ತಮಿಳು ಚಿತ್ರರಂಗದ ಖ್ಯಾತ ನಟ, ಡಿಎಂಡಿಕೆ ಸಂಸ್ಥಾಪಕ ಕ್ಯಾ.ವಿಜಯ್ ಕಾಂತ್ ಇನ್ನಿಲ್ಲ

ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ರಾಜಕಾರಣಿ ವಿಜಯ್ ಕಾಂತ್ ಇಂದು ಗುರುವಾರ ನಿಧನ ಹೊಂದಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. 
ವಿಜಯ್ ಕಾಂತ್
ವಿಜಯ್ ಕಾಂತ್

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ಮತ್ತು ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ (DMDK) ಸಂಸ್ಥಾಪಕ ವಿಜಯಕಾಂತ್ (71ವ) ಗುರುವಾರ ಬೆಳಗಿನ ಜಾವ ಚೆನ್ನೈಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. 

ನ್ಯೂಮೋನಿಯಾ ಜ್ವರ ಮತ್ತು ಕೊರೊನಾ ಸೋಂಕಿನಿಂದಾಗಿ ಚೆನ್ನೈನ ಎಂಐಒಟಿ ಇಂಟರ್ನ್ಯಾಷನಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ತೀವ್ರ ಕ್ಷೀಣಿಸಿದ್ದರಿಂದ ನಿನ್ನೆ ರಾತ್ರಿಯಿಂದ ಅವರು ವೆಂಟಿಲೇಟರ್ ಬೆಂಬಲದಲ್ಲಿದ್ದರು. ಕ್ಯಾಪ್ಟನ್ ವಿಜಯಕಾಂತ್ ಅವರು ನ್ಯುಮೋನಿಯಾಕ್ಕೆ ದಾಖಲಾದ ನಂತರ ವೆಂಟಿಲೇಟರಿ ಬೆಂಬಲದಲ್ಲಿದ್ದರು. ವೈದ್ಯಕೀಯ ಸಿಬ್ಬಂದಿಯ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಇಂದು ಬೆಳಗ್ಗೆ ನಿಧನರಾದರು ಎಂದು ಆಸ್ಪತ್ರೆಯ ಬುಲೆಟಿನ್ ದೃಢಪಡಿಸಿದೆ.

ವಿಜಯ್ ಕಾಂತ್(Tamil Actor VijayKanth) ಅವರು ಡಿಎಂಡಿಕೆ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ವಿಜಯಕಾಂತ್ ಮತ್ತು ಅವರ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಕಳೆದ ಕೆಲ ವರ್ಷಗಳಿಂದ ಆಗಾಗ ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯ್ ಕಾಂತ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬರುತ್ತಿದ್ದರು. ಅನಾರೋಗ್ಯದಿಂದ ರಾಜಕಾರಣದಲ್ಲಿ ಕೂಡ ಸಕ್ರಿಯರಾಗಿರಲು ಸಾಧ್ಯವಾಗುತ್ತಿರಲಿಲ್ಲ. ಮೂರು ವಾರಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು ಕೊನೆಯುಸಿರೆಳೆದಿದ್ದಾರೆ. 

ಕಳೆದ ಡಿಸೆಂಬರ್ 18 ರಂದು ಡಿಎಂಡಿಕೆಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದು ಕೊನಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಅವರ ಆರೋಗ್ಯ ವೈಫಲ್ಯದಿಂದ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಅವರ ಪತ್ನಿ ಪ್ರೇಮಲತಾ ಅವರಿಗೆ ಪಕ್ಷದ ಲಾಠಿ ಹಸ್ತಾಂತರಿಸಲಾಯಿತು.

ನಾರಾಯಣನ್ ವಿಜಯರಾಜ್ ಅಲಗರಸ್ವಾಮಿ (25 ಆಗಸ್ಟ್ 1952 - 28 ಡಿಸೆಂಬರ್ 2023) ವಿಜಯಕಾಂತ್ ಎಂಬ ರಂಗನಾಮದಿಂದ ಚಿರಪರಿಚಿತರಾಗಿದ್ದರು, ಅವರು ತಮಿಳು ಚಿತ್ರರಂಗದಲ್ಲಿ ಖ್ಯಾತ ನಟರಾಗಿದ್ದು, ರಾಜಕಾರಣಿಯೂ ಹೌದು.

ಸೆಪ್ಟೆಂಬರ್ 14, 2005 ರಂದು, ವಿಜಯಕಾಂತ್ ಅವರು ತಮ್ಮ ರಾಜಕೀಯ ಪಕ್ಷವನ್ನು ಪ್ರಾರಂಭಿಸಿದರು, ಅದು ದೇಸಿಯ ಮುರ್ಪೊಕ್ಕು ದ್ರಾವಿಡರ್ ಕಳಗಂ (DMDK). 2006 ರ ವಿಧಾನಸಭಾ ಚುನಾವಣೆಯಲ್ಲಿ, ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳದೆ ಎಲ್ಲಾ 234 ಸ್ಥಾನಗಳಲ್ಲಿ ಸ್ಪರ್ಧಿಸಿ ಶೇಕಡಾ 8.38 ಮತಗಳೊಂದಿಗೆ ಕೇವಲ ಒಂದು ಸ್ಥಾನವನ್ನು ಗಳಿಸಿತು. ವಿರುಧಾಚಲಂ ಕ್ಷೇತ್ರದಿಂದ ವಿಜಯಕಾಂತ್ ಮಾತ್ರ ಗೆದ್ದು, ಉಳಿದೆಲ್ಲಾ ಅಭ್ಯರ್ಥಿಗಳು ಸೋತಿದ್ದರು. 2011ರ ಅಸೆಂಬ್ಲಿ ಚುನಾವಣೆಯಲ್ಲಿ ಡಿಎಂಡಿಕೆ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಜೊತೆ ಕೈಜೋಡಿಸಿ 29 ಸ್ಥಾನಗಳನ್ನು ಗೆದ್ದಿದ್ದರು. 

ವಿಜಯಕಾಂತ್ ಅವರು 2011 ರಿಂದ 2016 ರವರೆಗೆ ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದರು. ನಂತರ, ಎಐಎಡಿಎಂಕೆ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ, ವಿಜಯಕಾಂತ್ ಪಕ್ಷದೊಂದಿಗಿನ ಸಂಬಂಧವನ್ನು ಕಡಿದುಕೊಂಡರು.

2016ರ ವಿಧಾನಸಭಾ ಚುನಾವಣೆಯಲ್ಲಿ ವಿಜಯಕಾಂತ್ ಅವರು ಸಿಪಿಐ, ಸಿಪಿಎಂ, ಎಂಡಿಎಂಕೆ ಮತ್ತು ವಿಸಿಕೆ ಜೊತೆಗೆ ಪೀಪಲ್ಸ್ ವೆಲ್ಫೇರ್ ಫ್ರಂಟ್ ನ್ನು ಮುನ್ನಡೆಸಿದ್ದರು. ಆದರೆ, ಮೈತ್ರಿ ಯಾವುದೇ ಪರಿಣಾಮ ಬೀರಲಿಲ್ಲ. 2021ರ ವಿಧಾನಸಭೆ ಚುನಾವಣೆಯಲ್ಲೂ ಡಿಎಂಡಿಕೆಯ ಸಾಧನೆ ಕಳಪೆಯಾಗಿತ್ತು.

ಅವರು ತಮಿಳುನಾಡಿನ ಉಗ್ರ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು, ತಮ್ಮ ಶಕ್ತಿಯುತ ಬೆಂಕಿಯಂಥ ಭಾಷಣಗಳಿಗೆ ಹೆಸರುವಾಸಿಯಾಗಿದ್ದಾರೆ. ಆದರೆ ಇತ್ತೀಚೆಗೆ ಅನಾರೋಗ್ಯದಿಂದಾಗಿ ಅವರು ತೆರೆಮರೆಗೆ ಸರಿದಿದ್ದರು. 

ಪ್ರಧಾನಿ ಮೋದಿ ಸೇರಿ ಹಲವರ ಸಂತಾಪ: ನಟ ಹಾಗೂ ರಾಜಕಾರಣಿ ವಿಜಯ್ ಕಾಂತ್ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ವಿಜಯಕಾಂತ್ ಅವರ ನಿಧನದಿಂದ ಅತೀವ ದುಃಖವಾಗಿದೆ. ತಮಿಳು ಚಲನಚಿತ್ರ ಪ್ರಪಂಚದ ದಂತಕಥೆ, ಅವರ ವರ್ಚಸ್ವಿ ನಟನೆ ಲಕ್ಷಾಂತರ ಹೃದಯಗಳ ಮನಸೂರೆಗೊಂಡಿದ್ದವು. ರಾಜಕೀಯ ನಾಯಕರಾಗಿ, ನಂತರ ಸಾರ್ವಜನಿಕ ಸೇವೆಗೆ ಆಳವಾಗಿ ಬದ್ಧರಾಗಿದ್ದರು, ತಮಿಳುನಾಡಿನ ರಾಜಕೀಯ ಲೋಕದ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರಿದರು. ನನ್ನ ಆತ್ಮೀಯರೂ ಕೂಡ ಆಗಿದ್ದರು. ಈ ದುಃಖದ ಸಮಯದಲ್ಲಿ, ಅವರ ಕುಟುಂಬ, ಅಭಿಮಾನಿಗಳು ಮತ್ತು ಹಲವಾರು ಅನುಯಾಯಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ. 

ವಿಜಯಕಾಂತ್ ಅವರ ನಿಧನದಿಂದ ನನಗೆ ಅತೀವ ದುಃಖವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. "ಸಿನಿಮಾ ಮತ್ತು ರಾಜಕೀಯಕ್ಕೆ ಅವರ ಕೊಡುಗೆಗಳು ಲಕ್ಷಾಂತರ ಜನರ ಹೃದಯದಲ್ಲಿ ಅಳಿಸಲಾಗದ ಗುರುತು ಹಾಕಿವೆ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಡಿಎಂಡಿಕೆ ಮುಖ್ಯಸ್ಥ ಹಾಗೂ ನಟ ವಿಜಯಕಾಂತ್ ನಿಧನಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸಂತಾಪ ಸೂಚಿಸಿದ್ದಾರೆ. ಇದು ತಮಿಳುನಾಡು ಮತ್ತು ಚಿತ್ರರಂಗಕ್ಕೆ ದುರಂತ ಎಂದು ಬಣ್ಣಿಸಿರುವ ಸಿಎಂ ಸ್ಟಾಲಿನ್, ಡಿಎಂಡಿಕೆ ಮುಖ್ಯಸ್ಥರ ಸಾವಿನ ಸುದ್ದಿ ಆಘಾತ ಮತ್ತು ನೋವು ತಂದಿದೆ ಎಂದು ಹೇಳಿದ್ದಾರೆ. ಟ್ವಿಟ್ಟರ್ ನಲ್ಲಿ ಸುದೀರ್ಘ ಪೋಸ್ಟ್‌ನಲ್ಲಿ, ಸ್ಟಾಲಿನ್ ವಿಜಯಕಾಂತ್ ಅವರ ಅಂತಿಮ ವಿಧಿಗಳನ್ನು ಸಂಪೂರ್ಣ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಹೇಳಿದ್ದಾರೆ.

ತಮಿಳು ನಟ ಹಾಗೂ ರಾಜಕಾರಣಿ ವಿಜಯ್ ಕಾಂತ್ ಅವರ ಅಂತಿಮ ದರ್ಶನ ಪಡೆದ ತಮಿಳು ನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ 
ತಮಿಳು ನಟ ಹಾಗೂ ರಾಜಕಾರಣಿ ವಿಜಯ್ ಕಾಂತ್ ಅವರ ಅಂತಿಮ ದರ್ಶನ ಪಡೆದ ತಮಿಳು ನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com