ಕಾಂತಾರ-2 ಖಂಡಿತಾ ಬರುತ್ತದೆ, ಕೆಜಿಎಫ್-3 ಸದ್ಯಕ್ಕಿಲ್ಲ, ಭಾರತೀಯ ಚಿತ್ರೋದ್ಯಮವನ್ನು ಜಗತ್ತಿಗೆ ಸಾರುವುದು ನಮ್ಮ ಗುರಿ: ವಿಜಯ್ ಕಿರಗಂದೂರು

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕಥೆಗೆ ಪ್ರಾಮುಖ್ಯತೆ ನೀಡಲಾಗುತ್ತದೆ ಎಂಬ ಸಾರವನ್ನು ಪುನರ್ ಸಾರಿದ, ಕನ್ನಡ ಚಿತ್ರರಂಗವನ್ನು ಜಾಗತಿಕ ಭೂಪಟದಲ್ಲಿ ತಂದ ಒಂದು ಹೆಸರು ಹೊಂಬಾಳೆ ಫಿಲ್ಮ್ಸ್ ನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. 
ವಿಜಯ್ ಕಿರಗಂದೂರು
ವಿಜಯ್ ಕಿರಗಂದೂರು

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕಥೆಗೆ ಪ್ರಾಮುಖ್ಯತೆ ನೀಡಲಾಗುತ್ತದೆ ಎಂಬ ಸಾರವನ್ನು ಪುನರ್ ಸಾರಿದ, ಕನ್ನಡ ಚಿತ್ರರಂಗವನ್ನು ಜಾಗತಿಕ ಭೂಪಟದಲ್ಲಿ ತಂದ ಒಂದು ಹೆಸರು ಹೊಂಬಾಳೆ ಫಿಲ್ಮ್ಸ್ ನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. 

2022ನೇ ವರ್ಷದಲ್ಲಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ನಿರ್ಮಾಣದಲ್ಲಿ ಮೂಡಿಬಂದ KGF 2 ಮತ್ತು ಕಾಂತಾರ, 2000 ಕೋಟಿ ರೂಪಾಯಿಗೂ ಅಧಿಕ ಗಳಿಕೆಯನ್ನು ತಂದುಕೊಟ್ಟವು. ಸಂಸ್ಥೆಯ ಹಿಂದಿನ ರೂವಾರಿ ವಿಜಯ್ ಕಿರಗಂದೂರು  ಬ್ರಾಂಡ್ ಇಮೇಜ್ ನ್ನು ಸೃಷ್ಟಿ ಮಾಡಿದ್ದಲ್ಲದೆ ಚಿತ್ರದಲ್ಲಿ ವಿಷಯ, ಕಥೆಗೆ ಪ್ರಾಧಾನ್ಯತೆ ನೀಡುತ್ತಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. 

ಪಾರ್ವತಿ ದೇವಿಯ ಒಂದು ರೂಪ ಹೊಂಬಾಳಮ್ಮ, ಅದನ್ನೇ ತಮ್ಮ ನಿರ್ಮಾಣ ಸಂಸ್ಥೆಗೆ ಹೆಸರಿಟ್ಟರು. ಚಿತ್ರ ನಿರ್ಮಾಣಕ್ಕೆ ಹೊಂಬಾಳೆ ಸಂಸ್ಥೆ ಕಾಲಿಟ್ಟು 10 ವರ್ಷವಾಗಿದೆ. 2013ರಲ್ಲಿ ಪುನೀತ್ ರಾಜ್‌ಕುಮಾರ್‌ ಅಭಿನಯದ ನಿನ್ನಿಂದಲೇ ಸಿನಿಮಾ ಮೂಲಕ ಪಯಣ ಆರಂಭಿಸಿದ ವಿಜಯ್‌ ಕಿರಗಂದೂರು  ಚಿತ್ರದ ಸಂಖ್ಯೆಗಿಂತ ಗುಣಮಟ್ಟಕ್ಕೆ ಆದ್ಯತೆ ನೀಡುತ್ತಾ ಬಂದವರು. ಇಷ್ಟು ವರ್ಷಗಳಲ್ಲಿ 7 ಚಿತ್ರಗಳನ್ನು ನಿರ್ಮಿಸಿದ್ದಾರೆ. 

ಈ ಹೊತ್ತಿನಲ್ಲಿ ಸಿನಿ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿರುವ ವಿಜಯ್ ಕಿರಗಂದೂರು ಮತ್ತು ಅವರ ವ್ಯಾಪಾರ ಪಾಲುದಾರ ಚಲುವೇಗೌಡ, 2022ನೇ ವರ್ಷ, ಅವರ ಪಂಚವಾರ್ಷಿಕ ಯೋಜನೆ ಮತ್ತು ಆದ್ಯತೆಯ ಯೋಜನೆಗಳ ಕುರಿತು ಸುದೀರ್ಘವಾಗಿ ಮಾತನಾಡಿದ್ದಾರೆ.

ಕೆಜಿಎಫ್ ಮತ್ತು ಕಾಂತಾರ ಎರಡೂ ಬ್ಲಾಕ್‌ಬಸ್ಟರ್ ಯಶಸ್ಸನ್ನು ಕಂಡಿವೆ, ನಿಮ್ಮ ನೆಚ್ಚಿನ ಚಿತ್ರ ಯಾವುದು?
ಕಾಂತಾರಕ್ಕೆ ಹೋಲಿಸಿದರೆ, ಕೆಜಿಎಫ್ ನ್ನು ದೊಡ್ಡ ಮಟ್ಟದ ಪ್ರಚಾರ ಮತ್ತು ಬಜೆಟ್‌ನಲ್ಲಿ ನಿರ್ಮಿಸಲಾಯಿತು, ಇವೆರಡೂ ಅದ್ಭುತ ಆದಾಯವನ್ನು ತಂದುಕೊಟ್ಟವು. ತಮ್ಮದೇ ಆದ ರೀತಿಯಲ್ಲಿ ಅಸಾಧಾರಣ ಯಶಸ್ಸನ್ನು ಗಳಿಸಿದವು ಎಂಬುದರಲ್ಲಿ ಸಂದೇಹವಿಲ್ಲ. ಇಲ್ಲಿ ನನ್ನ ನೆಚ್ಚಿನ ಚಿತ್ರವೆಂಬ ಆಯ್ಕೆಯಿಲ್ಲ. ಚಿತ್ರ ಪ್ರೊಡಕ್ಷನ್ ದೃಷ್ಟಿಯಿಂದ, ಕೆಜಿಎಫ್ ನಮಗೆ ಭಾರತದಾದ್ಯಂತ ತಲುಪಲು ಸಹಾಯ ಮಾಡಿದರೆ, ಕಾಂತಾರ ಅದನ್ನು ಮತ್ತಷ್ಟು ಬಲಪಡಿಸಿತು.

ಕೆಜಿಎಫ್ ಮತ್ತು ಕಾಂತಾರ ಗೆಲುವಿನಿಂದ ನಿಮಗೆ ಸಿಕ್ಕಿದ್ದೇನು?
2022 ನಮಗೆ ಉತ್ತಮ ವರ್ಷವಾಗಿತ್ತು, ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕ ನಂತರ ಕೆಜಿಎಫ್ 2 ಬಿಡುಗಡೆಯಾದಾಗ ನಾವು ಸ್ವಲ್ಪ ನಿರೀಕ್ಷೆ ಹೊಂದಿದ್ದೆವು, ಆದರೆ ಕಾಂತಾರ ನಮಗೆ ನಿಜಕ್ಕೂ ಅಚ್ಚರಿ. ಇದು ದೇವರ ಆಶೀರ್ವಾದ ಎಂದೇ ನಾನು ಭಾವಿಸುತ್ತೇನೆ. ಎರಡು ಚಲನಚಿತ್ರಗಳು ಪ್ಯಾನ್-ಇಂಡಿಯನ್ ಚಲನಚಿತ್ರಗಳ ಪರಿಕಲ್ಪನೆಯಲ್ಲಿ ಭಾರಿ ವಹಿವಾಟು ನೀಡಿವೆ. ಥಿಯೇಟರ್ ಗಳಿಕೆ ಮೇಲೆ ಕೂಡ ಪರಿಣಾಮ ಬೀರಿವೆ. 

ಪ್ರಶಾಂತ್ ನೀಲ್ ಮತ್ತು ಯಶ್ ಅವರ ಕೆಜಿಎಫ್ ಭಾರೀ ಕಮರ್ಷಿಯಲ್ ಸಕ್ಸಸ್ ಕಂಡಿತು. ಅದರ ಶ್ರೇಯಸ್ಸು ಚಿತ್ರತಂಡಕ್ಕೆ ಮತ್ತು ತಂತ್ರಜ್ಞರಿಗೆ ಸಲ್ಲುತ್ತದೆ. ಕಾಂತಾರ ಯಶಸ್ಸು ನಮ್ಮಲ್ಲಿ ಬೇರೂರಿರುವ ಸಂಸ್ಕೃತಿ ಜನರಿಗೆ ಇಷ್ಟವಾಗುತ್ತದೆ ಎಂಬ ಸಂದೇಶ ನೀಡಿದೆ. ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು. ರಿಷಬ್ ಶೆಟ್ಟಿಗೆ ನಾವು ಋಣಿಯಾಗಿದ್ದೇವೆ. ಈ ಎರಡು ಚಿತ್ರಗಳ ಯಶಸ್ಸು ನಮಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಿದೆ. 2023 ಮತ್ತು 2024 ಕ್ಕೆ ಉತ್ತಮವಾಗಿ ಯೋಚಿಸಲು, ಇನ್ನಷ್ಟು ಉತ್ತಮ ಚಿತ್ರಗಳನ್ನು ನೀಡಲು ಪ್ರೇರಣೆ ನೀಡಿವೆ.

ಹೊಂಬಾಳೆ ಸಂಸ್ಥೆಯನ್ನು ಪ್ರಾರಂಭಿಸುವ ಆಲೋಚನೆ ನಿಮ್ಮ ಮನಸ್ಸಿನಲ್ಲಿ ಯಾವಾಗ ಮೂಡಿತು?
ಚಿತ್ರರಂಗಕ್ಕೆ ಪ್ರವೇಶಿಸುವ ಹುಮ್ಮಸ್ಸು ಬಹಳ ಚಿಕ್ಕ ವಯಸ್ಸಿನಿಂದಲೇ ಇತ್ತು. ಭಾರತದ ಬೃಹತ್ ಮತ್ತು ವೈವಿಧ್ಯಮಯ ಜನಸಂಖ್ಯೆಯನ್ನು ತಲುಪುವುದು ಒಂದು ಆಕರ್ಷಕ ಕಲ್ಪನೆಯಾಗಿದೆ, ಇದು ಆರ್ಥಿಕವಾಗಿ ಕಾರ್ಯಸಾಧ್ಯವಾದ ನಿರೀಕ್ಷೆಯಾಗಿದೆ. ಇನ್ನೊಂದು ಪ್ರಮುಖ ಕಾರಣವೆಂದರೆ ಸಿನಿಮಾ ಬಹಳ ಪ್ರಭಾವಶಾಲಿ ಮಾಧ್ಯಮ. ಒಂದು ಪೀಳಿಗೆಗೆ ತಿಳಿಸುವ ಶಕ್ತಿ ಚಲನಚಿತ್ರಗಳಿಗೆ ಇದೆ. ಮೊದಲು ನಾಟಕ, ಹರಿಕಥೆಗಳ ಮೂಲಕ ಮಾತನಾಡುತ್ತಿದ್ದದ್ದು ಸಿನಿಮಾ ಮಾಧ್ಯಮದ ಮೂಲಕ ಬರಲಾರಂಭಿಸಿತು.

ಪ್ರತಿಯೊಂದು ಚಲನಚಿತ್ರವು ನನಗೆ ಕಲಿಕೆಯ ಅನುಭವವಾಗಿದೆ, ಪ್ರತಿ ಚಲನಚಿತ್ರವು ನಮಗೆ ಏನನ್ನಾದರೂ ಕಲಿಸಿದೆ, ಕಲಿಕೆಯು ಎಂದಿಗೂ ಮುಗಿಯದ ಪ್ರಕ್ರಿಯೆಯಾಗಿದೆ. ನಮ್ಮ ದೃಷ್ಟಿಯ ವಿಕಾಸವನ್ನು ಅರ್ಥಮಾಡಿಕೊಳ್ಳುವುದು ನಮ್ಮ ಯೋಜನೆಗಳನ್ನು ಉತ್ತಮವಾಗಿ ಕಾರ್ಯಗತಗೊಳಿಸಲು ನಮಗೆ ಸಹಾಯ ಮಾಡಿದೆ. ಹೊಂಬಾಳೆ ಫಿಲ್ಮ್ಸ್ ಬಹಳಷ್ಟು ಚಲನಚಿತ್ರ ನಿರ್ಮಾಪಕರೊಂದಿಗೆ ಬಹು-ಚಲನಚಿತ್ರ ಒಪ್ಪಂದಗಳಿಗೆ ಸಹಿ ಹಾಕಿದೆ.

ನಟರೊಂದಿಗೆ ಪ್ರಾಜೆಕ್ಟ್‌ಗಳಿಗೆ ಸಹಿ ಮಾಡುವುದಕ್ಕಿಂತ ಭಿನ್ನವಾಗಿ, ನಾವು ಸಾಮಾನ್ಯವಾಗಿ ಬಹು-ಚಲನಚಿತ್ರ ಯೋಜನೆಗಳಿಗೆ ನಿರ್ದೇಶಕರೊಂದಿಗೆ ಸಹಿ ಮಾಡುತ್ತೇವೆ. ಚಿತ್ರವೊಂದಕ್ಕೆ ಪ್ರಾಥಮಿಕ ಅವಶ್ಯಕತೆ ಕಥೆ ಮತ್ತು ಅದನ್ನು ಹೇಳಲು ಸರಿಯಾದ ನಿರ್ದೇಶಕ ಎಂದು ನಾನು ನಂಬುತ್ತೇನೆ. ಯಾವುದೇ ಚಿತ್ರಕ್ಕೆ, ಸ್ಕ್ರಿಪ್ಟ್ ಪ್ರಕಾರ ನಟನನ್ನು ಆಯ್ಕೆ ಮಾಡುವುದು ಉತ್ತಮ.

ನಾವು ಅನೇಕ ಚಿತ್ರಗಳಲ್ಲಿ ಸಂತೋಷ್ ಆನಂದ್ ರಾಮ್ ಮತ್ತು ಪ್ರಶಾಂತ್ ನೀಲ್ ಅವರಂತಹ ಅವರೊಂದಿಗೆ ಕೆಲಸ ಮಾಡಿದ್ದೆವು. ಈಗ ಈ ಪಟ್ಟಿಗೆ ನಿರ್ದೇಶಕ ರಿಷಬ್ ಶೆಟ್ಟಿ ಸೇರಿದ್ದಾರೆ. ಇಲ್ಲಿ ಪರಸ್ಪರ ತಿಳುವಳಿಕೆಯೂ ಮುಖ್ಯವಾಗುತ್ತದೆ. ಈ ನಿರ್ದೇಶಕರಿಗೆ ಇತರ ನಿರ್ಮಾಣ ಸಂಸ್ಥೆಗಳೊಂದಿಗೆ ಕೆಲಸ ಮಾಡಲು ಯಾವುದೇ ನಿರ್ಬಂಧಗಳಿಲ್ಲ. ಅವರ ಜೊತೆ ಆರಾಮ ಎನಿಸುವವರೆಗೆ ನಾವು ಅವರೊಂದಿಗೆ ಕೆಲಸ ಮಾಡಲು ಸಿದ್ಧರಿದ್ದೇವೆ.

ನಿಮ್ಮ ಪ್ರಾದೇಶಿಕ ಚಿತ್ರಗಳು ಹಿಂದಿ ಮಾತನಾಡುವ ಪ್ರದೇಶಗಳಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವಾಗ ಬಾಲಿವುಡ್ ಗೆ ಕಾಲಿಡುತ್ತಿದ್ದೀರಿ?
ಪ್ರಾಮಾಣಿಕವಾಗಿ, ನೀವು ವ್ಯವಹಾರದ ದೃಷ್ಟಿಕೋನದಿಂದ ನೋಡಿದಾಗ, ನಾವು ಹಿಂದಿ ಚಿತ್ರಗಳನ್ನು ಮಾಡಬೇಕು ಎಂದು ಅಲ್ಲ. ನಮ್ಮ ಡಬ್ಬಿಂಗ್ ಚಿತ್ರಗಳು ಈಗಾಗಲೇ ಒಳ್ಳೆಯ ಗಳಿಕೆ ಕಂಡಿವೆ. ಆದರೆ ನಾವು ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ಹೇಗೆ ಚಿತ್ರಗಳನ್ನು ಮಾಡುತ್ತಿದ್ದೇವೆಯೋ ಹಾಗೆಯೇ ಬಾಲಿವುಡ್ ನಲ್ಲಿಯೂ ಅಸ್ತಿತ್ವ ಹೊಂದಬೇಕೆಂಬ ಬಯಕೆಯಿದೆ.

ಇದಲ್ಲದೆ, ನಮ್ಮ ದಾರಿಯಲ್ಲಿ ಬರುವ ಕೆಲವು ವಿಷಯಗಳು ಉತ್ತರ ಭಾಗದ ನಟರು ಮತ್ತು ನಿರ್ದೇಶಕರಿಗೆ ಕೆಲಸ ಮಾಡಲು ಹೆಚ್ಚು ಹೊಂದಿಕೆಯಾಗುತ್ತದೆ. ಇಂದು ಹೆಚ್ಚಿನ ಚಲನಚಿತ್ರಗಳನ್ನು ಬಹುಭಾಷಾ ಎಂದು ಪರಿಗಣಿಸಲಾಗಿದ್ದರೂ, ಕಥೆ ಮುಖ್ಯವಾಗುತ್ತದೆ ಇದುವೇ ಹಿಂದಿ ಮಾರುಕಟ್ಟೆಗೆ ಹೋಗಲು ಪ್ರಾಥಮಿಕ ಕಾರಣಗಳಲ್ಲಿ ಒಂದಾಗಿದೆ. ಭಾಷಾ ಅಡತಡೆಗಳು ಇಂದು ಕಡಿಮೆಯಾಗುತ್ತಿವೆ. ಕನ್ನಡದ ಡಬ್ಬಿಂಗ್ ಚಿತ್ರ ಹಿಂದಿ ಮಾರುಕಟ್ಟೆಯಲ್ಲಿ ಉತ್ತಮವಾಗಿ ಓಡುತ್ತಿವೆ. 

ಇಂತಹ ಜಾಗತಿಕ ದೃಷ್ಟಿ ಹೊಂದಿರುವ ಹೊಂಬಾಳೆ ಚಿತ್ರಗಳು ಕನ್ನಡ ಚಿತ್ರರಂಗದಿಂದ ದೂರ ಸರಿಯಬಹುದೇ ಎಂಬ ಸಣ್ಣ ಅಳುಕು ಉಂಟಾಗಿದೆಯಲ್ಲವೇ?
ಖಂಡಿತಾ ಇಲ್ಲ. ನಾವು ನಮ್ಮ ಕನ್ನಡದ ಮೂಲವನ್ನು ಮರೆಯುವುದಿಲ್ಲ.  ಪ್ರೊಡಕ್ಷನ್ ಹೌಸ್ ಆಗಿ, ನಮ್ಮ ಚಲನಚಿತ್ರಗಳನ್ನು ನಿರ್ದಿಷ್ಟ ಭಾಷೆಗೆ ನಿರ್ಬಂಧಿಸಲು ಸಾಧ್ಯವಿಲ್ಲ. ನಮ್ಮ ಎಲ್ಲಾ ಚಿತ್ರಗಳು ಭಾರತೀಯ ಚಿತ್ರಗಳಾಗುತ್ತವೆ. ನಾವು ನಮ್ಮ ಚಲನಚಿತ್ರಗಳನ್ನು ಭಾರತದ ಹೊರಗೆ ತೆಗೆದುಕೊಂಡು ಅಲ್ಲಿಂದ ಆದಾಯವನ್ನು ಪಡೆಯುವ ಗುರಿಯನ್ನು ಹೊಂದಿದ್ದೇವೆ. ಭಾರತದಲ್ಲಿ ವಿದೇಶಿ ಭಾಷೆಯ ಚಿತ್ರಗಳು ಹೇಗೆ ವ್ಯಾಪಾರವನ್ನು ಹೊಂದಿವೆಯೋ ಹಾಗೆಯೇ ನಾವು ಇತರ ದೇಶಗಳಿಂದ ಆದಾಯವನ್ನು ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸಿನಿಮಾವನ್ನು ಬದಲಾವಣೆಯ ಶಕ್ತಿಯಾಗಿ ನೋಡುತ್ತೇನೆ. 

ನಾವು ಭಾರತೀಯ ಸಿನಿಮಾದ ಸಾಮರ್ಥ್ಯವನ್ನು ಅನಾವರಣಗೊಳಿಸಲು ಮತ್ತು ಭಾರತೀಯ ಸಂಸ್ಕೃತಿಯನ್ನು ಮತ್ತು ಪ್ರಪಂಚದಾದ್ಯಂತ ನಮ್ಮ ಸಾಂಪ್ರದಾಯಿಕ ಬೇರುಗಳನ್ನು ಹರಡಲು ಬಯಸುತ್ತೇವೆ. ನಮ್ಮ ಎಲ್ಲಾ ಚಲನಚಿತ್ರಗಳು ಪ್ಯಾನ್-ಇಂಡಿಯನ್ ಆಗಿರಬೇಕು ಎಂದು ಯೋಚಿಸುವಾಗ ಅದು ಯೋಜನೆಯಿಂದ ಯೋಜನೆಗೆ ಭಿನ್ನವಾಗಿರುತ್ತದೆ.

3 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವ ಯೋಜನೆಯನ್ನು ತಿಳಿಸಿದ್ದೀರಿ, ಅದು ಮುಂದಿನ 5 ವರ್ಷಗಳಲ್ಲಿಯೇ?
ಭಾರತೀಯ ಸಿನಿಮಾವು ಈಗ ಉದ್ಯಮ-ಚಾಲಿತವಾಗಿರುವುದರಿಂದ ಮತ್ತು OTT ಯಂತಹ ಬಹು ಮಾಧ್ಯಮಗಳಿಂದ ಬದಲಾಗುತ್ತಿರುತ್ತದೆ. ಮನರಂಜನಾ ಉದ್ಯಮದಲ್ಲಿ ಖಾಲಿತನವಿದೆ. ಚಲನಚಿತ್ರಗಳನ್ನು ನಿರ್ಮಿಸಲು ಆಸಕ್ತಿ ಹೊಂದಿರುವ ಯಾರಾದರೂ ಈ ಆಯ್ಕೆಗಳನ್ನು ಬಳಸಿಕೊಳ್ಳಬೇಕು. ಚೀನಾ 50,000 ಥಿಯೇಟರ್‌ಗಳನ್ನು ಹೊಂದಿದೆ. ಅಮೆರಿಕಾದಲ್ಲಿ 33,000 ಥಿಯೇಟರ್‌ಗಳನ್ನು ಹೊಂದಿದೆ, ಆದರೆ 140 ಕೋಟಿಗಳಷ್ಟು ಭಾರತದ ಜನಸಂಖ್ಯೆಯು ಕೇವಲ 9000 ಥಿಯೇಟರ್‌ಗಳನ್ನು ಹೊಂದಿದೆ. ಭವಿಷ್ಯದಲ್ಲಿ ಸುಮಾರು 5000 ಚಿತ್ರಮಂದಿರಗಳು ಬರಲಿವೆ. ಸಿನಿಮಾ ಮಾಧ್ಯಮವಾಗಿ, ನಾವು ಎಲ್ಲಿ ನೋಡಿದರೂ ಅದು ಒಳ್ಳೆಯ ಕಂಟೆಂಟ್ ಇದ್ದಾಗ ಮಾತ್ರ ಕೆಲಸ ಮಾಡುತ್ತದೆ.

ಸರಿಯಾದ ರೀತಿಯ ಬರಹಗಾರರು, ನಿರ್ದೇಶಕರು ಮತ್ತು ನಿರ್ಮಾಣ ಸಂಸ್ಥೆಗಳು ನಿರ್ವಾತವನ್ನು ತುಂಬಿದರೆ ಮಾತ್ರ ಈ ಸಾಧನೆ ಮಾಡಬಹುದು. ನಾವು ಮನರಂಜನಾ ಮಾಧ್ಯಮಗಳ ಎಲ್ಲಾ ಕ್ಷೇತ್ರಗಳಲ್ಲಿ ವರ್ಷಕ್ಕೆ ಕನಿಷ್ಠ 500 ರಿಂದ 600 ಕೋಟಿ ಹೂಡಿಕೆ ಮಾಡಲು ಯೋಜಿಸಿದ್ದೇವೆ. ನಮ್ಮ ಮುಖ್ಯ ಗಮನವು ಚಲನಚಿತ್ರಗಳ ಮೇಲೆ ಇರುತ್ತದೆ. ಮನರಂಜನಾ ಉದ್ಯಮವು ಹೆಚ್ಚು ಹೆಚ್ಚು ಬೆಳೆಯುತ್ತದೆ ಎಂದು ನಾವು ನಂಬುತ್ತೇವೆ. ವಿವಿಧ ಭಾಷೆಗಳಲ್ಲಿ ಕಥೆಗಳನ್ನು ತರಲು, ಕೇಳಲು ನಾವು ಸಿದ್ದವಿದ್ದೇವೆ. 

2023 ರಲ್ಲಿ, ಹೊಂಬಾಳೆ ಫಿಲ್ಮ್ಸ್ ಪ್ರಭಾಸ್ ನಟಿಸಿದ ಪ್ರಶಾಂತ್ ನೀಲ್ ಅವರ ಸಲಾರ್ (ತೆಲುಗು), ಫಹಾದ್ ಫಾಸಿಲ್ ಮತ್ತು ಅಪರ್ಣಾ ಬಾಲಮುರಳಿ ಅವರೊಂದಿಗೆ ಪವನ್ ಕುಮಾರ್ ಅವರ ಧೂಮಮ್ (ಮಲಯಾಳಂ), ರಾಷ್ಟ್ರ ಪ್ರಶಸ್ತಿ ವಿಜೇತ ಕೀರ್ತಿ ಸುರೇಶ್ ನಿರ್ದೇಶನದ,ಫ್ಯಾಮಿಲಿ ಮ್ಯಾನ್ ಬರಹಗಾರ ಸುಮನ್ ಕುಮಾರ್ ರಘು ತಾತ (ತಮಿಳು) ನಂತಹ ಕೆಲವು ದೊಡ್ಡ ಪ್ಯಾನ್-ಇಂಡಿಯನ್ ಚಲನಚಿತ್ರಗಳ ಬಿಡುಗಡೆಯನ್ನು ಹೊಂದಿದೆ.  ಈ ಎಲ್ಲಾ ಚಿತ್ರಗಳು ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿವೆ.
ನಂತರ, ಕನ್ನಡದಲ್ಲಿ, ಶ್ರೀಮುರಳಿ ಅವರೊಂದಿಗೆ ಬಘೀರಾವನ್ನು ನಿರ್ಮಿಸಲಿದ್ದು, ಇದನ್ನು ಪ್ರಶಾಂತ್ ನೀಲ್ ಬರೆದು ಡಾ. ಸೂರಿ ನಿರ್ದೇಶಿಸಿದ್ದಾರೆ. ನಂತರ ಸಂತೋಷ್ ಆನಂದ್‌ರಾಮ್ ನಿರ್ದೇಶನದ ಚಿತ್ರದಲ್ಲಿ ಯುವರಾಜಕುಮಾರ್ ಚಿತ್ರ ನಿರ್ಮಾಣವಿದೆ. 

2024 ರಲ್ಲಿಯೂ ಸಹ, ನಾವು ಪೃಥ್ವಿರಾಜ್ ಸುಕುಮಾರನ್ ಅವರ ಟೈಸನ್ ಮತ್ತು ರಕ್ಷಿತ್ ಶೆಟ್ಟಿ ಅವರ ರಿಚರ್ಡ್ ಆಂಟೋನಿಯಂತಹ ಪ್ಯಾನ್-ಇಂಡಿಯ ಚಲನಚಿತ್ರಗಳನ್ನು ಹೊಂದಿದ್ದೇವೆ. ರಿಷಬ್ ಶೆಟ್ಟಿ ಜೊತೆ ಇನ್ನೊಂದು ಸಿನಿಮಾ ಮತ್ತು ನಿರ್ದೇಶಕಿ ಸುಧಾ ಕೊಂಗರ ಜೊತೆ ಒಂದು ಪ್ರಾಜೆಕ್ಟ್ ಕೂಡ ಇದೆ.

ಅಂತಿಮವಾಗಿ, ನಾವು ಪ್ರಶಾಂತ್ ನೀಲ್ ಅವರೊಂದಿಗೆ ಇನ್ನೂ ಒಂದು ಯೋಜನೆಯನ್ನು ಹೊಂದಿದ್ದೇವೆ, ಅದು ಅವರು ಸಲಾರ್ ಅನ್ನು ಪೂರ್ಣಗೊಳಿಸಿದ ನಂತರ ಸಿದ್ಧವಾಗಲಿದೆ. 

ಕಾಂತಾರ ಸರಣಿ ಚಿತ್ರ ಬರುತ್ತದೆ. ಖಂಡಿತ. ರಿಷಬ್ ಶೆಟ್ಟಿ ಜತೆ ಚರ್ಚೆ ನಡೆಸಿದ ಬಳಿಕ ಇನ್ನಷ್ಟು ಸ್ಪಷ್ಟತೆ ಸಿಗಲಿದೆ. ಕೆಜಿಎಫ್ 3 ಗೆ ಸಂಬಂಧಿಸಿದಂತೆ, ನಾವು ಸದ್ಯದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳುವ ಯೋಜನೆ ಹೊಂದಿಲ್ಲ. ಪ್ರಶಾಂತ್ ನೀಲ್ ಯಾವಾಗ ನಮಗೆ ಲಭ್ಯವಾಗುತ್ತಾರೆಯೋ ಅದರ ಮೇಲೆ ಅವಲಂಬಿತವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com