ರಿಲೀಸ್ ಆಗಲು ಸಿದ್ಧವಾಗಿದೆ ಹೊಸ ಪ್ರತಿಭೆಗಳ 'ಪ್ರಾಯಶಃ' ಸಿನಿಮಾ
ರಂಜಿತ್ ರಾವ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಪ್ರಾಯಶಃ ಸೆನ್ಸಾರ್ ಪ್ರಕ್ರಿಯೆ ಮುಗಿಸಿದೆ, ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ದೊರೆತಿದ್ದು, ಡಿಸೆಂಬರ್ 9 ರಂದು ರಿಲೀಸ್ ಆಗಲಿದೆ.
ಅರ್ಹ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ಪ್ರಾಯಶಃ’ ಸಿನಿಮಾದಲ್ಲಿ ಯುವನಟ ರಾಹುಲ್ ಅಮೀನ್, ಕೃಷ್ಣಾ ಭಟ್ ಜೋಡಿಯಾಗಿ ಅಭಿನಯಿಸಿದ್ದಾರೆ.
ಸುಮಾರು ಹತ್ತು ವರ್ಷಗಳ ಕಾಲ ಕಿರುತೆರೆ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದು, ಹಲವು ಧಾರವಾಹಿಗಳನ್ನು ನಿರ್ದೇಶಿಸಿದ ಅನುಭವವಿರುವ ಶಿವಮೊಗ್ಗ ಮೂಲದ ರಂಜಿತ್ ರಾವ್ ಮೊದಲ ಬಾರಿ “ಪ್ರಾಯಶಃ’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ.
ಇನ್ನು ಚಿತ್ರತಂಡ ಹೇಳುವಂತೆ, “ಪ್ರಾಯಶಃ’ ಔಟ್ ಆ್ಯಂಡ್ ಔಟ್ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯ ಸಿನಿಮಾ. ಜೊತೆಗೆ ಪ್ರೀತಿಯ ಎಳೆಯೊಂದು ಕೂಡ ಚಿತ್ರಕಥೆಯಲ್ಲಿದೆ. ಒಂದು ರೇಪ್ ಆ್ಯಂಡ್ ಮರ್ಡರ್ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ.
ಪ್ರತಿಯೊಂದು ಸಂಬಂಧವು ತನ್ನದೇ ಆದ ಕಥೆಯನ್ನು ಹೊಂದಿದೆ, ಮತ್ತು ಪ್ರಾಯಶಃ ಪರಿಕಲ್ಪನೆಯು ಊಹೆ ಮತ್ತು ಸತ್ಯದ ನಡುವೆ ಆಧಾರಿತವಾಗಿದೆ. ಮಂಗಳೂರು ಮತ್ತು ಬೆಂಗಳೂರಿನಲ್ಲಿ ಶೂಟಿಂಗ್ ನಡೆಸಿದ್ದು, ಪ್ರಶಾಂತ್ ಪಾಟೀಲ್ ಅವರ ಛಾಯಾಗ್ರಹಣ ಮತ್ತು ಅಶೋಕ್ ಅವರ ಸಂಕಲನವು ಚಿತ್ರವನ್ನು ಇನ್ನಷ್ಟು ರೋಮಾಂಚನಗೊಳಿಸಿದೆ.
ಚಿತ್ರಕಥೆಯಲ್ಲಿ ಒಂದಷ್ಟು ತಿರುವುಗಳಿದ್ದು, ಸುತ್ತಮುತ್ತಲಿದ್ದವರ ಮೇಲೆಯೇ ಅನುಮಾನ ಮೂಡುತ್ತದೆ. ಅಂತಿಮವಾಗಿ, ಈ ಹೇಯ ಕೃತ್ಯ ಮಾಡಿದವರು ಯಾರಾಗಿರಬಹುದು? ಈ ಕೃತ್ಯದ ಹಿಂದಿನ ವಾಸ್ತವ ಏನು? ಎಂಬುದೇ ಸಿನಿಮಾ. ವಿಷಯಗಳನ್ನು ನಂಬುವ ಮುಂಚೆ ಒಮ್ಮೆ ನೋಡಿ ತಿಳಿದುಕೊಳ್ಳುವುದು ಸೂಕ್ತ ಎಂಬ ಸಂದೇಶವನ್ನು ಸಿನಿಮಾದಲ್ಲಿ ಹೇಳಲಾಗಿದೆ ಎಂಬುದು ಚಿತ್ರತಂಡದ ಮಾತು.
ಬಿಗ್ ಬಾಸ್ ಕನ್ನಡ ಖ್ಯಾತಿಯ ಶೈನ್ ಶೆಟ್ಟಿ ವಿಸ್ತೃತ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಾರಾಗಣದಲ್ಲಿ ನಟರಾದ ಶೋಭರಾಜ್ ಪಾವೂರ್, ಮಧು ಹೆಗಡೆ, ಸುನಿಲ್ ಸಾಗರ್ ಮತ್ತು ವಿನೀತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ