ದುಬೈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಆಮೀಷ: ಕನ್ನಡ ಕಿರುತೆರೆಯ ಹಿರಿಯ ನಟನಿಗೆ ದಂಪತಿಯಿಂದ ವಂಚನೆ!

65 ವರ್ಷದ ಜನಪ್ರಿಯ ಕನ್ನಡ ಚಲನಚಿತ್ರ ಮತ್ತು ಟಿವಿ ಧಾರಾವಾಹಿ ನಟ-ಕಮ್-ನಿರ್ದೇಶಕ ಪಿ ರವಿಕಿರಣ್  ಅವರಿಗೆ ದಂಪತಿ ಮತ್ತು ಅವರ ಸಹಚರರು 4 ಲಕ್ಷಕ್ಕೂ ಹೆಚ್ಚು ರೂ. ಹಣ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 65 ವರ್ಷದ ಜನಪ್ರಿಯ ಕನ್ನಡ ಚಲನಚಿತ್ರ ಮತ್ತು ಟಿವಿ ಧಾರಾವಾಹಿ ನಟ-ಕಮ್-ನಿರ್ದೇಶಕ ಪಿ ರವಿಕಿರಣ್  ಅವರಿಗೆ ದಂಪತಿ ಮತ್ತು ಅವರ ಸಹಚರರು 4 ಲಕ್ಷಕ್ಕೂ ಹೆಚ್ಚು ರೂ. ಹಣ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ದುಬೈನಲ್ಲಿ ನಡೆವ ಕಾರ್ಯಕ್ರಮವೊಂದಕ್ಕೆ ಮುಖ್ಯ ಅತಿಥಿಯಾಗಿ ಬರುವಂತೆ ಆರೋಪಿಗಳು ಆಹ್ವಾನಿಸಿದ್ದಾರೆ, ಅದಕ್ಕಾಗಿ ಪ್ರಯಾಣ ಮತ್ತು ವಾಸ್ತವ್ಯ ಮತ್ತು ವಿಮಾನ ಟಿಕೆಟ್‌ ಖರೀದಿಗಾಗಿ ಆರೋಪಿಗಳ ಖಾತೆಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಹಣವನ್ನು ವರ್ಗಾಯಿಸಿರುವುದಾಗಿ ಎಂದು ರವಿಕಿರಣ್ ಆರೋಪಿಸಿದ್ದಾರೆ.

ವಿದೇಶಿ ಕರೆನ್ಸಿ ವಿನಿಮಯ, ಅಗ್ಗದ ಬೆಲೆಗೆ ಚಿನ್ನ ಖರೀದಿ ಮತ್ತು ಹೋಟೆಲ್ ಕೊಠಡಿ ಬುಕಿಂಗ್ ಗಾಗಿ ಹಣ ಪಡೆದಿದ್ದಾರೆ. ದುಬೈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರೆ "ಸಂಘಟಕರು" ಅವರಿಗೆ ಹಣ ನೀಡುವುದಾಗಿಯೂ ಹೇಳಿ ಆಮೀಷ ಒಡ್ಡಿದ್ದಾರೆ.

ಆರೋಪಿಗಳು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಪ್ಲಾಟ್‌ಗೆ ಸಂಬಂಧಿಸಿದ ನೋಂದಣಿ ಮತ್ತು ಇತರ  ಕಾರಣಗಳಿಗಾಗಿ ಹಣವನ್ನು ಪಾವತಿಸುವಂತೆ ಸಹ ಅವರಿಗೆ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.

ಹಣ ಪಾವತಿಸಿದ ನಂತರವೇ ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಾರಂಭಿಸಿದರು ಎಂದು ಅರಿತುಕೊಂಡ ರವಿಕಿರಣ್ ಕೆಎಸ್ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ನವೀನ್, ಭಾಗ್ಯಶ್ರೀ, ಗುರೂಜಿ, ಚೈತ್ರಾ ಮತ್ತಿತರರ ವಿರುದ್ಧ ಕೆಎಸ್ ಲೇಔಟ್‌ನ ಟೀಚರ್ಸ್ ಕಾಲೋನಿ ನಿವಾಸಿ ರವಿಕಿರಣ್ ಬುಧವಾರ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಗುರೂಜಿ ನಂಬರ್ 1 ಆರೋಪಿಯಾಗಿದ್ದು, ಚೈತ್ರಾ 2ನೇ ಆರೋಪಿಯಾಗಿದ್ದಾರೆ.

ದೂರಿನ ಪ್ರತಿಯಲ್ಲಿ, ಆರೋಪಿಗಳು ಎರಡು ವರ್ಷಗಳ ಹಿಂದೆ ಸಾಮಾನ್ಯ ಸ್ನೇಹಿತರ ಮೂಲಕ ನನಗೆ ಪರಿಚಯವಾಯಿತು ಮತ್ತು ಅವರು ಅಂದಿನಿಂದಲೂ ಸಂಪರ್ಕದಲ್ಲಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಅಕ್ಟೋಬರ್ 29 ರಂದು, ಗುರೂಜಿ ರವಿಕಿರಣ್ ಅವರಿಂದ ತಾನು ನಡೆಸುತ್ತಿರುವ ಅನಾಥಾಶ್ರಮಕ್ಕೆ ದೇಣಿಗೆ ತೆಗೆದುಕೊಂಡರು. ನವೆಂಬರ್‌ನಲ್ಲಿ, ಆರೋಪಿಯು ದುಬೈನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಮುಖ್ಯ ಅತಿಥಿಯಾಗಿ ಹೋಗುವಂತೆ  ಹೇಳಿ ಇದಕ್ಕಾಗಿ ಸಂಘಟಕರು  ಹಣ ನೀಡಲಿದ್ದಾರೆ ಎಂದು ಆಮೀಷವೊಡ್ಡಿದ್ದಾರೆ.

ವಿಮಾನ ಟಿಕೆಟ್‌ಗಳು, ವೀಸಾ ಪ್ರಕ್ರಿಯೆ ಶುಲ್ಕಗಳು, ಸೈಟ್ ನೋಂದಣಿ ಶುಲ್ಕದ ಜೊತೆಗೆ ವಿದೇಶಿ ಕರೆನ್ಸಿ ವಿನಿಮಯಕ್ಕಾಗಿ ರವಿಕಿರಣ್ ಆರೋಪಿಗಳಿಗೆ 4 ಲಕ್ಷಕ್ಕೂ ಹೆಚ್ಚು ರೂಪಾಯಿಗಳನ್ನು ನೀಡಿದ್ದಾಗಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಆರೋಪಿಗಳು ಹಣ ವಸೂಲಿ ಮಾಡಲು ನಟನ ಮನೆಗೆ ವ್ಯಕ್ತಿಯೊಬ್ಬರನ್ನು ಕಳುಹಿಸಿದ್ದರು. ಅಕ್ಟೋಬರ್ 29 ರಿಂದ ನವೆಂಬರ್ 18 ರ ನಡುವೆ ನಡೆದಿರುವ ಹಣದ ವಹಿವಾಟಿನ ವಿವರಗಳನ್ನು ರವಿಕಿರಣ್ ಪೊಲೀಸರಿಗೆ ನೀಡಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿಯೊಬ್ಬರು, ಆರೋಪಿಗಳನ್ನು ಇನ್ನೂ ವಿಚಾರಣೆಗೆ ಕರೆಸಲಾಗಿಲ್ಲ. ಎಫ್‌ಐಆರ್ ಮಾತ್ರ ದಾಖಲಾಗಿದೆ. ವಂಚನೆಯ ಬಗ್ಗೆ ದೂರುದಾರರು ಮಾಡಿದ  ಆರೋಪಗಳಿಗಾಗಿ ನಾವು ದಾಖಲೆಗಳನ್ನು ಬಯಸುತ್ತೇವೆ. ಶಂಕಿತರು ತಪ್ಪಿತಸ್ಥರೆಂದು ಕಂಡುಬಂದರೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಆರೋಪಿಗಳ ವಿರುದ್ಧ  ನಂಬಿಕೆ ಉಲ್ಲಂಘನೆ (IPC 406) ಮತ್ತು ವಂಚನೆ (IPC 420) ಪ್ರಕರಣ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com