ಸದ್ದಿಲ್ಲದೆ ಸರಳವಾಗಿ ನಿಶ್ಟಿತಾರ್ಥ ಮಾಡಿಕೊಂಡ 'ಒಳ್ಳೆ ಹುಡ್ಗ' ಪ್ರಥಮ್
ಕನ್ನಡ ಬಿಗ್ ಬಾಸ್ ಸೀಸನ್ 4ರ ವಿಜೇತ, ನಟ ಒಳ್ಳೆ ಹುಡ್ಗ ಪ್ರಥಮ್ ಸದ್ದು-ಗದ್ದಲವಿಲ್ಲದೆ, ಆಡಂಭರಗಳಿಲ್ಲದೆ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಾವು ನಿಶ್ಚಿತಾರ್ಥ ಮಾಡಿಕೊಂಡಿರುವ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
Published: 13th June 2023 10:41 AM | Last Updated: 13th June 2023 06:43 PM | A+A A-

ಪ್ರಥಮ್
ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನ್ 4ರ ವಿಜೇತ, ನಟ ಒಳ್ಳೆ ಹುಡ್ಗ ಪ್ರಥಮ್ ಸದ್ದು-ಗದ್ದಲವಿಲ್ಲದೆ, ಆಡಂಭರಗಳಿಲ್ಲದೆ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಾವು ನಿಶ್ಚಿತಾರ್ಥ ಮಾಡಿಕೊಂಡಿರುವ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ತಾವು ಮದುವೆ ಆಗಲಿರುವ ಯುವತಿ ಯಾರೆಂಬುದನ್ನು ಮಾತ್ರ ಬಹಿರಂಗಗೊಳಿಸಿಲ್ಲ.
ನಟ ಪ್ರಥಮ್ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಕುಟುಂಬದವರ ಸಮ್ಮುಖದಲ್ಲಿ ಸಿಂಪಲ್ ಆಗಿ ಉಂಗುರ ಬದಲಿಸಿಕೊಂಡು ಎಂಗೇಜ್‌ಮೆಂಟ್ ಮಾಡಿಕೊಂಡಿರುವ ಒಳ್ಳೆ ಹುಡ್ಗ ಪ್ರಥಮ್, ತನ್ನನ್ನು ಇಷ್ಟ ಪಡುವವರು ಸಾಮಾಜಿಕ ಜಾಲತಾಣಗಳಲ್ಲೇ ಶುಭ ಹಾರೈಸಿ ಎಂದು ಹೇಳಿದ್ದಾರೆ.
ನಾನ್ ಸ್ಟಾಪ್ ಮಾತು, ನೇರ ನುಡಿಯಿಂದಲೇ ಹೆಸರಾಗಿರುವ ಪ್ರಥಮ್, ಬಿಗ್ ಬಾಸ್-4ರಲ್ಲಿ ವಿಜೇತರಾಗಿದ್ದರು. ಇದೀಗ ಕುಟುಂಬದವರು ಇಷ್ಟಪಟ್ಟ ಹುಡುಗಿಯನ್ನು ಮದುವೆಯಾಗಲು ಮುಂದಾಗಿದ್ದಾರೆ. ಸೋಮವಾರ ನಿಶ್ಚಿತಾರ್ಥದಲ್ಲಿ ಉಂಗುರ ಬದಲಿಸಿಕೊಂಡಿರುವ ಫೋಟೊವನ್ನು ಮಾತ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಭಾವಿ ಪತ್ನಿಯ ಬಗ್ಗೆ ಮಾತ್ರ ಯಾವುದೇ ವಿವರ ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: ದೇವರು-ದೇವರೇ... ಕಲಾವಿದರು-ಕಲಾವಿದರೇ: 'ಪುನೀತ ಮಾಲೆ' ಹಾಕುವವರ ವಿರುದ್ಧ ನಟ ಪ್ರಥಮ್ ಕಿಡಿ!
ನಿಶ್ಚಿತಾರ್ಥದ ಬಗ್ಗೆ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಥಮ್, ಇವತ್ತು ನನ್ನ ಎಂಗೇಜ್ ಆಯ್ತು. ಯಾವ ಆಡಂಬರ, ಸಂಭ್ರಮ, ತೋರ್ಪಡಿಕೆ ಇಲ್ಲದೆ ಬಹಳ ಸರಳವಾಗಿ ಕುಟುಂಬದವರು ಮೆಚ್ಚಿದವರ ಜತೆಯಾಗಿದ್ದೇನೆ. ನಾನು ತುಂಬಾ ಸರಳವಾಗಿಯೇ ಬದುಕಿದವನು, ಹಾಗೇ ಇರಲು ಇಷ್ಟಪಡುತ್ತೇನೆ. ನನ್ನ ಎಂಗೇಜ್‌ಮೆಂಟ್ ಈ ದೇಶದ ದೊಡ್ಡ ಸುದ್ದಿಯಲ್ಲ. ಆದರೆ ನನ್ನ ಇಷ್ಟಪಡುವ ಸ್ನೇಹಿತರು, ಆತ್ಮೀಯರಿಗೆ ವಿಚಾರ ಹಂಚಿಕೊಳ್ಳೋಣ ಎಂಬ ಕಾರಣಕ್ಕೆ ವಿಚಾರ ತಿಳಿಸಿದ್ದೇನೆ.
ಮದುವೆ ಎಷ್ಟು ಅದ್ಧೂರಿಯಾಗಿ ಆದೆ ಅನ್ನೋದಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ಟಿಕೊಂಡೆವು ಎಂಬುವುದೇ ನಿಜವಾದ ಸಾಧನೆ. ನನಗೆ ಹಾಗಿರುವುದಕ್ಕೇ ಇಷ್ಟ, ಹಾಗೆಯೇ ಇದ್ದು ಬಿಡುತ್ತೇನೆ. ಹರಸುವವರು ಅಲ್ಲಿಂದಲೇ ಹರಸಿ, ಅದೇ ಆಶೀರ್ವಾದ ಎಂದು ತಿಳಿಸಿದ್ದಾರೆ.