ಪುನೀತ್ ರಾಜ್ ಕುಮಾರ್ ನಟನೆಯ ಸಾಕ್ಷ್ಯಚಿತ್ರ 'ಗಂಧದ ಗುಡಿ' ಬಿಡುಗಡೆ: ಮೊದಲ ದಿನ 1,800 ಶೋ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕಟ್ಟಕಡೆಯ ಸಾಕ್ಷ್ಯಚಿತ್ರ ಗಂಧದ ಗುಡಿ ಬಿಡುಗಡೆಯಾಗಿ ಅಭಿಮಾನಿಗಳು ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದಾರೆ. 
ನರ್ತಕಿ ಥಿಯೇಟರ್ ಮುಂದೆ ಪುನೀತ್ ಕಟೌಟ್
ನರ್ತಕಿ ಥಿಯೇಟರ್ ಮುಂದೆ ಪುನೀತ್ ಕಟೌಟ್

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneet Rajkumar) ಅಭಿನಯದ ಕಟ್ಟಕಡೆಯ ಸಾಕ್ಷ್ಯಚಿತ್ರ ಗಂಧದ ಗುಡಿ ಬಿಡುಗಡೆಯಾಗಿ ಅಭಿಮಾನಿಗಳು ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದಾರೆ.

ನಿನ್ನೆ ಚಿತ್ರ ಬಿಡುಗಡೆಯಾದ ದಿನ ಅಪ್ಪು ಅಭಿಮಾನಿಗಳ ಸಂಘಗಳು ಸಾವಿರಾರು ಚಲನಚಿತ್ರ ವೀಕ್ಷಕರಿಗೆ ಉಚಿತ ಆಹಾರ ವಿತರಿಸುವ ಮೂಲಕ ಮತ್ತು ಪುನೀತ್ ಕಟೌಟ್‌ಗಳಿಗೆ ಹಾಲು ಅಭಿಷೇಕ ಮಾಡುವ ಮೂಲಕ, ಕನ್ನಡ ಸಿನಿ ತಾರೆ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರ ‘ಗಂಧದ ಗುಡಿ’ಗೆ (Gandhada Gudi) ಲಕ್ಷಾಂತರ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ದೊರೆಯಿತು.

ಪಿಆರ್‌ಕೆ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿ ನಿರ್ಮಿಸಿರುವ ಅಮೋಘವರ್ಷ ನಿರ್ದೇಶನದ 'ಗಂಧದ ಗುಡಿ' ಸಾಕ್ಷ್ಯಚಿತ್ರ ಕಳೆದ ವರ್ಷ ಹೃದಯಾಘಾತದಿಂದ ನಿಧನರಾದ ದಿವಂಗತ ನಟ ಪುನೀತ್ (46 ವರ್ಷ) ಅವರ ಮೊದಲ ಪುಣ್ಯತಿಥಿಯ ಮುನ್ನಾದಿನ ಬಿಡುಗಡೆಯಾಗಿದೆ. 

ಬೆಂಗಳೂರಿನ ಕೆ.ಜಿ.ರಸ್ತೆಯ ನರ್ತಕಿ ಚಿತ್ರಮಂದಿರದಲ್ಲಿ ರಾಜ್ ಕುಮಾರ್ ಕುಟುಂಬ (Rajkumar family) ಚಿತ್ರ ವೀಕ್ಷಿಸಿದೆ. ಪುನೀತ್ ಅವರ ಸಹೋದರ ರಾಘವೇಂದ್ರ ರಾಜ್‌ಕುಮಾರ್ ಥಿಯೇಟರ್ ಮುಂದೆ ಅಭಿಮಾನಿಗಳ ಜೊತೆ ಸೇರಿ ಡ್ಯಾನ್ಸ್ ಮಾಡಿದರು. ಅಭಿಮಾನಿಯೊಬ್ಬರು ಚಲನಚಿತ್ರವನ್ನು ವೀಕ್ಷಿಸಲು ಪ್ರಮೋದ್ ಥಿಯೇಟರ್‌ಗೆ ಕುದುರೆ ಸವಾರಿ ಮಾಡಿಕೊಂಡು ಬಂದರು. 

ಕೆಲವು ಅಭಿಮಾನಿಗಳು ಕೈಯಲ್ಲಿ ಕರ್ನಾಟಕದ ಬಾವುಟ ಹಿಡಿದು ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಿದರು. ನಿನ್ನೆ ರಾಜ್ಯದಾದ್ಯಂತ 1,800 ಪ್ರದರ್ಶನಗಳನ್ನು ಚಿತ್ರ ತಯಾರಕರು ಆಯೋಜಿಸಿದ್ದಾರೆ. ‘ಗಂಧದ ಗುಡಿ’ ನಗರದ ಮಲ್ಟಿಪ್ಲೆಕ್ಸ್‌ಗಳು ಮತ್ತು ಸಿಂಗಲ್ ಥಿಯೇಟರ್‌ಗಳಲ್ಲಿ ಹೊಸ ದಾಖಲೆಗೆ ನಾಂದಿ ಹಾಡಿತು. 98 ನಿಮಿಷಗಳ ಸಾಕ್ಷ್ಯಚಿತ್ರ ಮಲ್ಟಿಪ್ಲೆಕ್ಸ್‌ಗಳಲ್ಲಿ ಬೆಳಿಗ್ಗೆ 6 ರಿಂದ 10 ರ ನಡುವೆ 50 ಪ್ರದರ್ಶನಗಳನ್ನು ಕಂಡಿತು. 

ಅವರ ಕಣ್ಣುಗಳಿಂದ ಸಿನಿಮಾ ನೋಡುತ್ತೇವೆ ಎಂದ ಪುನೀತ್ ಪತ್ನಿ
ಕೆಲವು ಮಲ್ಟಿಪ್ಲೆಕ್ಸ್‌ಗಳು ಏಳೆಂಟು ಪ್ರದರ್ಶನಗಳನ್ನು ಏರ್ಪಡಿಸಿದ್ದವು. ಎರಡ್ಮೂರು ದಿನಗಳ ಹಿಂದೆಯೇ ಮುಂಗಡ ಬುಕ್ಕಿಂಗ್ ಆರಂಭವಾಗಿತ್ತು. ಸಿಂಗಲ್ ಸ್ಕ್ರೀನ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ಸೇರಿದಂತೆ ಕರ್ನಾಟಕದಾದ್ಯಂತ 240 ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಂಡಿದೆ. ಮುಂದಿನ ಎರಡು ದಿನಗಳ ಟಿಕೆಟ್‌ಗಳು ಈಗಾಗಲೇ ಬೆಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ಮಾರಾಟವಾಗಿವೆ. ಎರಡನೇ ವಾರದಲ್ಲಿ ಇನ್ನೂ ಹಲವು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

‘ಗಂಧದ ಗುಡಿ’ ಕರ್ನಾಟಕದಾದ್ಯಂತ 50 ಪಾವತಿಸಿದ ಪ್ರೀಮಿಯರ್ ಶೋಗಳಲ್ಲಿ ಪ್ರದರ್ಶನಗೊಂಡಿತು, ಅವುಗಳಲ್ಲಿ 29 ಬೆಂಗಳೂರಿನಲ್ಲಿ, ಬಿಡುಗಡೆಯ ಒಂದು ದಿನ ಮೊದಲು ಗುರುವಾರ. ಸುಮಾರು 15,000 ಟಿಕೆಟ್‌ಗಳು ಮಾರಾಟವಾದವು, ಮೈಸೂರು, ಹುಬ್ಬಳ್ಳಿ, ಮಂಗಳೂರು, ಮಣಿಪಾಲ, ಕಲಬುರಗಿ, ಶಿವಮೊಗ್ಗ ಮತ್ತು ತುಮಕೂರಿನಲ್ಲೂ ಪ್ರೀಮಿಯರ್ ಶೋಗಳನ್ನು ಆಯೋಜಿಸಲಾಗಿತ್ತು.

ನಿರ್ದೇಶಕ ಸಂತೋಷ್ ಆನಂದ್‌ರಾಮ್ ಅವರೊಂದಿಗಿನ ಸಂದರ್ಶನದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ‘ಗಂಧದ ಗುಡಿ’ ಪುನೀತ್ ಅವರ ಪ್ರಯಾಣವನ್ನು ಸೆರೆಹಿಡಿಯುತ್ತದೆ. ಅವರ ಕಣ್ಣುಗಳ ಮೂಲಕ ನಾವು ಚಿತ್ರವನ್ನು ನೋಡುತ್ತೇವೆ. ಅವರು ಈ ಚಿತ್ರವನ್ನು ನನ್ನ ಮೂಲಕ ಕರ್ನಾಟಕದ ಜನರಿಗೆ ತೋರಿಸಲು ಬಯಸಿದ್ದರು ಅದು ನೆರವೇರಿದೆ ಎಂದು ನನಗೆ ತುಂಬಾ ಹೆಮ್ಮೆ ಇದೆ ಎಂದಿದ್ದರು. 

ಶಿಕ್ಷಣತಜ್ಞೆ ಹಾಗೂ ಇನ್ಫೋಸಿಸ್ ಪ್ರತಿಷ್ಠಾನ ಅಧ್ಯಕ್ಷೆ ಸುಧಾ ಮೂರ್ತಿ (Sudha Murty), ‘ಗಂಧದ ಗುಡಿ’ಯಂತಹ ಚಿತ್ರವನ್ನು ಕನ್ನಡ ಚಿತ್ರರಂಗ ನಿರ್ಮಿಸಿರುವುದಕ್ಕೆ ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆ ಇದೆ. ಇದು ಹೃದಯ ಸ್ಪರ್ಶದ ಕ್ಷಣವಾಗಿತ್ತು. ಸಿನಿಮಾದ ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಅವರನ್ನು ನೋಡಿದಾಗ ನನ್ನ ಕಣ್ಣಲ್ಲಿ ನೀರು ಬಂತು ಎಂದು ಪ್ರೀಮಿಯರ್ ಶೋ ನೋಡಿ ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com