“ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ”ಗೆ ಸ್ಪೇನ್ ಪ್ರಶಸ್ತಿ

“ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ” ಕನ್ನಡ ಚಿತ್ರ ಸ್ಪೇನ್ ದೇಶದ ಮ್ಯಾಡ್ರಿಡ್ ನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲೂ ಪ್ರಶಸ್ತಿಗೆ ಭಾಜನವಾಗಿದೆ. 
ಚಿತ್ರದ ಸ್ಟಿಲ್
ಚಿತ್ರದ ಸ್ಟಿಲ್
Updated on

ಬೆಂಗಳೂರು: “ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ” ಕನ್ನಡ ಚಿತ್ರ ಸ್ಪೇನ್ ದೇಶದ ಮ್ಯಾಡ್ರಿಡ್ ನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲೂ ಪ್ರಶಸ್ತಿಗೆ ಭಾಜನವಾಗಿದೆ. 

ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ ಉಡುಪಿಯ ಬಾಲನಟ ದೃಶಾ ಕೊಡಗು ಅವರಿಗೆ ಶ್ರೇಷ್ಠ ಬಾಲನಟ ಪ್ರಶಸ್ತಿ ದೊರಕಿದೆ. 

ಈ ಮೊದಲು ರೋಮ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶ್ರೇಷ್ಟ ಚಿತ್ರವೆಂದು ವಿಮರ್ಶಕರ ಪ್ರಶಸ್ತಿಗೆ ಭಾಜನವಾಗಿದ್ದರೆ ಕಳೆದ ತಿಂಗಳು ಜರ್ಮನಿಯ ಸ್ಟುಟ್ ಗಾರ್ಟ್ ಚಿತ್ರೋತ್ಸವದಲ್ಲಿ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಗಳಿಸಿತ್ತು. ಇದೀಗ ಪ್ರಶಸ್ತಿ ಪಡೆಯುವ ಸರದಿ ಚಿತ್ರದ ಮುಖ್ಯ ಪಾತ್ರಧಾರಿ ನಟನದ್ದಾಗಿದೆ. 

ಖ್ಯಾತ ರಂಗ ನಿರ್ದೇಶಕ, ಚಿತ್ರ ನಿರ್ದೇಶಕ, ಕಲಾ ನಿರ್ದೇಶಕ ಹಾಗೂ ಚಿತ್ರಕಲಾವಿದ ಬಾಸುಮ ಕೊಡಗು ಅವರ ಮಗನಾದ ದೃಶಾ ಅವರು ಕಟ್ಪಾಡಿಯ ಎಸ್.ವಿ ಎಸ್ ಇಂಗ್ಲೀಷ್  ಮಾಧ್ಯಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಓದುತ್ತಿದ್ದು, ಅನೇಕ ಕಿರು ಚಿತ್ರಗಳಲ್ಲಿ, ರಂಗ ನಾಟಕಗಳಲ್ಲಿ ಅಭಿನಯಿದ್ದಾರೆ. ಸಂಗೀತ ಮತ್ತು ಸಾಹಿತ್ಯದಲ್ಲೂ ಆಸಕ್ತಿ ಇರುವ ದೃಶಾ ಕಲಾವಿದರ ಕುಟುಂಬದ ಕುಡಿಯಾಗಿದ್ದಾರೆ. ಈ ಮೂಲಕ ಭಾಗವಹಿಸಿದ ನಾಲ್ಕು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮೂರರಲ್ಲಿ ಪ್ರಶಸ್ತಿ ಪಡೆದ ಹೆಗ್ಗಳಿಕೆ ಈ ಚಿತ್ರದ್ದಾಗಿದೆ.

ಗಿರೀಶ್ ಕಾಸರವಳ್ಳಿ ನಿರ್ದೇಶನದ ಈ ಚಿತ್ರವನ್ನು ಖ್ಯಾತ ನಿರ್ಮಾಪಕ ಎಸ್.ವಿ ಶಿವ ಕುಮಾರ್ ಅವರು ತಮ್ಮ ಸಂಗಮ ಫಿಲಂಸ್ ಲಾಂಚನದಲ್ಲಿ ತಯಾರಿಸಿದ್ದಾರೆ. ಈ ಚಿತ್ರ ಕವಿ, ಸಾಹಿತಿ ಜನಪ್ರಿಯ ಚಿತ್ರಗೀತೆ ರಚನೆಕಾರರಾದ ಜಯಂತ ಕಾಯ್ಕಿಣಿಯವರ ಹಾಲಿನ ಮೀಸೆ ಕಥೆಯನ್ನಾಧರಿಸಿದೆ. ಸಮಕಾಲೀನ ಭಾರತದ ಬಹು ಮುಖ್ಯ ಸಮಸ್ಯೆಗಳಲ್ಲೊಂದಾದ ಐಡೆಂಟಿಟಿಯ ಪ್ರಶ್ನೆ ಚಿತ್ರದ ಹೂರಣ. ದ್ವೀಪ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಹೆಚ್.ಎಂ.ರಾಮಚಂದ್ರ ಹಾಲ್ಕೆರೆ ಅವರ ಛಾಯಾಗ್ರಹಣ ಇರುವ ಈ ಚಿತ್ರಕ್ಕೆ ಎಸ್.ಆರ್.ರಾಮಕೃಷ್ಣ ಅವರ ಸಂಗೀತವಿದೆ. ಎಸ್. ಗುಣ ಶೇಖರನ್ ಅವರ ಸಂಕಲನ ಇದ್ದು ಅಪೂರ್ವ ಕಾಸರವಳ್ಳಿ ಜಂಟಿ ನಿರ್ದೇಶನ ಇದೆ.

ಅನನ್ಯ ಕಾಸರವಳ್ಳಿ ಅವರ ವಸ್ತ್ರವಿನ್ಯಾಸ, ಸಾವಂತ್, ಕಿರಣ್ ಕುಮಾರ್ ಹಾಗೂ ಯಶವಂತ ಯಾದವ್ ಅವರ ಸಹನಿರ್ದೇಶನ ಇದೆ. ಬಾಸುಮ ಕೊಡಗು ಅವರ ಕಲಾನಿರ್ದೇಶನ ರಮೇಶ್ ಬಾಬು ಅವರ ಪ್ರಸಾಧನ ಇವೆ. ತಾಂತ್ರಿಕ ನೆರವು ಮೋಹನ್ ಕಾಮಾಕ್ಷಿ ಯವರದು ಮಕ್ಕಳ ಬದುಕಿನ ಮೂಲಕ ಅನಾವರಣಗೊಳ್ಳ್ಳುವ ಕಥಾ ಹಂದರದಲ್ಲಿ ನಾಲ್ವರು ಮಕ್ಕಳು ಹೃದಯಂಗಮವಾಗಿ ಅಭಿನಯಿಸಿದ್ದಾರೆ. ಅವರೇ ದೃಶಾ ಕೊಡಗು, ಆರಾಧ್ಯ, ಪ್ರವರ್ಥ ರಾಜು ಮತ್ತು ನಲ್ಮೆ. ಉಳಿದ ಮುಖ್ಯ ಪಾತ್ರಗಳಲ್ಲಿ ಪವಿತ್ರ, ಮಾಲತೇಶ್. ಕೆ.ಜಿ.ಕೃಷ್ಣಮೂರ್ತಿ, ಚೆಸ್ವಾ, ರಶ್ಮಿ, ಬಿ.ಎಂ, ವೆಂಕಟೇಶ್, ಪುಷ್ಪಾ ರಾಘವೇಂದ್ರ, ಸುಜಾತ ಶೆಟ್ಟಿ ಮೊದಲಾದವರಿದ್ದಾರೆ. 

ಇದು ಕಾಸರವಳ್ಳಿಯವರ 15ನೇ ಕಥಾ ಚಿತ್ರ. ಹಾಗೆಯೇ ಯಶಸ್ವಿ ಧಾರಾವಾಹಿಗಳನ್ನು ನಿರ್ಮಿಸುತ್ತಾ ಬಂದಿರುವ ನಿರ್ಮಾಪಕ ಎಸ್.ವಿ ಶಿವಕುಮಾರರ 3ನೇ ಕಥಾ ಚಿತ್ರವೂ ಇದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com