ಕನ್ನಡದ ಹೆಸರಾಂತ ಹಾಸ್ಯನಟ ಚಿಕ್ಕಣ್ಣ ಸ್ಯಾಂಡಲ್ ವುಡ್ ನ ಬಹುತೇಕ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಕೆಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ಕೂಡ ಮಾಡಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಅವರು ಹೀರೋ ಆಗಿ ಲಾಂಚ್ ಆಗಿದ್ದಾರೆ.
ಈ ಹಿಂದೆ ಶರಣ್ ಜೊತೆ ಚಿಕ್ಕಣ್ಣ ‘ಅಧ್ಯಕ್ಷ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಮುಂದುವರೆದ ಭಾಗವೇ ‘ಉಪಾಧ್ಯಕ್ಷ’ ಸಿನಿಮಾವಂತೆ. ಉಮಾಪತಿ ಎಸ್ ನಿರ್ಮಿಸಿರುವ ಈ ಸಿನಿಮಾವನ್ನು ಕಾಣೆಯಾದವರ ಬಗ್ಗೆ ಪ್ರಕಟಣೆ ಮತ್ತು ಇನ್ನೂ ಬಿಡುಗಡೆಯಾಗಬೇಕಿರುವ ಧೀರೇನ್ ರಾಮ್‌ಕುಮಾರ್ ಅಭಿನಯದ ಶಿವ 143 ಸಿನಿಮಾ ನಿರ್ದೇಶಿಸಿದ್ದ ಅನಿಲ್ ಕುಮಾರ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಜುಲೈ 17 ರಿಂದ ಚಿತ್ರದ ಶೂಟಿಂಗ್ ಆರಂಭವಾಲಿದೆ ಎಂದು ನಿರ್ಮಾಪಕ ಉಮಾಪತಿ ತಿಳಿಸಿದ್ದಾರೆ. ಸ್ಮಿತಾ ಎನ್ ನಿರ್ಮಿಸಿರುವ ಈ ಚಿತ್ರವನ್ನು ಮೈಸೂರಿನಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಿಸಲಾಗುವುದು. ಕೆಲವು ನಿರ್ಣಾಯಕ ಭಾಗಗಳನ್ನು ಬೆಂಗಳೂರಿನಲ್ಲೂ ಶೂಟಿಂಗ್ ಮಾಡಲಾಗುವುದು ಎಂದು ಹೇಳಿದ್ದಾರೆ.
ಕೌಟುಂಬಿಕ ಕಾಮಿಡಿ ಎಂಟರ್‌ಟೈನರ್ ಅಧ್ಯಕ್ಷ (2014) ಚಿತ್ರದ ಮುಂದುವರಿದ ಭಾಗವಾಗಲಿದ್ದು, ಚಿಕ್ಕಣ್ಣ ಅವರ ಕಾಮಿಡಿ ಪ್ರೇಕ್ಷಕರನ್ನು ರಂಜಿಸಲಿದೆ, ಚಿಕ್ಕಣ್ಣನನ್ನು ನಾವು ವಿಶೇಷವಾಗಿ ನಾಯಕನನ್ನಾಗಿ ಮಾಡುತ್ತಿಲ್ಲ ಎಂದು ಉಮಾಪತಿ ತಿಳಿಸಿದ್ದಾರೆ.
ಅಧ್ಯಕ್ಷ ಸಿನಿಮಾದಲ್ಲಿ ಶರಣ್ ಅಧ್ಯಕ್ಷನಾಗಿ ರಂಜಿಸಿದ್ದರೆ, ಚಿಕ್ಕಣ್ಣ ಉಪಾಧ್ಯಕ್ಷನಾಗಿ ನಗೆಯ ಕಚಗುಳಿ ಇಟ್ಟಿದ್ದರು. ಇಬ್ಬರದ್ದೂ ಲವ್ ಸ್ಟೋರಿ ಬೇರೆ ಇತ್ತು. ಅಧ್ಯಕ್ಷ ಸಿನಿಮಾದಲ್ಲಿ ಶರಣ್ ಗೆ ಮದುವೆ ಆಗುತ್ತದೆ. ಆನಂತರ ನಡೆಯುವ ಕಥೆಯೇ ಉಪಾಧ್ಯಕ್ಷ ಸಿನಿಮಾವಂತೆ.
ಹಾಗಾಗಿ ಈ ಸಿನಿಮಾದಲ್ಲಿ ಕೇವಲ ಚಿಕ್ಕಣ್ಣ ಮಾತ್ರ ಇರಲಿದ್ದಾರೆ. ಚಿತ್ರಕಥೆಯೇ ಇಲ್ಲಿ ಹೀರೋ ಎಂದು ಉಮಾಪತಿ ಹೇಳಿದ್ದಾರೆ. ಉಪಾಧ್ಯಕ್ಷ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದರೆ, ಶೇಖರ್ ಚಂದ್ರು ಮತ್ತು ಕೆ.ಎಂ.ಪ್ರಕಾಶ್ ಅವರು ಛಾಯಾಗ್ರಹಣ ಮತ್ತು ಸಂಕಲನ ನಿರ್ವಹಿಸಲಿದ್ದಾರೆ.
Advertisement