ಕಾಂತಾರಕ್ಕೆ ಕಾನೂನು ಸಂಕಷ್ಟ: 'ವರಾಹ ರೂಪಂ' ವಿರುದ್ಧ ಕೃತಿಚೌರ್ಯ ಕೇಸ್‌ ದಾಖಲಿಸಲು 'ತೈಕ್ಕುಡಂ ಬ್ರಿಡ್ಜ್‌' ನಿರ್ಧಾರ

ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಮತ್ತು ರಿಷಬ್​ ಶೆಟ್ಟಿ ರಚನೆ-ನಿರ್ದೇಶನದಲ್ಲಿ ಮೂಡಿಬಂದು ಭರ್ಜರಿ ಪ್ರದರ್ಶನ ಕಾಣುತ್ತಿರುವ ಜೊತೆಗೆ ಮೆಚ್ಚುಗೆಯ ಮಹಾಪೂರಕ್ಕೆ ಪಾತ್ರವಾಗುತ್ತಿರುವ ‘ಕಾಂತಾರ’ ಸಿನಿಮಾಗೆ ಈಗ ಕಾನೂನುಕ್ರಮದ ಎಚ್ಚರಿಕೆ ಎದುರಾಗಿದೆ.
ಕಾಂತಾರ ಸಿನಿಮಾ ಸ್ಟಿಲ್
ಕಾಂತಾರ ಸಿನಿಮಾ ಸ್ಟಿಲ್

ಬೆಂಗಳೂರು: ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಮತ್ತು ರಿಷಬ್​ ಶೆಟ್ಟಿ ರಚನೆ-ನಿರ್ದೇಶನದಲ್ಲಿ ಮೂಡಿಬಂದು ಭರ್ಜರಿ ಪ್ರದರ್ಶನ ಕಾಣುತ್ತಿರುವ ಜೊತೆಗೆ ಮೆಚ್ಚುಗೆಯ ಮಹಾಪೂರಕ್ಕೆ ಪಾತ್ರವಾಗುತ್ತಿರುವ ‘ಕಾಂತಾರ’ ಸಿನಿಮಾಗೆ ಈಗ ಕಾನೂನುಕ್ರಮದ ಎಚ್ಚರಿಕೆ ಎದುರಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ವೀಕ್ಷಣೆ ಕಂಡ ಎಂಬ ಸಾಧನೆ ಬರೆದ ಕಾಂತಾರ ಬೇರೆ ಭಾಷೆಗಳಲ್ಲೂ ಸಖತ್ ಸದ್ದು ಮಾಡುತ್ತಿದೆ. ಆದರೆ ಆರಂಭದಿಂದಲೂ ಕಾಂತಾರದ ವರಾಹ ರೂಪಂ ಹಾಡಿಗೆ ಕೇಳಿ ಬರುತ್ತಿರುವ ಆರೋಪ ಇದೀಗ ಮತ್ತೊಂದು ರೂಪ ಪಡೆದಿದೆ.

ಕಾಂತಾರ ಚಿತ್ರದಲ್ಲಿ ಪಂಜುರ್ಲಿ ದೈವವನ್ನು ಹೊಗಳುವ ‘ವರಾಹ ರೂಪಂ ದೈವ ವರಿಷ್ಟಂ’ ಹಾಡು ಪ್ರಸಿದ್ಧಿಯಾಗಿದೆ. ಆದರೆ ಆರಂಭದಿಂದಲೂ ಈ ಹಾಡು ಮಲಯಾಳಂ ನ ನವರಸಂ ಹಾಡಿನ ಕಾಪಿ ಎಂಬ ಕೇಳಿಬರುತ್ತಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕಾಂತಾರಾ ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್, ಅದು ಬೇರೆ ಇದು ಬೇರೆ ಎಂದು ಹೇಳಿ ಸಾಮ್ಯತೆ ಆರೋಪವನ್ನು ತಳ್ಳಿ ಹಾಕಿದ್ದರು.

ಕಾಂತಾರ ಸಿನಿಮಾದಲ್ಲಿ ವರಾಹ ರೂಪಂ ಗೀತೆ ಮೂಲಕ ಕಾಪಿರೈಟ್ ಹಕ್ಕುಗಳ ಉಲ್ಲಂಘನೆ ಆಗಿದೆ ಎಂದು ತೈಕ್ಕುಡಂ ಬ್ರಿಡ್ಜ್​ ಎಂಬ ಸಂಗೀತ ಕಂಪನಿ ತಗಾದೆ ತೆಗೆದಿದೆ. ತೈಕ್ಕುಡಂ ಬ್ರಿಡ್ಜ್​ಗೂ ಕಾಂತಾರಕ್ಕೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ. ಅದಾಗ್ಯೂ ನಮ್ಮ ಬೌದ್ಧಿಕ ಆಸ್ತಿ ಆಗಿರುವ ನವರಸಂ ಗೀತೆ ಹಾಗೂ ವರಾಹರೂಪಂ ಗೀತೆಗೂ ಸಾಕಷ್ಟು ಸಾಮ್ಯತೆ ಕಂಡುಬಂದಿದ್ದು, ಈ ಮೂಲಕ ನಮ್ಮ ಕಾಪಿರೈಟ್ಸ್ ಉಲ್ಲಂಘನೆ ಆಗಿದೆ ಎಂದು ಆ ಸಂಸ್ಥೆ ಹೇಳಿಕೊಂಡಿದೆ.

ನಾವು ನಮ್ಮ ಕೇಳುಗರಿಗೆ ತಿಳಿಸುವುದೇನೆಂದರೆ, ತೈಕ್ಕುಡಂ ಬ್ರಿಡ್ಜ್​ ತಂಡವು ‘ಕಾಂತಾರ’ ಸಿನಿಮಾದ ಜೊತೆ ಯಾವುದೇ ರೀತಿಯ ಸಹಯೋಗ ಹೊಂದಿಲ್ಲ. ವರಾಹ ರೂಪಂ ಮತ್ತು ನವರಸಂ ಹಾಡುಗಳ ನಡುವೆ ಇರುವ ಸಾಮ್ಯತೆಯು ಕಾಪಿರೈಟ್​ ಕಾನೂನಿನ ಸ್ಪಷ್ಟ ಉಲ್ಲಂಘನೆ ಆಗಿದೆ. ಇದಕ್ಕೆ ಕಾರಣವಾದವರ ವಿರುದ್ಧ ನಾವು ಕಾನೂನಿನ ಕ್ರಮಕ್ಕೆ ಒತ್ತಾಯಿಸುತ್ತೇವೆ’ ಎಂದಿದೆ.

ಹಾಡಿನ ಹಕ್ಕುಗಳನ್ನು ಕುರಿತಂತೆ ಕಾಂತಾರ ತಂಡದವರು ನಮಗೆ ಯಾವುದೇ ಕ್ರೆಡಿಟ್​ ನೀಡಿಲ್ಲ. ಅಲ್ಲದೆ ಈ ಹಾಡನ್ನು ತಮ್ಮ ಸ್ವಂತ ಸೃಷ್ಟಿ ಎಂಬಂತೆ ಪ್ರಚಾರ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ನಮಗೆ ಬೆಂಬಲ ನೀಡಬೇಕು ಎಂದು ನಮ್ಮ ಕೇಳುಗರಲ್ಲಿ ವಿನಂತಿ ಮಾಡಿಕೊಳ್ಳುತ್ತೇವೆ. ಮ್ಯೂಸಿಕ್​ ಕಾಪಿ ರೈಟ್​ ಉಳಿಸುವ ಬಗ್ಗೆ ಎಲ್ಲ ಸಂಗೀತ ಕಲಾವಿದರು ತಮ್ಮ ಅಭಿಪ್ರಾಯ ಹಂಚಿಕೊಳ್ಳಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ’ ಎಂದು ನವರಸಂ ಹಾಡಿನ ಸೃಷ್ಟಿಕರ್ತರಾದ ‘ತೈಕ್ಕುಡಂ ಬ್ರಿಡ್ಜ್’ ತಂಡ ಪೋಸ್ಟ್​ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com