'ಇದಾದ 3 ದಿನಕ್ಕೆ ಪುನೀತ ಹೋಗಿಬಿಟ್ಟ ಅಂದರು, ಹೃದಯ ಒಡೆದು ಚೂರಾಯಿತು, ಪುನೀತ ಅವರ ತಂದೆಯನ್ನು ಮೀರಿ ಬೆಳೆದು ಉಳಿದ ದೇವಮಾನವ': ನಟ ಜಗ್ಗೇಶ್

ನಟ ಪುನೀತ್ ರಾಜ್ ಕುಮಾರ್ ಚಿತ್ರರಂಗದ ಎಲ್ಲಾ ಹಿರಿಯ, ಕಿರಿಯ ಕಲಾವಿದರೊಂದಿಗೆ ಆತ್ಮೀಯರಾಗಿದ್ದರು. ಕನ್ನಡ ಚಿತ್ರರಂಗದ ಹಿರಿಯ ನಟ, ರಾಜಕಾರಣಿ ಜಗ್ಗೇಶ್ ಜೊತೆ ಆತ್ಮೀಯರಾಗಿದ್ದ ಪುನೀತ್ ಜೊತೆಯಲ್ಲಿ ಮಂತ್ರಾಲಯಕ್ಕೂ ಹೋಗಿ ಬಂದಿದ್ದರು. 
ನಟ ಜಗ್ಗೇಶ್ ಡಾ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಜೊತೆ
ನಟ ಜಗ್ಗೇಶ್ ಡಾ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಜೊತೆ

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಚಿತ್ರರಂಗದ ಎಲ್ಲಾ ಹಿರಿಯ, ಕಿರಿಯ ಕಲಾವಿದರೊಂದಿಗೆ ಆತ್ಮೀಯರಾಗಿದ್ದರು. ಕನ್ನಡ ಚಿತ್ರರಂಗದ ಹಿರಿಯ ನಟ, ರಾಜಕಾರಣಿ ಜಗ್ಗೇಶ್ ಜೊತೆ ಆತ್ಮೀಯರಾಗಿದ್ದ ಪುನೀತ್ ಜೊತೆಯಲ್ಲಿ ಮಂತ್ರಾಲಯಕ್ಕೂ ಹೋಗಿ ಬಂದಿದ್ದರು. (Puneet Rajkumar)

ಪುನೀತ್ ಜೊತೆಗಿನ ಒಡನಾಟ, ಕಡೆಯ ದಿನಗಳ ಬಗ್ಗೆ ಜಗ್ಗೇಶ್ (Actor Jaggesh) ಭಾವನಾತ್ಮಕವಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಡಾ ರಾಜ್ ಕುಮಾರ್ ಜೊತೆಗಿನ ಒಡನಾಟದ ಬಗ್ಗೆ ಆಸಕ್ತಿಕರ ವಿಚಾರ ಹಂಚಿಕೊಂಡಿದ್ದಾರೆ.

ಜಗ್ಗೇಶ್ ಬರೆದ ಸನ್ನಿವೇಶದ ಯಥಾವತ್ ಪ್ರತಿ ಇಲ್ಲಿದೆ: ಅದು ರಾಘವೇಂದ್ರ ರಾಜ್ ಕುಮಾರ್ ಮದುವೆಗೆ ವಜ್ರೇಶ್ವರಿ ಮ್ಯಾನೇಜರ್ ಕಂಠೀರವ ಕುಮಾರ್  ಬರಬೇಕು ಎಂದು ತಿಳಿಸಿದ.ಅಣ್ಣನ ಮನೆಯ ಮದುವೆ ಸಡಗರದಲ್ಲಿ ಬಾಗಿಯಾಗುವ ಸೌಭಾಗ್ಯ ಪರಿಮಳನಿಗೆ ತಯಾರಾಗಲು ಹೇಳಿದೆ..ಆಗ ನನ್ನ ಬಳಿ ಇದ್ದದ್ದು ಬುಲೇಟ್ ಅದನ್ನ ಏರಿ ಪುನೀತಫಾರ್ಮ್ ಗೆ ಹೋದೆವು.ಅಣ್ಣನ ಪ್ರೀತಿಗೆ ಏನು ಹೇಳಬೇಕೋ ಬಾಯ್ಯ ಬಾ ಎಂದು ಕೂಗಿ ಮೈಸವರಿ ಅವರೆ ಕುಡಿಯಲು ಪಾನಿಯ ನೀಡಿದರು..ಬಂದವರಿಗೆಲ್ಲಾ ನನ್ನ ಪರಿಚಯಿಸಿದರು ಅದರಲ್ಲಿ ನನ್ನ ವಿಶೇಷ ಪುನೀತ್..ಕಂದ ಇದು ಯಾರು ಗೊತ್ತ ನಮ್ಮ ರಜನಿಕಾಂತ ಎಂದರು ಬಾಲಕ ಪುನೀತ ಆಶ್ಚರ್ಯದಿಂದ ನನ್ನ ನೋಡಿದ.

ನನಗು ಆತನ ನೋಡಿ ಆನಂದವಾಯಿತು..ಕೆಲದಿನದ ನಂತರ ರಣರಂಗ ಶಿವಣ್ಣನ ಚಿತ್ರದ ಕ್ಲೈಮ್ಯಾಕ್ಸ್ ಸಮಯದಲ್ಲಿ ವೆಂಕಟೇಶ ಎಂಬ ಜೂನಿಯರ್ ಆರ್ಟಿಸ್ಟ್ ಲೋ ತಗಳೋ ರಾಜಣ್ಣನ ಜೊತೆ ಫೋಟೊ ಎಂದು ನೀಡಿದ..ಆನಂದ ತಡೆಯಲಾಗಲಿಲ್ಲಾ ಕಾರಣ ಆ ಕಾಲದಲ್ಲಿ ರಾಜಣ್ಣನ ಜೊತೆ ಫೋಟೊ ಅಸಾಧ್ಯ ನೋಡಿದರೆ ಅದು ನನ್ನ ಹುಡುಕಿಬಂತು.. ವೆಂಕಟೇಶ ಹೊಟ್ಟೆಪಾಡಿಗೆ ಸಣ್ಣ ಕ್ಯಾಮೆರ ಇಟ್ಟುಕೊಂಡಿದ್ದ ಒಂದು ಫೋಟೊಗೆ 5ರೂ ಪಡೆಯುತ್ತಿದ್ದ.. ಬಡವ ಎಂದು ಅಣ್ಣನೆ ಸಹಕರಿಸಿದ್ದರು..

ಕೆಲ ವರ್ಷ ನಂತರ ಪುನೀತ ಅಣ್ಣನ ಜೊತೆ ಕಲಾವಿದ ಸಂಘದ ಕಾರ್ಯಕ್ರಮದಲ್ಲಿ ನರ್ತಿಸಿದ ಆಗ ಅಮ್ಮ ಜಗ್ಗೇಶ ಅವನು ಪ್ರೀತಿಸುವ ಹುಡುಗಿ ಬಂದಿದ್ದಾಳೆ ಎಂದರು ಜನರಮದ್ಯೆ ನನ್ನ ಕಣ್ಣಿಗೆ ಅಶ್ವಿನಿ ಕಾಣಲಿಲ್ಲಾ..ನಂತರ ಮದುವೆ ಸೂಪರ್ ಸ್ಟಾರ್ ಎಲ್ಲಾ ಆದರು ಅದೇನೊ ನನ್ನ ವಿಪರೀತ ಇಷ್ಟಪಡುತ್ತಿದ್ದ..ನಮ್ಮ ಸ್ನೇಹ ವರ್ಣಿಸಲಾಗದ ಸಂಕೋಲೆ.. ಕಡೆದಿನಗಳ ಎಂದು ಭಾವಿಸಲಿಲ್ಲಾ ನಿರ್ದೇಶಕ  ಸಂತೋಷ ಪುನೀತನ ಜೊತೆ ಮಂತ್ರಾಲಯಕ್ಕೆ ಕಳೆದುಕೊಂಡು ಹೋದ  ಆ ದಿನ ಮನಬಿಚ್ಚಿ ಮಾತಾಡಿ ನಕ್ಕು ಸಮಯ ಕಳೆದೆವು..

ಕಡೆ 3 ದಿನದ ಹಿಂದೆ ಯೋಗಿ ಪುನೀತ ಮಲ್ಲೇಶ್ವರಕ್ಕೆ ಬಂದ ವಿಷಯ ತಿಳಿಸಿದ ಕರೆಮಾಡಿದೆ ಅಣ್ಣ ಮಲ್ಲೇಶ್ವರದಲ್ಲಿ ಇರುವೆ ಎಂದ..ಹಾಗೆ ಎದ್ದು ಕಾರ್ ಡ್ರೈವ್ ಮಾಡಿ ನಾನೆ ಹೋದೆ..ಪೂಜೆಗೆ ಕುಳಿತು ತೊಡೆ ನೋವಾಗಿದೆ ಹಾಗಾಗಿ ಚಿಕಿತ್ಸೆಗೆ ಬಂದೆ ಎಂದ..ಚಿಕಿತ್ಸೆ ಮುಗಿದ ಮೇಲೆ ಪುನೀತ್ ಸ್ನೇಹಿತ ಸತೀಶ್ ನಾನು ಪುನೀತ ಕೆಲ ಸಮಯ ಮಾತಾಡಿ ನಿರ್ಗಮಿಸಿದೆವು..

ಇದಾದ 3 ದಿನಕ್ಕೆ ಪುನೀತ ಹೋಗಿಬಿಟ್ಟ ಅಂದರು ಹೃದಯ ಒಡೆದು ಚೂರಾಯಿತು..ಜೀವನದ ಆಸಕ್ತಿ.. ಬದುಕಿನ ಮೇಲೆ ನಂಬಿಕೆ..ನಾವು ಯಾರು..ಈ ಭೂಮಿಗೆ ಏಕೆ ಬಂದೆವು..

ಎಲ್ಲಾ ಇದೆ ಮುಂದೆ ಇರದು..ಯಾವುದು ಸತ್ಯ ಯಾವುದು ಮಿತ್ಯ..ನಾನು ಹೇಗೆ ಇರಬೇಕು ಏನು ಮಾಡಬೇಕು..ಬದುಕು ನಶ್ವರ..ಎಂಬ ಅನೇಕ ಪ್ರಶ್ನೆ ನನ್ನ ಕಾಡುತ್ತಿದೆ..ನನ್ನೊಳಗೆ ನಾನು ಬಚ್ಚಿಕೊಂಡು ಸುಮ್ಮನೆ ಇರುವಂತೆ ನಟಿಸಿ ನಾಟಕೀಯ ಬದುಕುತ್ತಿರುವೆ..ನನ್ನವರು ಎಂದು ಸಿಕ್ಕಾಗ ಮನಬಿಚ್ಚಿ ಮಾತಾಡುವೆ..ಕೆಲಸ ಇದ್ದಾಗ ಹೋಗುವೆ..ಮಿಕ್ಕಂತೆ ಯಾರಿಗು ಸಿಗದೆ ಏಕಾಂತಕ್ಕೆ ಜಾರುವೆ..ಇದು ಪುನೀತ ಸಿಕ್ಕಾಗ ಇದ್ದಾಗ ಹೋದಮೇಲೆ  ನನ್ನ ಹೃದಯದ ಅನಿಸಿಕೆ.. ಕಡೆಯ ಮಾತು ಪುನೀತ ಅವರ ತಂದೆಯ ಮೀರಿ ಬೆಳೆದು ಉಳಿದ ದೇವಮಾನವ....

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com