ಅಭಿಮಾನಿಗಳ 'ಅಪ್ಪು' ಪುನೀತ್ ರಾಜ್ ಕುಮಾರ್ ಜನ್ಮದಿನ, ಕುಟುಂಬಸ್ಥರಿಂದ ಸಮಾಧಿಗೆ ಪೂಜೆ, ಸಾಮಾಜಿಕ ಕಾರ್ಯ
ಇಂದು ಮಾರ್ಚ್ 17 ಪುನೀತ್ ರಾಜ್ಕುಮಾರ್ ಅವರ ಜನ್ಮದಿನ (Dr. Puneeth Rajkumar Birthday). ಇದು ಪುನೀತ್ ಇಲ್ಲದೆ ಆಚರಿಸಲಾಗುತ್ತಿರುವ ಎರಡನೇ ವರ್ಷದ ಜನ್ಮದಿನ.
Published: 17th March 2023 09:59 AM | Last Updated: 17th March 2023 10:06 AM | A+A A-

ಪುನೀತ್ ರಾಜ್ ಕುಮಾರ್
ಬೆಂಗಳೂರು: ಇಂದು ಮಾರ್ಚ್ 17 ಪುನೀತ್ ರಾಜ್ಕುಮಾರ್ ಅವರ ಜನ್ಮದಿನ (Dr. Puneeth Rajkumar Birthday). ಇದು ಪುನೀತ್ ಇಲ್ಲದೆ ಆಚರಿಸಲಾಗುತ್ತಿರುವ ಎರಡನೇ ವರ್ಷದ ಜನ್ಮದಿನ.
ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿರುವ ಪುನೀತ್ ಸಮಾಧಿಗೆ ನಸುಕಿನ ಜಾವವೇ ಪುನೀತ್ ಸೋದರ ನಟ ರಾಘವೇಂದ್ರ ರಾಜ್ ಕುಮಾರ್ ಕುಟುಂಬಸ್ಥರು, ಪುನೀತ್ ಪುತ್ರಿ ವಂದಿತಾ ತೆರಳಿ ಅವರ ಇಷ್ಟದ ತಿನಿಸುಗಳು, ಕೇಕ್ ಇಟ್ಟು ಕತ್ತರಿಸಿ, ಪೂಜೆ ಸಲ್ಲಿಸಿ ತಿಂದು ಗೌರವ ಸಲ್ಲಿಸಿದ್ದಾರೆ. ಈ ವೇಳೆ ಪುನೀತ್ ಅಭಿಮಾನಿಗಳು ಸಹ ಹಾಜರಿದ್ದರು.
ಸಮಾಧಿಗೆ ಪೂಜೆ: ಇಂದು ಬೆಳಗ್ಗೆ ಅಶ್ವಿನಿ ಪುನೀತ್ ರಾಜ್ ಕುಮಾರ್, ನಟ ಶಿವರಾಜ್ ಕುಮಾರ್ ಕುಟುಂಬ ಸೇರಿದಂತೆ ಇತರರು ಸಮಾಧಿ ಬಳಿ ಬಂದು ಪೂಜೆ ಸಲ್ಲಿಕೆ ಮಾಡಲಿದ್ದಾರೆ. ಈಗಾಗಲೇ ಪುನೀತ್ ರಾಜ್ಕುಮಾರ್ ಅವರ ಸಮಾಧಿಯನ್ನು ಅಲಂಕರಿಸುವ ಕೆಲಸ ಆಗಿದೆ. ಅಪ್ಪು ಜನ್ಮದಿನ ಅವರ ಸಮಾಧಿಗೆ ಭೇಟಿ ನೀಡಬೇಕು ಎಂಬುದು ಅನೇಕ ಅಭಿಮಾನಿಗಳ ಆಸೆ. ಈ ಕಾರಣಕ್ಕೆ ಕಂಠೀರವ ಸ್ಟುಡಿಯೋದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆಯಲಿದ್ದಾರೆ.
ಬಿಗಿ ಭದ್ರತೆ: ಕಂಠೀರವ ಸ್ಡುಡಿಯೊದಲ್ಲಿ ಪುನೀತ್ ಸಮಾಧಿಗೆ ಬರುವವರ ಸಂಖ್ಯೆ ಇನ್ನು ಹೆಚ್ಚಾಗಲಿರುವುದರಿಂದ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಪುನೀತ್ ಅವರಿಗೆ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ. ಪುನೀತ್ ಜನ್ಮದಿನಕ್ಕೆ ಅಭಿಮಾನಿಗಳಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ವಿಶೇಷ ದಿನದಂದು ಉಪೇಂದ್ರ ನಾಯಕ ನಟನಾಗಿ ಅಭಿನಯಿಸಿರುವ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಮುಖ್ಯ ಪಾತ್ರದಲ್ಲಿರುವ ‘ಕಬ್ಜ’ ಕೂಡ ರಿಲೀಸ್ ಆಗುತ್ತಿರುವುದು ವಿಶೇಷ.
ಅಪ್ಪು ಜನ್ಮದಿನದಂದು ರಕ್ತದಾನ, ಅನ್ನದಾನದಂತಹ ಕೆಲಸಗಳನ್ನು ಮಾಡಲಾಗುತ್ತಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ಅಪ್ಪು ಅಭಿಮಾನಿ ಬಳಗದಿಂದ ಈ ಕೆಲಸ ಆಗುತ್ತಿದೆ. ಇದಕ್ಕಾಗಿ ಅನೇಕ ಅಭಿಮಾನಿ ಬಳಗ ಮುಂದೆ ಬಂದಿದೆ.
‘ಗಂಧದ ಗುಡಿ’ ಸಾಕ್ಷ್ಯಚಿತ್ರ ರಿಲೀಸ್: ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಪುನೀತ್ ಅವರ ಡ್ರೀಮ್ ಪ್ರಾಜೆಕ್ಟ್. ಪುನೀತ್ ಅವರ ಮೊದಲ ವರ್ಷದ ಪುಣ್ಯತಿಥಿಗೂ ಒಂದು ದಿನ ಮೊದಲು ಅಂದರೆ ಅಕ್ಟೋಬರ್ 28ರಂದು ಇದನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಾಗಿತ್ತು. ಇದನ್ನು ನೋಡಿ ಅನೇಕರು ಮೆಚ್ಚಿಕೊಂಡಿದ್ದರು. ಈಗ ಈ ಡಾಕ್ಯುಮೆಂಟರಿ ಒಟಿಟಿಯಲ್ಲಿ ರಿಲೀಸ್ ಆಗಿದೆ. ಇಂದಿನಿಂದ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ‘ಗಂಧದ ಗುಡಿ’ ಪ್ರಸಾರ ಆರಂಭಿಸಲಿದೆ. ಇದು ಅಭಿಮಾನಿಗಳ ಪಾಲಿಗೆ ವಿಶೇಷ ಗಿಫ್ಟ್ ಆಗಿದೆ.