ಸೆಟ್ಟೇರಿದ ವಿಜಯಸಂಕೇಶ್ವರ್ ಬಯೋಪಿಕ್ 'ವಿಜಯಾನಂದ': ಪ್ರಮುಖ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್
ಸಾರಿಗೆ, ಪತ್ರಿಕೋದ್ಯಮ, ಮಾಧ್ಯಮ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ವಿಜಯ ಸಂಕೇಶ್ವರ ಅವರ ಜೀವನ ಆಧರಿಸಿದ ಸಿನಿಮಾ ‘ವಿಜಯಾನಂದ’ ಚಿತ್ರಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ.
Published: 25th October 2021 12:43 PM | Last Updated: 25th October 2021 01:32 PM | A+A A-

ವಿಜಯಾನಂದ ಸಿನಿಮಾ ಮೂಹೂರ್ತ
ಸಾರಿಗೆ, ಪತ್ರಿಕೋದ್ಯಮ, ಮಾಧ್ಯಮ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ವಿಜಯ ಸಂಕೇಶ್ವರ ಅವರ ಜೀವನ ಆಧರಿಸಿದ ಸಿನಿಮಾ ‘ವಿಜಯಾನಂದ’ ಚಿತ್ರಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ.
ವಿಜಯಾನಂದ ಸಿನಿಮಾದ ಮುಹೂರ್ತ ಸಮಾರಂಭ ಹುಬ್ಬಳ್ಳಿಯಲ್ಲಿ ನೆರವೇರಿತು,. ‘ಕನ್ನಡ ಚಿತ್ರರಂಗದ ಭೀಷ್ಮ’ ಎಂದು ಪ್ರಖ್ಯಾತಿ ಪಡೆದಿದ್ದ ನಿರ್ದೇಶಕ ಜಿ.ವಿ.ಅಯ್ಯರ್ ಕುಟುಂಬದ ಕುಡಿ ರಿಶಿಕಾ ಶರ್ಮಾ ನಿರ್ದೇಶನದಲ್ಲಿ ‘ವಿಜಯಾನಂದ’ ಸಿನಿಮಾ ಮೂಡಿಬರಲಿದೆ. ವಿಆರ್‌ಎಲ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ವಿಜಯ ಸಂಕೇಶ್ವರ ಅವರ ಪುತ್ರ ಆನಂದ ಸಂಕೇಶ್ವರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
1976 ರಲ್ಲಿ ಒಂದು ಟ್ರಕ್ ನಿಂದ ಶುರುವಾಗಿ, ಇವತ್ತಿಗೆ ಭಾರತದ ಅತಿದೊಡ್ಡ ಫ್ಲೀಟ್ ಮಾಲೀಕರಾಗಿ, ಪತ್ರಿಕೆ ಹಾಗೂ ಮಾಧ್ಯಮ ರಂಗದಲ್ಲಿ ನಡೆದು ಬಂದ ಡಾ.ವಿಜಯ ಸಂಕೇಶ್ವರ ಅವರ ಜೀವನಾಗಾಥೆಯನ್ನು ಆಧರಿಸಿದ ಚಿತ್ರವೇ ‘ವಿಜಯಾನಂದ’. ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ಯುವ ಪ್ರತಿಭಾವಂತ ನಟ ನಿಹಾಲ್ ಅಭಿನಯಿಸುತ್ತಿದ್ದಾರೆ. ವಿಜಯ ಸಂಕೇಶ್ವರ ಅವರ ತಂದೆ ಬಿ.ಜಿ.ಸಂಕೇಶ್ವರ ಪಾತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ನಟಿಸುತ್ತಿದ್ದಾರೆ. ‘ವಿಜಯಾನಂದ’ ಚಿತ್ರದ ಮುಹೂರ್ತ ಸಮಾರಂಭಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್, ಗೋಲ್ಡನ್ ಸ್ಟಾರ್ ಗಣೇಶ್, ಉದ್ಯಮಿ ವಿಜಯ ಸಂಕೇಶ್ವರ, ಪುತ್ರ ಆನಂದ್ ಸಂಕೇಶ್ವರ ಮುಂತಾದವರು ಭಾಗಿಯಾಗಿದ್ದರು.
ಇದನ್ನೂ ಓದಿ: ಸಿನಿಮಾ ಆಗಲಿದೆ ಉದ್ಯಮಿ ವಿಜಯ ಸಂಕೇಶ್ವರ ಜೀವನ ಚರಿತ್ರೆ: ರಿಷಿಕಾ ಶರ್ಮಾ ನಿರ್ದೇಶನದ ಚಿತ್ರಕ್ಕೆ ಟೈಟಲ್ ಫಿಕ್ಸ್!
‘ವಿಜಯಾನಂದ’ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಕೂಡ ವಿಶೇಷ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ವಿಜಯ ಸಂಕೇಶ್ವರ ಅವರ ಸ್ನೇಹಿತರಾಗಿ ‘ವಿಜಯಾನಂದ’ ಸಿನಿಮಾದಲ್ಲಿ ರವಿಚಂದ್ರನ್ ಕಾಣಿಸಿಕೊಳ್ಳಲಿದ್ದಾರೆ. 1950 ರಿಂದ ಹಿಡಿದು 2017 ರವರೆಗೂ ವಿಜಯ ಸಂಕೇಶ್ವರ ಬದುಕಿನಲ್ಲಿ ಘಟಿಸಿದ ಪ್ರಮುಖ ಘಟನೆಗಳನ್ನು ‘ವಿಜಯಾನಂದ’ ಸಿನಿಮಾ ತೆರೆ ಮೇಲೆ ತರಲಿದೆ. ವಿಜಯ ಸಂಕೇಶ್ವರ ಅವರ ಜೀವನಚರಿತ್ರೆಯನ್ನು ಮೂರು ಶೇಡ್‌ನಲ್ಲಿ ತೆರೆಗೆ ತರಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ.