ಒಟಿಟಿಯಲ್ಲಿ 'ಕಾಂತಾರ' ಬಿಡುಗಡೆ: ಪ್ರೇಕ್ಷಕರಿಗೆ ರುಚಿಸದ 'ವರಾಹ ರೂಪಂ' ಹಾಡಿನ ಹೊಸ ಸಂಗೀತ, ಜನ ಏನಂತಾರೆ?

ರಿಷಬ್‌ ಶೆಟ್ಟಿ ನಿರ್ದೇಶಿಸಿ,ನಟಿಸಿರುವ ಕನ್ನಡ ಚಿತ್ರ 'ಕಾಂತಾರ' ವಿಶ್ವಾದ್ಯಂತ ತನ್ನ ಪರಿಮಳವನ್ನು ಪಸರಿಸಿ ಸಿನಿ ಪ್ರೇಕ್ಷಕರಿಗೆ ಇಷ್ಟವಾಗಿ ಬಾಕ್ಸ್ ಆಫೀಸ್ ನಲ್ಲಿ ಕೂಡ ಗೆದ್ದಿರುವುದು ಗೊತ್ತಿರುವ ಸಂಗತಿ.
ಕಾಂತಾರ ಚಿತ್ರದ ವರಾಹ ರೂಪಂ ಹಾಡಿನ ದೃಶ್ಯ
ಕಾಂತಾರ ಚಿತ್ರದ ವರಾಹ ರೂಪಂ ಹಾಡಿನ ದೃಶ್ಯ

ಬೆಂಗಳೂರು: ರಿಷಬ್‌ ಶೆಟ್ಟಿ ನಿರ್ದೇಶಿಸಿ,ನಟಿಸಿರುವ ಕನ್ನಡ ಚಿತ್ರ 'ಕಾಂತಾರ' ವಿಶ್ವಾದ್ಯಂತ ತನ್ನ ಪರಿಮಳವನ್ನು ಪಸರಿಸಿ ಸಿನಿ ಪ್ರೇಕ್ಷಕರಿಗೆ ಇಷ್ಟವಾಗಿ ಬಾಕ್ಸ್ ಆಫೀಸ್ ನಲ್ಲಿ ಕೂಡ ಗೆದ್ದಿರುವುದು ಗೊತ್ತಿರುವ ಸಂಗತಿ. ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವಾಗಲೇ ಚಿತ್ರ ಓಟಿಟಿಗೂ ಬಂದು ನಿನ್ನೆ ನವೆಂಬರ್ 24ರಿಂದ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗುತ್ತಿದೆ.

ಚಿತ್ರಮಂದಿರದಲ್ಲಿ ಮೂರ್ನಾಲ್ಕು ಬಾರಿ ನೋಡಿದವರು ಒಟಿಟಿಯಲ್ಲಿ ಚಿತ್ರದ ಅನುಭವ ಪಡೆಯಲೆಂದು ನಿನ್ನೆ ಆರಂಭ ದಿನವೇ ವೀಕ್ಷಿಸಿದ್ದಾರೆ. ಚಿತ್ರದ ಘನತೆಯನ್ನು ಮತ್ತಷ್ಟು ಹೆಚ್ಚಿಸಿದ್ದು ಚಿತ್ರದ ಆತ್ಮವೇ ಎನ್ನಬಹುದಾದ ವರಾಹ ರೂಪಂ ಹಾಡು ಮತ್ತು ಕ್ಲೈಮಾಕ್ಸ್ ದೃಶ್ಯ. ವರಾಹ ರೂಪಂ ಹಾಡನ್ನು ಕೇಳಿ ಥ್ರಿಲ್ ಆಗದವರು ಯಾರೂ ಇಲ್ಲ ಎನ್ನಬಹುದು.

ವರಾಹ ರೂಪಂ ಹಾಡಿನ ಸಣ್ಣ ಝಲಕ್ ಚಿತ್ರದ ಆರಂಭದಲ್ಲಿ ಮತ್ತು ಕ್ಲೈಮ್ಯಾಕ್ಸ್ ನಲ್ಲಿ ಬರುತ್ತದೆ. ಚಿತ್ರಕ್ಕೆ ಪ್ರೇಕ್ಷಕರು ಬಹುಪರಾಕ್ ಎನ್ನುತ್ತಿರುವಾಗಲೇ ಅಪಸ್ವರವೊಂದು ಬಿಡುಗಡೆಯಾದ ಎರಡನೇ ವಾರವೇ ಬರಲಾರಂಭಿಸಿತು. ಕೇರಳ ಮೂಲದ ತೈಕ್ಕುಡಂ ಬ್ರಿಡ್ಜ್ ಎಂಬ ಸಂಗೀತ ಕಂಪೆನಿ, ವರಾಹ ರೂಪಂ ಹಾಡಿನ ಮೂಲ ಸಂಗೀತ ನಮ್ಮದು, ಕಾಂತಾರ ಚಿತ್ರದಲ್ಲಿ ನಮ್ಮ ಹಾಡಿನ ಟ್ಯೂನನ್ನು ಕದಿಯಲಾಗಿದೆ ಅದನ್ನು ತೆಗೆಯಬೇಕು ಎಂದು ಒತ್ತಡ ಹೇರಿತು. ಕಾಂತಾರ ಚಿತ್ರದ ನಿರ್ದೇಶಕ ಅಜನೀಶ್ ಲೋಕನಾಥ್, ಹಾಡಿಗೆ ಸ್ಪೂರ್ತಿ ಪಡೆದುಕೊಂಡಿದ್ದೇವೆ, ಸಂಪೂರ್ಣ ನಕಲು ಅಲ್ಲ ಎಂದೇ ಹೇಳಿಕೊಂಡು ಬಂದಿದ್ದರು. ಹೊಂಬಾಳೆ ಫಿಲ್ಮ್ಸ್ ಸುಮ್ಮನಾಗಿತ್ತು. ಅಷ್ಟಕ್ಕೇ ಸುಮ್ಮನಾಗದ ತೈಕ್ಕುಡಂ ಬ್ರಿಡ್ಜ್ ಕೇರಳ ಹೈಕೋರ್ಟ್ ಮೆಟ್ಟಿಲೇರಿತು.

ಕೋರ್ಟ್​ನಲ್ಲಿ ಕೇಸ್ ತೈಕ್ಕುಡಂ ಪರವಾಗಿ ಹೊಂಬಾಳೆ ಫಿಲ್ಮ್ಸ್ ಗೆ ಹಿನ್ನಡೆಯಾಗಿದೆ. ಈ ಕಾರಣದಿಂದ ಎಲ್ಲಾ ಪ್ಲಾಟ್​ಫಾರ್ಮ್​​ಗಳಿಂದ ಕನ್ನಡದ ವರಾಹ ರೂಪಂ ಹಾಡಿನ ಮೂಲ ಸಂಗೀತವನ್ನು ತೆಗೆದು ಹೊಸ ಸಂಗೀತ ಹಾಕಲಾಗಿದೆ.  ಈಗ ಸಿನಿಮಾ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿದೆ. ಪ್ರೈಮ್​​ನಲ್ಲಿ ಪ್ರಸಾರಕಂಡ ವರ್ಷನ್​​ನಲ್ಲಿ ವರಾಹ ರೂಪಂ ಹಾಡಿನ ರಾಗ ಅಥವಾ ಟ್ಯೂನ್ ಬದಲಾಗಿದೆ.  

ಒಟಿಟಿಯಲ್ಲಿ ಚಿತ್ರ ನೋಡಿದ ಪ್ರೇಕ್ಷಕರಿಗೆ ಹೊಸ ಹಾಡು ಇಷ್ಟವಾಗುತ್ತಿಲ್ಲ, ಹಳೆಯ ಹಾಡು ಮತ್ತು ಹೊಸ ಹಾಡನ್ನು ತುಲನೆ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. 

ಶುರುವಾಯ್ತು ಅಭಿಯಾನ
'ಕಾಂತಾರ' ಸಿನಿಮಾದ ಆತ್ಮದಂತೆ 'ವರಾಹ ರೂಪಂ..' ಹಾಡು ಇತ್ತು. ಅದನ್ನು ಮರಳಿ ಬಳಸಬೇಕು ಎಂದು ನೆಟ್ಟಿಗರು ಅಭಿಯಾನ ಶುರು ಮಾಡಿದ್ದಾರೆ. #BringbackVarahaRoopam ಎಂಬ ಹ್ಯಾಷ್‌ಟ್ಯಾಗ್ ಬಳಸಿ, ಟ್ವಿಟರ್‌ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. 'ವರಾಹ ರೂಪಂ.. ಹಾಡು ಇಲ್ಲದೇ ಹೋದರೆ, ಕಾಂತಾರ, ಕಾಂತಾರವೇ ಅಲ್ಲ. ಆ ಹಾಡಿಲ್ಲದಿದ್ದರೆ ಅದರ ತಿರುಳು ಚೆನ್ನಾಗಿರುವುದಿಲ್ಲ. ಬೇಕೇ ಬೇಕು 'ವರಾಹ ರೂಪಂ..' ಹಾಡು ಬೇಕು..' ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. 'ಒಂದು ಹಾಡಿನಿಂದ ಒಂದು ಸಿನಿಮಾವಾಗುವುದಿಲ್ಲ. ಆದರೆ ಆ ಒಂದು ಹಾಡೇ ಇಡೀ ಸಿನಿಮಾವನ್ನು ಕಂಪ್ಲೀಟ್ ಮಾಡುತ್ತದೆ. ದಯವಿಟ್ಟು ವರಾಹ ರೂಪಂ ಹಾಡನ್ನು ಮರುಬಳಕೆ ಮಾಡಿ..' ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ವಿವಾದ ಏನು?
ವರಾಹ ರೂಪಂ ಮತ್ತು ಮಲಯಾಳಂನ ನವರಸಂ ಹಾಡುಗಳ ನಡುವೆ ಇರುವ ಸಾಮ್ಯತೆಯು ಕಾಪಿರೈಟ್ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಇದರ ವಿರುದ್ಧ ಕಾನುನೂ ಕ್ರಮ ಕೈಗೊಳ್ಳುತ್ತೇವೆ. ಹಾಡಿನ ಹಕ್ಕುಗಳ ಕುರಿತಂತೆ ಕಾಂತಾರ ತಂಡ ನಮಗೆ ಯಾವುದೇ ಕ್ರೆಡಿಟ್ ನೀಡಿಲ್ಲ, ಈ ಹಾಡನ್ನು ತಮ್ಮ ಸ್ವಂತ ಸೃಷ್ಟಿ ಎನ್ನುವಂತೆ ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಹೋರಾಟಕ್ಕೆ ನಿಮ್ಮೆಲ್ಲರ ಬೆಂಬಲ ಬೇಕು, ಅಷ್ಟೇ ಅಲ್ಲದೆ ಎಲ್ಲ ಸಂಗೀತಕಾರರು ಮ್ಯೂಸಿಕ್ ರೈಟ್ ಉಳಿಸಿಕೊಳ್ಳಲು ಸಹಾಯ ಮಾಡಿ ಎಂದು 'ತೈಕ್ಕುಡಂ ಬ್ರಿಡ್ಜ್' ತಂಡವು ಹೇಳಿಕೊಂಡಿತ್ತು. ಕಾನೂನು ಸಮರಕ್ಕೆ ಇಳಿದು ಗೆದ್ದಿತು. 

ಆನಂತರ ‘ತೈಕ್ಕುಡಂ ಬ್ರಿಡ್ಜ್’ ಮ್ಯೂಸಿಕ್ ಬ್ಯಾಂಡ್‌ನ ಅನುಮತಿ ಇಲ್ಲದೆ ‘ವರಾಹ ರೂಪಂ’ ಹಾಡನ್ನು ಬಳಕೆ ಮಾಡುವಂತಿಲ್ಲ ಎಂದು ಕೇರಳದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ನೀಡಿತ್ತು. ಇದೀಗ ಓಟಿಟಿಯಲ್ಲಿ ಅಮೇಜಾನ್ ಪ್ರೈಮ್‌ ವಿಡಿಯೋ ವರಾಹಂ ರೂಪಂ ಹಾಡನ್ನು ಕೈಬಿಟ್ಟು, ಬೇರೆ ಹಾಡನ್ನು ಬಳಿಸಿದೆ. ಈ ಕುರಿತು ಕೂಡ ‘ತೈಕ್ಕುಡಂ ಬ್ರಿಡ್ಜ್’ ಮ್ಯೂಸಿಕ್ ಬ್ಯಾಂಡ್‌ ಪೋಸ್ಟ್ ಹಾಕಿದ್ದು, ಇದು ನಮಗೆ ಸಿಕ್ಕ ಜಯ ಎಂದು ಹೇಳಿಕೊಂಡಿದೆ. 

ಕಾಂತಾರ ತುಳುವಿನಲ್ಲಿ ಇಂದು ಬಿಡುಗಡೆ: ಈ ಮಧ್ಯೆ ಕಾಂತಾರ ಚಿತ್ರದ ತುಳು ಅವತರಣಿಕೆ ಸಾಗರೋತ್ತರದಲ್ಲಿ ಇಂದು ಮತ್ತು ಭಾರತದಲ್ಲಿ ಡಿಸೆಂಬರ್ 2ರಂದು ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com