ನನ್ನ ಆಕ್ಷನ್ ಕ್ವೀನ್ ಖ್ಯಾತಿಗೆ ಥ್ರಿಲ್ಲರ್ ಮಂಜು ಕಾರಣ: ಮಾಲಾಶ್ರೀ

ಮಾರಕಾಸ್ತ್ರ' ಟೀಸರ್ ಲಾಂಚ್ ಮಾಡಿ ಮಾತನಾಡಿದ ನಟಿ ಮಾಲಾಶ್ರೀ, 'ನೃತ್ಯ ನಿರ್ದೇಶಕ ಧನಕುಮಾರ್‌ ಅವರ ಮೂಲಕ ನನಗೆ ಈ ಚಿತ್ರತಂಡದ ಬಗ್ಗೆ ಗೊತ್ತಾಯಿತು. ನಿರ್ದೇಶಕ ಗುರುಮೂರ್ತಿ ಸುನಾಮಿ‌ ಹೇಳಿದ ಕಥೆ ಬಹಳ ಇಷ್ಟವಾಯಿತು
ಮಾಲಾಶ್ರೀ
ಮಾಲಾಶ್ರೀ

ಸ್ಯಾಂಡಲ್‌ವುಡ್‌ನ 'ಆ್ಯಕ್ಷನ್ ಕ್ವೀನ್' ಮಾಲಾಶ್ರೀ ಮುಖ್ಯಭೂಮಿಕೆಯಲ್ಲಿರುವ 'ಮಾರಕಾಸ್ತ್ರ' ಚಿತ್ರದ ಟೀಸರ್ ರಿಲೀಸ್ ಆಗಿದೆ. ವಿಶೇಷವೆಂದರೆ, ಈ ಟೀಸರ್ ಅನ್ನು ಸ್ವತಃ ಮಾಲಾಶ್ರೀ ಅವರೇ ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಮಾಲಾಶ್ರೀ ಹೊಸ ಸಿನಿಮಾ ಅವರ ಹಿಂದಿನ  ಚಾಮುಂಡಿ ಮತ್ತು ಶಕ್ತಿ ಚಿತ್ರಗಳನ್ನು ನೆನಪಿಸಿತು.

ಮಾರಕಾಸ್ತ್ರ' ಟೀಸರ್ ಲಾಂಚ್ ಮಾಡಿ ಮಾತನಾಡಿದ ನಟಿ ಮಾಲಾಶ್ರೀ, 'ನೃತ್ಯ ನಿರ್ದೇಶಕ ಧನಕುಮಾರ್‌ ಅವರ ಮೂಲಕ ನನಗೆ ಈ ಚಿತ್ರತಂಡದ ಬಗ್ಗೆ ಗೊತ್ತಾಯಿತು. ನಿರ್ದೇಶಕ ಗುರುಮೂರ್ತಿ ಸುನಾಮಿ‌ ಹೇಳಿದ ಕಥೆ ಬಹಳ ಇಷ್ಟವಾಯಿತು. ನಾನು ಈ ಚಿತ್ರ ಒಪ್ಪಿಕೊಳ್ಳುವುದಕ್ಕೆ ನಿರ್ದೇಶಕರೇ ಕಾರಣ. ಅವರಲ್ಲಿ ಇರುವ ಸಿನಿಮಾ ಪ್ರೀತಿ ಕಂಡು ನನಗೆ ಸಂತೋಷವಾಯಿತು. ಆರಂಭದಲ್ಲಿ 11 ದಿನಗಳ ಕಾಲ ನನ್ನ ಚಿತ್ರೀಕರಣ ಇರಲಿದೆ ಎಂದು ನಿಗದಿ ಆಗಿತ್ತು. ಕೊನೆಗೆ 60 ದಿನಗಳ ಕಾಲ ನಾನು ಶೂಟಿಂಗ್‌ನಲ್ಲಿ ಪಾಲ್ಗೊಂಡೆ. ನನಗೆ ಇಲ್ಲಿ 4 ಫೈಟ್ಸ್ ಇವೆ' ಎಂದು ಹೇಳಿದರು.

ಮಾಲಾಶ್ರೀ ಅವರಿಗೆ 'ಆ್ಯಕ್ಷನ್ ಕ್ವೀನ್' ಎಂಬ ಹೆಸರು ಬರಲು ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಕಾರಣವಂತೆ. ಆ ಬಗ್ಗೆ ಹೇಳಿಕೊಳ್ಳುವ ಅವರು, 'ನನ್ನನ್ನು ಇಂದು ಎಲ್ಲರೂ 'ಆ್ಯಕ್ಷನ್ ಕ್ವೀನ್' ಎಂದು‌ ಕರೆಯುತ್ತಿದ್ದಾರೆ ಎಂದರೆ, ಅದಕ್ಕೆ ಥ್ರಿಲ್ಲರ್ ಮಂಜು ಮಾಸ್ಟರ್ ಪ್ರಮುಖ ಕಾರಣ. ವಿಶೇಷವೆಂದರೆ, 'ಮಾರಕಾಸ್ತ್ರ' ಸಿನಿಮಾದಲ್ಲಿ ಅವರು ಕೂಡ ಇದ್ದಾರೆ. ಅವರೊಂದಿಗೆ ಮತ್ತೊಮ್ಮೆ ಕೆಲಸ ಮಾಡಿದ್ದು ಖುಷಿಯಾಯಿತು. 'ಮಾರಕಾಸ್ತ್ರ' ಚಿತ್ರದ ಸಾಹಸ ಸನ್ನಿವೇಶಗಳು ನನ್ನ ಹಿಂದಿನ 'ಚಾಮುಂಡಿ', ' ಶಕ್ತಿ' ಮುಂತಾದ ಚಿತ್ರಗಳ ಸಿನಿಮಾಗಳನ್ನು ನೆನಪು ಮಾಡಿತು. ನಾನು ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ' ಎಂದು ಹೇಳಿದ್ದಾರೆ.

ನಾಯಕಿ ಹರ್ಷಿಕಾ ಪೂಣಚ್ಚ ಅವರು ಈ ಚಿತ್ರದಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ಮಾರಕಾಸ್ತ್ರದ ಮೂಲಕ ತಮ್ಮ ಚೊಚ್ಚಲ ಸಿನಿಮಾ ನಿರ್ದೇಶನ ಮಾಡುತ್ತಿರುವ ನಿರ್ದೇಶಕ ಗುರುಮೂರ್ತಿ, ಚಿತ್ರವನ್ನು ಆಕ್ಷನ್-ಪ್ಯಾಕ್ಡ್ ಎಂಟರ್‌ಟೈನರ್ ಎಂದು ವಿವರಿಸುತ್ತಾರೆ, ಸಸ್ಪೆನ್ಸ್ ಮತ್ತು ಥ್ರಿಲ್‌ನಂತಹ ವಾಣಿಜ್ಯ ಅಂಶಗಳನ್ನು ಒಳಗೊಂಡಿದೆ ಎಂದಿದ್ದಾರೆ.

ಮಾರಕಾಸ್ತ್ರವನ್ನು ನಾಗರಾಜ್ ನಿರ್ಮಿಸಿದ್ದಾರೆ.  ಜೊತೆಗೆ ಆನಂದ್ ಆರ್ಯ, ಭರತ್ ಸಿಂಗ್ ಮತ್ತು ಉಗ್ರಂ ಮಂಜು ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರಕ್ಕೆ ಮಂಜು ಕವಿ ಸಂಗೀತ ಸಂಯೋಜಿಸಿದ್ದು, ಅರುಣ್ ಸುರೇಶ್ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ನಿರ್ದೇಶಕರು ಘೋಷಿಸುವ ನಿರೀಕ್ಷೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com