ವಿಷಯದಲ್ಲಿ 'ಭೇಟಿ' ಮ್ಯೂಸಿಕ್ ವಿಡಿಯೊ ಇಷ್ಟವಾಗುತ್ತದೆ. ಸಂಗೀತ ಇಲ್ಲದೆ ನೋಡಿದರೂ ವೀಕ್ಷಕರಿಗೆ ಸಿನಿಮಾ ತಂಡ ಹೇಳಲು ಹೊರಟಿರುವ ಕತೆ ತಲುಪುತ್ತದೆ. 

ಹಾಡಿನಲ್ಲಿರುವ ದನಿ ಇಂಡಿಯನ್ ಐಡಲ್ ಸಂಗೀತ ರಿಯಾಲಿಟಿ ಶೋ ಮೂಲಕ ದೇಶಾದ್ಯಂತ ಮನೆಮಾತಾಗಿರುವ ಕನ್ನಡಿಗ ನಿಹಾಲ್ ತಾವ್ರೊ ಅವರದ್ದು. ಅವರಿಗಾಗಿ ವಿವೇಕ್ ಗೌಡ ಮತ್ತು ತಂಡ ಹಲವು ತಿಂಗಳುಗಳ ತನಕ ಕಾದು ಹಠ ಬಿಡದೆ ಅವರಿಂದಲೇ ಹಾಡಿಸಿತ್ತು. ಅದರ ಫಲಶ್ರುತಿಯೀಗ ಕಣ್ಣು ಮತ್ತು ಶ್ರವಣದ ಮುಂದಿದೆ. ಇಂಡಿಯನ್ ಐಡಲ್ ಕಾರ್ಯಕ್ರಮ ಮುಗಿಸಿಕೊಂಡು ಪರಭಾಷೆಗಳಲ್ಲಿ ಜನಪ್ರಿಯತೆ ಗಳಿಸಿದ್ದರೂ ಮೊದಲು ಕನ್ನಡಕ್ಕೆ ಆದ್ಯತೆ ನೀಡಿ ಹಾಡೀದ್ದಾರೆ ಎನ್ನುವುದು ನಿಹಾಲ್ ಹೆಗ್ಗಳಿಕೆ. 'ಭೇಟಿ' ಮ್ಯೂಸಿಕ್ ವಿಡಿಯೋ ಮೂಲಕ ಕನ್ನಡಕ್ಕೊಬ್ಬ ಹೊಸ ಗಾಯಕ ದೊರೆತಿದ್ದಾರೆ. ಕನ್ನಡ ನಾಡಲ್ಲಿ ಪ್ರತಿಭೆಗಳಿಗೇನೂ ಬರವಿಲ್ಲ ಎನ್ನುವುದಕ್ಕೆ ಮ್ಯೂಸಿಕ್ ವಿಡಿಯೊ ತಂಡವೇ ನಿದರ್ಶನ.

ಮುದ್ದಿನ ನಾಯಿ ಹೆಸರು ಏನು

'ಲುಂಗಿ' ಸಿನಿಮಾದ ನಟ ಪ್ರಣವ್ ಹೆಗ್ಡೆ ಮತ್ತು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್ ನಲ್ಲಿ ನಿರೂಪಕಿಯಾಗಿರುವ ಮಧು ಮೈಲಂಕೋಡಿ ಅವರು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಮಧು ಅವರು ಈಗಾಗಲೇ 'ಮೂಕುತಿ ಅಮ್ಮನ್' ತಮಿಳು ಸಿನಿಮಾದಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಮ್ಯೂಸಿಕ್ ವಿಡಿಯೋದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ನಾಯಿಯನ್ನು ಮರೆತರೆ ಹೇಗೆ! ಅದರ ಹೆಸರು ಸಾಶಾ. ಸಾಶಾ, ವಿವೇಕ್ ಗೌಡ ಅವರ ಮುದ್ದಿನ ನಾಯಿ ಎನ್ನುವುದು ವಿಶೇಷ.

ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಬಿ. ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಈ ಮ್ಯೂಸಿಕ್ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರ ಮೂಲಕ ವಿವೇಕ್ ಗೌಡ ತಂಡವನ್ನು ಪ್ರೋತ್ಸಾಹಿಸಿದ್ದಾರೆ. ಕಾಕತಾಳೀಯವಾಗಿ, ಇದೀಗ ಬಿಡುಗಡೆಗೆ ಸಿದ್ಧವಾಗಿರುವ ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಸಿನಿಮಾದಲ್ಲಿಯೂ ನಾಯಿ ಪ್ರಮುಖ ಪಾತ್ರ ವಹಿಸಿದೆ ಎನ್ನುವುದು ಅಚ್ಚರಿಯ ಸಂಗತಿ. 

ಮೊದಲನೇ ಹೆಜ್ಜೆ

A Journey of a Thousand Miles Begins with a Single Step. ವಿವೇಕ್ ಮತ್ತು ತಂಡದ ಕುರಿತು ಹೇಳುವಾಗ ಮೇಲಿನ ಮಾತು ತುಂಬಾ ಪ್ರಸ್ತುತತೆ ಪಡೆದುಕೊಳ್ಳುತ್ತದೆ. ಸಾವಿರಾರು ಕಿಮೀ ಗಳ ಪಯಣ ಕೂಡ ಒಂದೇ ಒಂದು ಹೆಜ್ಜೆಯಿಂದ ಪ್ರಾರಂಭಗೊಳ್ಳುತ್ತದೆ. ವಿವೇಕ್ ಮತ್ತು ತಂಡದವರ ಕನಸು ಕನ್ನಡಿಗರು ಹೆಮ್ಮೆಪಡುವಂಥ ಸಿನಿಮಾ ನೀಡಬೇಕು ಎನ್ನುವುದು. ಆ ನಿಟ್ಟಿನಲ್ಲಿ 'ಭೇಟಿ' ಮ್ಯೂಸಿಕ್ ವಿಡಿಯೋ ವಿವೇಕ್ ಗೌಡ ಮತ್ತು ತಂಡ ಇಟ್ಟಿರುವ ಮೊದಲನೇ ಹೆಜ್ಜೆ. 

ಫುಲ್ ಲೆಂತ್ ಸಿನಿಮಾ ನಿರ್ಮಾಣ ಮಾಡುವುದು ಈ ತಂಡದ ಗುರಿ. ಅದಕ್ಕಾಗಿ ಈಗಾಗಲೇ ಸ್ಕ್ರಿಪ್ಟ್ ಕೆಲಸ ಶುರುವಾಗಿದೆ. ಸಿನಿಮಾ ನಿರ್ಮಾಣಕ್ಕೆ ಇಳಿಯುವ ಮುನ್ನ ಪೂರ್ವಭಾವಿಯಾಗಿ 'ಭೇಟಿ' ಮ್ಯೂಸಿಕ್ ವಿಡಿಯೊ ಮೂಡಿಬಂಡಿದೆ. ಅದಕ್ಕಾಗಿ ಖರ್ಚಾಗಿರುವ 2.5 ಲಕ್ಷ ರೂ.ಗಳನ್ನು ವಿವೇಕ್ ತಾವೇ ಭರಿಸಿದ್ದಾರೆ. 'ಭೇಟಿ' ಮ್ಯೂಸಿಕ್ ವಿಡಿಯೋಗೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ಸಿನಿಮಾ ನಿರ್ಮಾಣ ಮಾಡುವ ವಿಶ್ವಾಸ ಮತ್ತು ಉಮೇದು ಹೆಚ್ಚಾಗಿದೆ ಎಂದು ಸಂತಸದಿಂದ ಹೇಳುತ್ತಾರೆ ವಿವೇಕ್. ಒಟ್ಟಿನಲ್ಲಿ, ಭರವಸೆ ಮೂಡಿಸಿರುವ ಈ ತಂಡದ ಮೇಲೆ ಕನ್ನಡಿಗರು ಕಣ್ಣಿಟ್ಟಿರಬೇಕಾದ್ದು ಔಚಿತ್ಯ. 

'ಭೇಟಿ' ಮ್ಯೂಸಿಕ್ ವಿಡಿಯೊ ತಂಡ
'ಭೇಟಿ' ಮ್ಯೂಸಿಕ್ ವಿಡಿಯೊ ತಂಡ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com