'ದಿ ಎಲಿಫೆಂಟ್ ವಿಸ್ಪರರ್ಸ್' ಡಾಕ್ಯುಮೆಂಟರಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ: ಭಾರತಕ್ಕೆ ಕೀರ್ತಿ ತಂದ ನಿರ್ದೇಶಕ ಕಾರ್ತಿಕಿ ಗೊನ್ಸಾಲ್ವೆಸ್
ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯುತ್ತಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತದ 'ದಿ ಎಲಿಫೆಂಟ್ ವಿಸ್ಪರರ್ಸ್' ಸಾಕ್ಷ್ಯಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದೆ.
Published: 13th March 2023 08:36 AM | Last Updated: 13th March 2023 05:48 PM | A+A A-

ಕಾರ್ತಿಕಿ ಗೊನ್ಸಾಲ್ವೆಸ್, ಗುನೀತ್ ಮೊಂಗಾ 95 ನೇ ವಾರ್ಷಿಕ ಅಕಾಡೆಮಿ ಪ್ರಶಸ್ತಿಗಳ ಸಂದರ್ಭದಲ್ಲಿ ಪೋಸ್ ನೀಡಿದರು
ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯುತ್ತಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತದ 'ದಿ ಎಲಿಫೆಂಟ್ ವಿಸ್ಪರರ್ಸ್' ಸಾಕ್ಷ್ಯಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದೆ.
ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್' ವಿಭಾಗದಲ್ಲಿ 'ದಿ ಎಲಿಫೆಂಟ್ ವಿಸ್ಪರರ್ಸ್' ಡಾಕ್ಯುಮೆಂಟರಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದ್ದು, ಡಾಕ್ಯುಮೆಂಟರಿಯನ್ನು ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನ ಮಾಡಿದ್ದಾರೆ. ಈ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ಭಾರತದ ಮೊದಲ ಡಾಕ್ಯುಮೆಂಟರಿ ಎಂಬ ಖ್ಯಾತಿಗೂ 'ದಿ ಎಲಿಫೆಂಟ್ ವಿಸ್ಪರರ್ಸ್' ಪಾತ್ರವಾಗಿದೆ.
ಒಂದು ಅನಾಥ ಆನೆ ಮರಿಯ ಆರೈಕೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದಕ್ಷಿಣ ಭಾರತೀಯ ದಂಪತಿಯ ಕಥೆಯನ್ನು ‘ದಿ ಎಲಿಫೆಂಟ್ ವಿಸ್ಪರರ್ಸ್’ಡಾಕ್ಯುಮೆಂಟರಿಯು ಹೊಂದಿದೆ.
ಮುದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿ ನಿರ್ಮಿಸಲಾದ ಈ ಸಾಕ್ಷ್ಯಚಿತ್ರದಲ್ಲಿ ಸ್ಥಳೀಯ ದಂಪತಿಗಳಾದ ಬೊಮ್ಮನ್ ಮತ್ತು ಬೆಳ್ಳಿಯ ಆರೈಕೆಯಲ್ಲಿ ಬೆಳೆದ ರಘು ಎಂಬ ಅನಾಥ ಆನೆ ಮರಿಯ ಕಥೆ ಹೇಳಲಾಗಿದೆ. ಈ ಸಾಕ್ಷ್ಯಚಿತ್ರವು ಆನೆ ಮತ್ತು ಆ ದಂಪತಿ ನಡುವೆ ಬೆಳೆಯುವ ಬಾಂಧವ್ಯವನ್ನು ಮಾತ್ರವಲ್ಲದೆ ಅವರ ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯ ವರ್ಣಿಸುವ ಕಥೆಯಾಗಿದೆ
ದಿ ಎಲಿಫೆಂಟ್ ವಿಸ್ಪರರ್ಸ್’ ಡಾಕ್ಯುಮೆಂಟರಿಗೆ ನಿರ್ದೇಶನ ಮಾಡಿರುವ ಕಾರ್ತಿಕಿ ಗೊನ್ಸಾಲ್ವೆಸ್ ಅವರು ಮೂಲತಃ ತಮಿಳುನಾಡಿನ ಊಟಿಯವರು. ಡಾಕ್ಯುಮೆಂಟರಿ ಫಿಲ್ಮ್ ಮೇಕರ್ ಆಗಿರುವ ಕಾರ್ತಿಕಿ, ಉತ್ತಮ ಫೋಟೋಗ್ರಾಫರ್ ಕೂಡ ಹೌದು. ಈ ಹಿಂದೆ ಕ್ಯಾಮೆರಾ ಅಪರೇಟರ್ ಆಗಿ ಅನಿಮಲ್ ಪ್ಲಾನೆಟ್ ಮತ್ತು ಡಿಸ್ಕವರಿ ಚಾನೆಲ್‌ಗಳಿಗೆ ಕಾರ್ತಿಕಿ ಕೆಲಸ ಮಾಡಿದ್ದಾರೆ. ಇದೀಗ 41 ನಿಮಿಷಗಳ ‘ದಿ ಎಲಿಫೆಂಟ್ ವಿಸ್ಪರರ್ಸ್’ ಮೂಲಕ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಆ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ.