'ವಯಸ್ಸು ಕೈ ಜಾರಿದೆ, ಕೈ ಹಿಡಿಯಲು ಒಂದು ವಧು ಬೇಕಿದೆ': ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ರಿಲೀಸ್ ಡೇಟ್ ಫಿಕ್ಸ್!
ಜಗ್ಗೇಶ್ ನಟನೆಯ ಬಹುನಿರೀಕ್ಷಿತ ‘ರಾಘವೇಂದ್ರ ಸ್ಟೋರ್ಸ್’ ಚಿತ್ರವು ಕೊನೆಗೂ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ. ಜಗ್ಗೇಶ್ ಹುಟ್ಟುಹಬ್ಬದಂದು ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಚಿತ್ರದ ರಿಲೀಸ್ ದಿನಾಂಕವನ್ನು ಅಧಿಕೃತ ಘೋಷಣೆ ಮಾಡಿದೆ.
ನಮ್ಮ ರಾಘವೇಂದ್ರ ಸ್ಟೋರ್ಸ್‌ನ ಖ್ಯಾತ ಬಾಣಸಿಗರಾದ ಜಗ್ಗೇಶ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನವಿರಾಗಿ ಸಿದ್ಧಪಡಿಸಿರುವ ನವರಸದೌತಣವನ್ನು ಏಪ್ರಿಲ್ 28 ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಉಣಬಡಿಸಲಿದ್ದೇವೆ. ವಯಸ್ಸು ಕೈ ಜಾರಿದೆ, ಕೈ ಹಿಡಿಯಲು ಒಂದು ವಧು ಬೇಕಿದೆ ಎಂದು ಹೊಂಬಾಳೆ ಫಿಲಂಸ್ ಟ್ವೀಟ್ ಮಾಡಿದೆ.
ಅಡುಗೆ ಬಾಣಸಿಗರೊಬ್ಬರ ಕಥಾನಕವನ್ನು ಹೊಂದಿರುವ ರಾಘವೇಂದ್ರ ಸ್ಟೋರ್ಸ್ ಚಿತ್ರವನ್ನು ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ ನಡಿ ವಿಜಯ್ ಕಿರಗಂದೂರು ಅವರು ನಿರ್ಮಾಣ ಮಾಡಿದ್ದಾರೆ. ಈ ಮೊದಲು ಸಿನಿಮಾವನ್ನು ಒಟಿಟಿಯಲ್ಲಿ ರಿಲೀಸ್ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು, ಆದರೆ ನಿರ್ಮಾಪಕರು ಚಿತ್ರವನ್ನು ಥಿಯೇಟರ್ ನಲ್ಲಿ ರಿಲೀಸ್ ಮಾಡಲು ನಿರ್ಧರಿಸಿದ್ದಾರೆ.
ರಾಘವೇಂದ್ರ ಸ್ಟೋರ್ಸ್ ಸಿನಿಮಾಗೆ ಅತ್ಯುತ್ತಮ ನಿರ್ದೇಶನ, ಸಂಗೀತ ಸಂಕಲನ ಮತ್ತು ಛಾಯಾಗ್ರಹಣವಿದೆ, ಇದು ಕನ್ನಡ ಪ್ರೇಕ್ಷಕರ ಮನ ಗೆಲ್ಲುವ ವಿಶ್ವಾಸವಿದೆ ಎಂದು ನಟ ಜಗ್ಗೇಶ್ ಇನ್ಸ್ಟಾ ದಲ್ಲಿ ಬರೆದುಕೊಂಡಿದ್ದಾರೆ.
‘ರಾಘವೇಂದ್ರ ಸ್ಟೋರ್ಸ್’ ಸಿನಿಮಾದಲ್ಲಿ ಜಗ್ಗೇಶ್‌ಗೆ ನಾಯಕಿಯಾಗಿ ಶ್ವೇತಾ ಶ್ರೀವಾತ್ಸವ್ ಅಭಿನಯಿಸಿದ್ದಾರೆ. ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ‘ರಾಘವೇಂದ್ರ ಸ್ಟೋರ್ಸ್’ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ