ಎಲ್ಲ ಭಾಷೆಯ ಸಿನಿಮಾಗಳನ್ನು ನೋಡೋರು ಕನ್ನಡಿಗರು; ನಟ ಸಿದ್ದಾರ್ಥ್ ಗೆ ಇಂಡಸ್ಟ್ರಿ ಪರವಾಗಿ ಕ್ಷಮೆ ಕೇಳುತ್ತೇನೆ: ಶಿವರಾಜ್ ಕುಮಾರ್

ತಮಿಳು ನಟ ಸಿದ್ಧಾರ್ಥ್ ಅವರು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಸುದ್ದಿಗೋಷ್ಠಿಗೆ ಅಡ್ಡಿಪಡಿಸಿದವರು ಯಾರು ಎಂದು ನನಗೆ ಗೊತ್ತಿಲ್ಲ, ಆದರೆ ಅದು ಸರಿಯಲ್ಲ, ಅವರ ಪರವಾಗಿ ನಾನು ನಟ ಸಿದ್ಧಾರ್ಥ್ ಗೆ ಕ್ಷಮೆ ಕೇಳುತ್ತೇನೆ ಎಂದು ಸ್ಯಾಂಡಲ್ ವುಡ್ ಹಿರಿಯ ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.
ನಟ ಸಿದ್ಧಾರ್ಥ್, ಶಿವರಾಜ್ ಕುಮಾರ್
ನಟ ಸಿದ್ಧಾರ್ಥ್, ಶಿವರಾಜ್ ಕುಮಾರ್

ಬೆಂಗಳೂರು: ಕನ್ನಡಿಗರೆಂದರೆ ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುವವರು, ಎಲ್ಲರನ್ನೂ ಸ್ವಾಗತಿಸುವವರು ಎಂಬ ಭಾವನೆ ಎಲ್ಲರಲ್ಲೂ ಇದೆ, ಅದಕ್ಕೆ ನಾವು ಚ್ಯುತಿ ತರಬಾರದು, ತಮಿಳು ನಟ ಸಿದ್ಧಾರ್ಥ್ ಅವರು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಸುದ್ದಿಗೋಷ್ಠಿಗೆ ಅಡ್ಡಿಪಡಿಸಿದವರು ಯಾರು ಎಂದು ನನಗೆ ಗೊತ್ತಿಲ್ಲ, ಆದರೆ ಅದು ಸರಿಯಲ್ಲ, ಅವರ ಪರವಾಗಿ ನಾನು ನಟ ಸಿದ್ಧಾರ್ಥ್ ಗೆ ಕ್ಷಮೆ ಕೇಳುತ್ತೇನೆ ಎಂದು ಸ್ಯಾಂಡಲ್ ವುಡ್ ಹಿರಿಯ ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.

ಕಾವೇರಿ ಜಲ ವಿವಾದದಲ್ಲಿ ಕನ್ನಡಿಗರು, ರಾಜ್ಯದ ರೈತರ ಪರ ಬೆಂಬಲ ಸೂಚಿಸಿ ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ಪರವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡಿಗರು ಎಲ್ಲರನ್ನೂ ಸ್ವಾಗತಿಸುತ್ತೇವೆ. ಪ್ರತಿಯೊಬ್ಬರಿಗೂ ಸಮಸ್ಯೆ ಇದೆ. ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನು ಮಾಡಬೇಕು. ಸಮಸ್ಯೆಯನ್ನು ಎಲ್ಲರೂ ಟಾಲರೇಟ್‌ ಮಾಡಬೇಕು (ತಡೆದುಕೊಳ್ಳಬೇಕು), ಪರಿಹಾರ ಏನು ಎಂಬುದನ್ನು ನೋಡಬೇಕು. ಆಗ ಖಂಡಿತವಾಗಿಯೂ ಪರಿಹಾರ ಸಿಗುತ್ತದೆ ಎಂದರು.

ನಾವು ಏನೇ ಮಾಡಿದರೂ ಬೇರೊಬ್ಬರಿಗೆ ಹರ್ಟ್ ಆಗಬಾರದು. ನಟ ಸಿದ್ದಾರ್ಥ್ ಅವರಿಗೆ ನಾನು ಈ ಮೂಲಕ ಕ್ಷಮೆ ಕೇಳುತ್ತೇನೆ. ಚಿಕ್ಕು ಚಿತ್ರದ ಪ್ರಚಾರಾರ್ಥ ಅವರು ಸುದ್ದಿಗೋಷ್ಠಿ ಕರೆದಿದ್ದರು. ಅದಕ್ಕೆ ನಾನು ಕ್ಷಮೆ ಕೋರುತ್ತೇನೆ ಎಂದರು.

ಎಲ್ಲ ಭಾಷೆಯ ಸಿನಿಮಾಗಳನ್ನು ನೋಡುವವರು ಕನ್ನಡಿಗರು ಮಾತ್ರ. ನಾನು ಯಾವಾಗಲೂ ಹೃದಯದಿಂದ ಮಾತನಾಡುತ್ತೇನೆ. ಮೈಂಡ್ ನಿಂದಲ್ಲ. ನಾವೂ ಯಾವಾಗಲೂ ಚೆನ್ನಾಗಿರಬೇಕು. ಯಾವುದೇ ಕಲಾವಿದರು ಬರಲಿಲ್ಲ ಅಂತ ನಿಂದಿಸಬೇಡಿ. ಒಳ್ಳೇ ಮನಸ್ಸಿನಿಂದ ಹೋರಾಟ ಮಾಡಿ. ಬಂದರೆ ಮಾತ್ರ ಹೋರಾಟವಾ? ನಾವು ಎಲ್ಲರನ್ನೂ ಪ್ರೀತಿಸಬೇಕು. ನಮಗೆ ಸ್ಟಾರ್‌ಗಿರಿ ಕೊಟ್ಟಿದ್ದೇ ನೀವು. ನಂಬಿಕೆ, ವಿಶ್ವಾಸ ಬೇಕು. ನಾವು ಯಾವತ್ತೂ ಜತಗೆ ಇರುತ್ತೇವೆ. ಇದ್ದೇವೆ ಎಂದು ಹೇಳಿದರು.

ಕಾವೇರಿ ತಾಯಿಗೆ ನೋವಾಗಿದೆ. ಅಲ್ಲೂ ಹೋಗಬೇಕು, ಇಲ್ಲೂ ಇರಬೇಕು. ಕಲಾವಿದರು ಬಂದು ಏನ್ ಮಾಡಬೇಕು ಹೇಳಿ? ಸಮಸ್ಯೆ ಬಗೆಹರಿಯೋದು ಮುಖ್ಯ ಇಲ್ಲಿ. ರೈತ ಅನ್ನೋದು ಕಾಮನ್ ಪದ. ಎಲ್ಲ ರೈತರು ಒಂದೇ ಅಲ್ವಾ? ನ್ಯಾಯಾಲಯದಲ್ಲಿ ಈ ಸಮಸ್ಯೆ ಬಗೆಹರಿಯಬೇಕು. ಗಲಾಟೆ ಮಾಡಿದರೆ ಏನೂ ಆಗಲ್ಲ. ಒಬ್ಬ ತಮಿಳು ನಟನಿಗೆ ಗುರುವಾರ ಅವಮಾನವಾಗಿದೆ. ಯಾರು ಯಾಕೆ ಮಾಡುತ್ತಾರೆ? ಸಮಸ್ಯೆಯಿಂದ ಆಚೆ ಬರೋದು ಈಗ ಪ್ರಸ್ತುತವಾಗಿದೆ. ಇನ್ನೊಬ್ಬರಿಗೆ ಹರ್ಟ್ ಮಾಡಬಾರದು. ಆಗ ಹೋರಾಟಕ್ಕೆ ಮರ್ಯಾದೆ ಇರಲ್ಲ ಎಂದು ಶಿವರಾಜಕುಮಾರ್‌ ಹೇಳಿದರು.

ಇಂದಿನ ಸಭೆಯಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಧ್ರುವಾ ಸರ್ಜಾ, ವಿಜಯ್‌ ರಾಘವೇಂದ್ರ, ಶ್ರೀಮುರುಳಿ, ವಸಿಷ್ಠ ಸಿಂಹ, ಶೃತಿ, ಉಮಾಶ್ರೀ, ಭಾವನಾ ಸೇರಿದಂತೆ ಹಲವರು ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com