ತಮಿಳು ನಟ ಸಿದ್ದಾರ್ಥ್ ಪತ್ರಿಕಾಗೋಷ್ಠಿ ತಡೆದು ರಕ್ಷಣಾ ವೇದಿಕೆ ಆಕ್ರೋಶ: ಕನ್ನಡಿಗರ ಪರವಾಗಿ ಕ್ಷಮೆ ಕೋರಿದ ಪ್ರಕಾಶ್ ರಾಜ್

ತಮಿಳು ಖ್ಯಾತ ನಟ ಸಿದ್ದಾರ್ಥ್ ಅವರು ‘ಚಿಕ್ಕು’ ಚಿತ್ರದ ಪ್ರಚಾರಾರ್ಥ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಕಾವೇರಿ ಪರ ಹೋರಾಟಗಾರರ ಆಕ್ರೋಶಕ್ಕೆ ಗುರಿಯಾದ ಘಟನೆ ಗುರುವಾರ ನಡೆದಿದೆ.
ನಟ ಸಿದ್ದಾರ್ಥ್ ಸುದ್ದಿಗೋಷ್ಟಿಗೆ ಅಡ್ಡಿ
ನಟ ಸಿದ್ದಾರ್ಥ್ ಸುದ್ದಿಗೋಷ್ಟಿಗೆ ಅಡ್ಡಿ

ಬೆಂಗಳೂರು: ತಮಿಳು ಖ್ಯಾತ ನಟ ಸಿದ್ದಾರ್ಥ್ ಅವರು ‘ಚಿಕ್ಕು’ ಚಿತ್ರದ ಪ್ರಚಾರಾರ್ಥ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಕಾವೇರಿ ಪರ ಹೋರಾಟಗಾರರ ಆಕ್ರೋಶಕ್ಕೆ ಗುರಿಯಾದ ಘಟನೆ ಗುರುವಾರ ನಡೆದಿದೆ.

ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಸುದ್ದಿಗೋಷ್ಠಿ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿ ತೀವ್ರ ಆಕ್ರೋಶ ಹೊರ ಹಾಕಿ ನಟನನ್ನು ತರಾಟೆಗೆ ತೆಗೆದುಕೊಂಡರು. ನಮಗೆ ಕುಡಿಯಲು ಇರುವ ನೀರು ತಮಿಳುನಾಡಿಗೆ ಹೋಗುತ್ತಿದೆ. ಈ ಸಂದರ್ಭದಲ್ಲಿ ಸಿನಿಮಾ ಪರ ಪ್ರಚಾರ ಬೇಕಿತ್ತಾ? ಬನ್ನಿ ನಮ್ಮ ಜತೆ ಹೋರಾಟಕ್ಕೆ ಕೈಜೋಡಿಸಿ ಎಂದು ಸವಾಲೆಸೆದರು.

ಬೆಂಗಳೂರಿನ ಮಲ್ಲೇಶ್ವರದ ಎಸ್​ಆರ್​ವಿ ಚಿತ್ರಮಂದಿರದಲ್ಲಿ ಸಿದ್ದಾರ್ಥ್ ಭಾಗಿಯಾಗಿದ್ದ ಸುದ್ದಿಗೋಷ್ಠಿಗೆ ಮಧ್ಯೆ ಪ್ರವೇಶಿಸಿದ ನಿಂಗರಾಜು ಗೌಡ ಮತ್ತು ಕರವೇ ಸ್ವಾಭಿಮಾನಿ ಸೇನಾ ತಂಡವು ಭಾರೀ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ಕಾವೇರಿ ಗಲಾಟೆ ನಡೆಯುತ್ತಿದೆ. ಈಗ ಇದು ಬೇಕಿತ್ತಾ? ಇದು ಸಂಘರ್ಷಕ್ಕೆ ದಾರಿ ಮಾಡಿಕೊಡುವುದಿಲ್ಲವೇ? ಎಂದು ಹೇಳಿದ್ದೇ ತಡ ನಟ ಸಿದ್ದಾರ್ಥ್ ಸ್ಥಳದಿಂದ ಹೊರನಡೆದಿದ್ದಾರೆ.

ಹಲವರು ಕರವೇ ಸಂಘಟನೆಯ ಕ್ರಮವನ್ನು ಬೆಂಬಲಿಸಿದ್ದಾರೆ. ಇನ್ನೂ ಕೆಲವರು ಇದು ತಪ್ಪು ಎಂದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕಾಶ್ ರಾಜ್ ಟ್ವೀಟ್ ಒಂದನ್ನು ಮಾಡಿದ್ದಾರೆ. ಅವರು ನಟ ಸಿದ್ದಾರ್ಥ್ ಬಳಿ ಕ್ಷಮೆ ಕೇಳಿದ್ದಾರೆ.

‘ಕಾವೇರಿ ನಮ್ಮದು. ಹೌದು, ನಮ್ಮದೇ.. ಆದರೆ, ದಶಕಗಳ ಈ ಸಮಸ್ಯೆಯನ್ನು ಪರಿಹರಿಸಲಾರದ ಎಲ್ಲಾ ಅಸಮರ್ಥ ರಾಜಕೀಯ ಪಕ್ಷಗಳನ್ನು, ನಾಯಕರನ್ನು ಪ್ರಶ್ನಿಸದೇ, ಕೇಂದ್ರ ಸರ್ಕಾರಕ್ಕೆ ಒತ್ತಡ ತರದ ನಾಲಾಯಕ್ ಸಂಸದರನ್ನು ತರಾಟೆಗೆ ತೆಗೆದುಕೊಳ್ಳದೆ, ಹೀಗೆ ಅಸಹಾಯಕ ಜನಸಾಮಾನ್ಯರನ್ನು, ಕಲಾವಿದರನ್ನು ಹಿಂಸಿಸುವುದು ತಪ್ಪು. ಒಬ್ಬ ಕನ್ನಡಿಗನಾಗಿ ಸಹೃದಯ ಕನ್ನಡಿಗರ ಪರವಾಗಿ ಕ್ಷಮಿಸಿ’ ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

‘ಚಿಕ್ಕು’ ಸಿನಿಮಾದಲ್ಲಿ ಸಿದ್ದಾರ್ಥ್ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com