'ನಾನೆಂದೂ ನಿನ್ನವ.. ಕೇವಲ ನಿನ್ನವ...' ಪತ್ನಿ ನೆನೆದು ವಿಜಯ್ ರಾಘವೇಂದ್ರ ಭಾವುಕ ನುಡಿಮುತ್ತು...
ಬೆಂಗಳೂರು: ಮಾಜಿ ಪೊಲೀಸ್ ಅಧಿಕಾರಿ ಬಿ ಕೆ ಶಿವರಾಂ ಅವರ ಪುತ್ರಿ ಸ್ಪಂದನಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ ಅವರ ಬಾಳಲ್ಲಿ ಪತ್ನಿಯ ದಿಢೀರ್ ಸಾವು ಇನ್ನಿಲ್ಲದಂತೆ ಕಂಗೆಡಿಸಿತು.
ಆಗಸ್ಟ್ 6ರಂದು ಸ್ನೇಹಿತೆಯರ ಜೊತೆ ಬ್ಯಾಂಕಾಕ್ ಗೆ ಹೋಗಿದ್ದ ಸ್ಪಂದನಾ ಅಲ್ಲಿ ಹೊಟೇಲ್ ರೂಂನಲ್ಲಿ ರಾತ್ರಿ ಮಲಗಿದ್ದ ವೇಳೆ ತೀವ್ರ ಹೃದಯಾಘಾತದಿಂದ ಹಠಾತ್ ನಿಧನರಾಗಿದ್ದರು.
ಸ್ಪಂದನಾ ಬ್ಯಾಂಕಾಕ್ನಲ್ಲಿ ಹೃದಯಾಘಾತದಿಂದ ಮೃತಪಟ್ಟರು. ಆಗಸ್ಟ್ 16ರಂದು ಸ್ಪಂದನಾ ಅವರ 11ನೇ ದಿನದ ಕಾರ್ಯ ನಡೆದಿದ್ದು, ಬೆಂಗಳೂರಿನ ಮಲ್ಲೇಶ್ವರದ ಕಬಡ್ಡಿ ಗ್ರೌಂಡ್ನಲ್ಲಿ ಸಾರ್ವಜನಿಕರಿಗಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಸ್ಪಂದನಾ ತಂದೆ ಶಿವರಾಂ ಮನೆಯಲ್ಲಿ ಶಾಂತಿ ಹೋಮ ನಡೆಯಿತು.
ಸ್ಪಂದನಾ ಅವರು ಮೃಪಟ್ಟು ಇಂದಿಗೆ 13 ದಿನಗಳು ಕಳೆದಿವೆ. ಅವರು ಇಲ್ಲ ಎಂಬ ನೋವನ್ನು ಅರಗಿಸಿಕೊಳ್ಳೋಕೆ ಕುಟುಂಬದವರ ಬಳಿ ಇಂದಿಗೂ ಸಾಧ್ಯವಾಗುತ್ತಿಲ್ಲ. ಸ್ಪಂದನಾ ತಂದೆ ಶಿವರಾಂ, ಪತಿ ವಿಜಯ್ ರಾಘವೇಂದ್ರ, ಮಗ ಶೌರ್ಯ ಹೀಗೆ ಕುಟುಂಬದ ಎಲ್ಲಾ ಸದಸ್ಯರು ದುಃಖದಲ್ಲಿದ್ದಾರೆ. ಪತ್ನಿಯನ್ನು ಕಳೆದುಕೊಂಡ ಬಳಿಕ ವಿಜಯ್ ರಾಘವೇಂದ್ರ ಅವರು ಇದೇ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಸಾಲುಗನ್ನು ಬರೆದುಕೊಂಡಿದ್ದಾರೆ.
ಸ್ಪಂದನ.. ಹೆಸರಿಗೆ ತಕ್ಕ ಜೀವ.. ಉಸಿರಿಗೆ ತಕ್ಕ ಭಾವ
ಅಳತೆಗೆ ತಕ್ಕ ನುಡಿ.. ಬದುಕಿಗೆ ತಕ್ಕ ನಡೆ
ನಮಗೆಂದೇ ಮಿಡಿದ ನಿನ್ನ ಹೃದಯವ.. ನಿಲ್ಲದು ನಿನ್ನೊಂದಿಗಿನ ಕಲರವ
ನಾನೆಂದೂ ನಿನ್ನವ.. ಕೇವಲ ನಿನ್ನವ..
ಹೀಗೆ ವಿಜಯ್ ರಾಘವೇಂದ್ರ ಅವರು ಭಾವುಕರಾಗಿ ಸಾಲುಗಳನ್ನು ಹೇಳಿಕೊಂಡಿದ್ದಾರೆ. ಅವರ ಧ್ವನಿಯಲ್ಲಿ ನೋವು ಕಾಣಿಸಿದೆ.

