'ಅನುಭವ' ಸಿನಿಮಾ ಖ್ಯಾತಿಯ ನಟಿ ಅಭಿನಯ ಜೈಲು ಪಾಲು? 2 ವರ್ಷ ಶಿಕ್ಷೆ ವಿಧಿಸಿದ ಹೈಕೋರ್ಟ್
ಅನುಭವ ಚಿತ್ರದ ಖ್ಯಾತಿಯ ಸ್ಯಾಂಡಲ್‌ವುಡ್ ನಟಿ ಅಭಿನಯಗೆ ಎರಡು ವರ್ಷದ ಜೈಲು ಶಿಕ್ಷೆ ಪ್ರಕಟವಾಗಿದೆ. ವರದಕ್ಷಿಣೆ ನೀಡುವಂತೆ ಪೋಷಕರ ಜೊತೆ ಸೇರಿ ಅತ್ತಿಗೆಗೆ ಕಿರುಕುಳ ನೀಡಿದ ಅರೋಪದಲ್ಲಿ ಹೈಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ
Published: 14th December 2022 09:41 AM | Last Updated: 14th December 2022 01:38 PM | A+A A-

ಅಭಿನಯ
ಬೆಂಗಳೂರು: ಅನುಭವ ಚಿತ್ರದ ಖ್ಯಾತಿಯ ಸ್ಯಾಂಡಲ್‌ವುಡ್ ನಟಿ ಅಭಿನಯಗೆ ಎರಡು ವರ್ಷದ ಜೈಲು ಶಿಕ್ಷೆ ಪ್ರಕಟವಾಗಿದೆ. ವರದಕ್ಷಿಣೆ ನೀಡುವಂತೆ ಪೋಷಕರ ಜೊತೆ ಸೇರಿ ಅತ್ತಿಗೆಗೆ ಕಿರುಕುಳ ನೀಡಿದ ಅರೋಪದಲ್ಲಿ ಹೈಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ.
ಅಭಿನಯ ಅವರ ಅಣ್ಣ ಶ್ರೀನಿವಾಸ್ ಅವರ ಪತ್ನಿ ಲಕ್ಷ್ಮೀದೇವಿಗೆ ವರದಕ್ಷಿಣೆ ಬೇಡಿಕೆ, ಕಿರುಕುಳ ನೀಡಿದ ಆರೋಪದಲ್ಲಿ ಹೈಕೋರ್ಟ್ ವಿಚಾರಣೆ ನಡೆಸಿದ ಶಿಕ್ಷೆ ಪ್ರಕಟಿಸಿದೆ. ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾ.ಹೆಚ್.ಬಿ. ಪ್ರಭಾಕರ್ ಶಾಸ್ತ್ರಿ ಅವರ ಏಕಸದಸ್ಯ ಪೀಠ ಆದೇಶ ನೀಡಿದೆ.
ಕಾಶೀನಾಥ್ ಅವರ ಅನುಭವ ಸಿನಿಮಾ ತಂದು ಕೊಟ್ಟ ಯಶಸ್ಸಿನ ಬಳಿಕ ಸ್ಟಾರ್ ನಟಿ ಎನಿಸಿಕೊಂಡಿದ್ದ ಅಭಿನಯಾ ಇದೀಗ ಜೈಲು ಸೇರುವ ಪರಿಸ್ಥಿತಿ ಎದುರಾಗಿದೆ. ತಮ್ಮ ಸಹೋದರ ಶ್ರೀನಿವಾಸ್ ಅವರ ಪತ್ನಿ ಲಕ್ಷ್ಮೀದೇವಿಗೆ ವರದಕ್ಷಿಣೆ ಬೇಡಿಕೆ ಇಟ್ಟು ಪಾಲಕರ ಜೊತೆ ಸೇರಿ ಕಿರುಕುಳ ನೀಡಿರುವ ಆರೋಪದಡಿಯಲ್ಲಿ ಹೈಕೋರ್ಟ್ ಶಿಕ್ಷೆ ಪ್ರಕಟಿಸಿದೆ. ನ್ಯಾಯಮೂರ್ತಿ ಎಚ್.ಬಿ. ಪ್ರಭಾಕರ್ ಶಾಸ್ತ್ರಿ ಅವರನ್ನೊಳಗೊಂಡ ಏಕಸದಸ್ಯ ಪೀಠದಿಂದ ಆದೇಶ ಹೊರಬಿದ್ದಿದೆ. ಸರ್ಕಾರದ ಪರ ವಕೀಲ ಎಚ್.ವಿ. ವಿನಾಯಕ್ ಅವರು ವಾದ ಮಂಡಿಸಿದ್ದರು.
2002ರಲ್ಲಿ ಲಕ್ಷ್ಮೀದೇವಿ ಎಂಬುವವರು ಅಭಿನಯಾ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದರು. 1998ರಲ್ಲಿ ಅಭಿನಯ ಅಣ್ಣ ಶ್ರೀನಿವಾಸ್ ಅವರನ್ನು ಲಕ್ಷ್ಮೀದೇವಿ ಮದುವೆಯಾಗಿದ್ದರು. ಮದುವೆ ವೇಳೆ ವರಕ್ಷಿಣೆ ಪಡೆದಿದ್ದಲ್ಲದೆ, ನಂತರವೂ ಪದೇಪದೆ ಹಣ ತರುವಂತೆ ಕಿರುಕುಳ ನೀಡುತ್ತಿದ್ದರು. ವಿವಾಹದ ಸಮಯದಲ್ಲಿ 80 ಸಾವಿರ ರೂಪಾಯಿ ಹಾಗೂ 250 ಗ್ರಾಂ ಚಿನ್ನಾಭರಣ ಪಡೆದಿದ್ದರು. ಇದಾದ ನಂತರವೂ 1 ಲಕ್ಷ ರೂ.ಗೆ ಬೇಡಿಕೆ ಇಟ್ಟು 20 ಸಾವಿರ ಪಡೆದ ನಂತರವೂ ಕಿರುಕುಳ ಕೊಡುತ್ತಿದ್ದರು. ಹಣ ಕೊಟ್ಟರೂ ಸಹ ನನ್ನನ್ನು ಪಾಲಕರ ಮನೆಯಲ್ಲಿ ಬಿಟ್ಟಿದ್ದರು ಎಂದು ದೂರಿನಲ್ಲಿ ಲಕ್ಷ್ಮೀದೇವಿ ಆರೋಪಗಳ ಸುರಿಮಳೆಗೈದಿದ್ದರು.
ಹೆರಿಗೆಗೆ ತವರು ಮನೆಗೆ ಹೋದ ಲಕ್ಷ್ಮೀದೇವಿಯನ್ನ ಮನೆಗೆ ಕರೆತರದ ಅಭಿನಯಾ ಫ್ಯಾಮಿಲಿ, ಗಂಡನ ಮನೆಗೆ ಬಂದ ಲಕ್ಷ್ಮೀ ಹಾಗು ಆಕೆಯ ಪಾಲಕರಿಗೆ ಅವಮಾನ ಮಾಡಿರುವ ಆರೋಪವು ಇದೆ. ಅಭಿನಯ ಸೇರಿ ಇಡೀ ಕುಟುಂಬದ ವಿರುದ್ಧ 2002 ರಲ್ಲಿ ಚಂದ್ರಾಲೇಔಟ್ ಠಾಣೆಗೆ ಲಕ್ಷ್ಮೀದೇವಿ ದೂರು ದಾಖಲಿಸಿದ್ದರು. ಬಳಿಕ ವಿಚಾರಣೆ ನಡೆಸಿ, ಚಂದ್ರಾಲೇಔಟ್ ಪೊಲೀಸರು ಸಲ್ಲಿಸಿದ್ದ ಚಾರ್ಜ್ಶೀಟ್ ಆಧರಿಸಿ, ಮ್ಯಾಜಿಸ್ಟ್ರೇಟ್ ಕೋರ್ಟ್ ಎಲ್ಲಾ ಐವರು ಆರೋಪಿಗಳಿಗೂ 2012ರಲ್ಲಿ ತಲಾ 2 ವರ್ಷ ಶಿಕ್ಷೆ ಪ್ರಕಟ ಮಾಡಿತ್ತು. ನಂತರ ಜಿಲ್ಲಾ ನ್ಯಾಯಾಲಯ ಐವರೂ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿತ್ತು. ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಲಕ್ಷ್ಮೀದೇವಿ ಹಾಗೂ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ಮೂವರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದೆ.
ಎ1- ಶ್ರೀನಿವಾಸ್ ಹಾಗೂ ಎ-2 ರಾಮಕೃಷ್ಣ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಉಳಿದ ಮೂವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ನಟಿ ಅಭಿನಯ ಅವರ ತಾಯಿ ಎ-3 ಜಯಮ್ಮಗೆ 5 ವರ್ಷ ಕಾರಾಗೃಹ ಶಿಕ್ಷೆ, ಎ-4 ಚೆಲುವರಾಜ್, ಎ-5 ಅಭಿನಯಾಗೆ 2 ವರ್ಷ ಜೈಲು ಹಾಗೂ ದಂಡ ವಿಧಿಸಲಾಗಿದೆ.