ಸೆಟ್ಟೇರುವ ಮುನ್ನವೇ ಡ್ರಾಪ್: ಉರಿಗೌಡ-ನಂಜೇಗೌಡ ಸಿನಿಮಾ ನಿರ್ಮಾಣ ಯೋಜನೆ ಕೈಬಿಟ್ಟ ಸಚಿವ ಮುನಿರತ್ನ

ಸೆಟ್ಟೇರುವ ಮುನ್ನವೇ ಸಿನಿಮಾ ಡ್ರಾಪ್ ಆಗಿದೆ. ಇತ್ತೀಚೆಗೆ ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಉರಿಗೌಡ ನಂಜೇಗೌಡ ಶೀರ್ಷಿಕೆಯಲ್ಲಿ ಸಿನಿಮಾ ಮಾಡುವುದಾಗಿ ತೋಟಗಾರಿಕೆ ಸಚಿವ ಮುನಿರತ್ನ ಘೋಷಿಸಿದ್ದರು. 
ಸಿನಿಮಾ ನಿರ್ಮಾಣ ಯೋಜನೆ ಕೈಬಿಟ್ಟ ಸಚಿವ ಮುನಿರತ್ನ
ಸಿನಿಮಾ ನಿರ್ಮಾಣ ಯೋಜನೆ ಕೈಬಿಟ್ಟ ಸಚಿವ ಮುನಿರತ್ನ

ಬೆಂಗಳೂರು: ಸೆಟ್ಟೇರುವ ಮುನ್ನವೇ ಸಿನಿಮಾ ಡ್ರಾಪ್ ಆಗಿದೆ. ಇತ್ತೀಚೆಗೆ ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಉರಿಗೌಡ ನಂಜೇಗೌಡ ಶೀರ್ಷಿಕೆಯಲ್ಲಿ ಸಿನಿಮಾ ಮಾಡುವುದಾಗಿ ತೋಟಗಾರಿಕೆ ಸಚಿವ ಮುನಿರತ್ನ ಘೋಷಿಸಿದ್ದರು. 

ಅಷ್ಟೇ ಅಲ್ಲ ವಾಣಿಜ್ಯ ಮಂಡಳಿಯಲ್ಲಿ ಹೋಗಿ ಹೆಸರು ದಾಖಲಿಸಿಕೊಂಡು ಮೇ 18ರಂದು ಮುಹೂರ್ತ ಎಂದು ಹೇಳಿಕೊಂಡಿದ್ದರು. ಆದರೆ ಇಂದು ಆದಿಚುಂಚನಗಿರಿ ನಿರ್ಮಲಾನಂದ ಸ್ವಾಮಿಗಳನ್ನು ಭೇಟಿ ಮಾಡಿದ ನಂತರ ಸಚಿವ ಮುನಿರತ್ನ ಯು-ಟರ್ನ್ ತೆಗೆದುಕೊಂಡಿದ್ದಾರೆ. ಸ್ವಾಮೀಜಿ ಭೇಟಿ ಬಳಿಕ ಸಿನಿಮಾ ನಿರ್ಮಾಣ ಯೋಜನೆ ಕೈಬಿಟ್ಟಿದ್ದಾರೆ.

ಸಿನಿಮಾ ಮಾಡುವ ನಿರ್ಧಾರದಿಂದ ಹಿಂದೆ ಸರಿಯುವುದಾಗಿ ಇಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಹೇಳಿಕೆ ನೀಡಿದ್ದಾರೆ. ನಿರ್ಮಲಾನಂದ ಸ್ವಾಮಿಗಳ ಸಲಹೆಯಂತೆ ಚಿತ್ರ ನಿರ್ಮಾಣ ಕೈಬಿಟ್ಟಿದ್ದೇನೆ. ಉರಿಗೌಡ-ನಂಜೇಗೌಡ ಕಥೆಗೆ ಸಾಕಷ್ಟು ಗೊಂದಲಗಳಿವೆ. ಹೀಗಾಗಿ ರಾಜಕೀಯವಾಗಿ ಇದು ನಾನಾ ತಿರುವು ತೆಗೆದುಕೊಳ್ಳಬಹುದು, ಸಮಾಜದಲ್ಲಿ ಸ್ವಾಸ್ಥ್ಯ ಹಾಳಾಗಬಹುದು ಎಂಬ ದೃಷ್ಟಿಯಿಂದ ಚಿತ್ರ ನಿರ್ಮಾಣದಿಂದ ಹಿಂದೆ ಸರಿದಿದ್ದೇನೆ ಎಂದರು.

ಸಚಿವರು ಹೇಳಿದ್ದೇನು?: ನಿರ್ಮಲಾನಂದ ಶ್ರೀಗಳನ್ನು ಭೇಟಿ ಮಾಡಿದಾಗ ಅವರು, ಚಿತ್ರ ನಿರ್ಮಾಣ ಮಾಡುವುದು ದೊಡ್ಡ ವಿಷಯವಲ್ಲ. ಆದರೆ ಅದು ನಿರ್ದಿಷ್ಟ ಸಮುದಾಯವನ್ನು ನೋಯಿಸಬಾರದು, ಸ್ವಾಸ್ಥ್ಯ ಹಾಳುಮಾಡಬಾರದು, ಯೋಚನೆ ಮಾಡಿ ಎಂದರು. ಹೀಗಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದರು.

ಯಾರಿಗೋ ಮನಸ್ಸು ನೋಯಿಸಿ ಸಿನಿಮಾ ಮಾಡಲ್ಲ: ಉರಿಗೌಡ ನಂಚೇಗೌಡ ವಿಚಾರದಲ್ಲಿ ಒಂದಷ್ಟು ದಾಖಲೆ ಸಿಗುತ್ತಿವೆ ಒಂದಷ್ಟು ಸಿಗುತ್ತಿಲ್ಲ. ನನಗ ಚಿತ್ರ ಮಾಡಬೇಕು ಅನ್ನಿಸಿತು. ಸ್ವಾಮೀಜಿ ಅವರ ಜೊತೆ ಚರ್ಚೆ ಮಾಡಿದೆ. ಆಗ ನನಗೆ ಅನ್ನಿಸಿತು, ಯಾರಿಗೂ ಮನಸ್ಸು ನೋಯಿಸಿ ಸಿನಿಮಾ ಮಾಡಬಾರದು. ಸಿನಿಮಾ ಮಾಡಲು ಕಥೆಗಳು ತುಂಬಾ ಸಿಗುತ್ತದೆ. ಸ್ವಾಮೀಜಿ ಅವರಿಗೆ ಹೇಳಿದ್ದೇನೆ, ಯಾರ ಮನಸ್ಸು ನೋಯಿಸುವ ಉದ್ದೇಶ ನನ್ನದಲ್ಲ. ನಾನು ಈ‌ ಸಿನಿಮಾ ನಿರ್ಮಾಣವನ್ನು ಇಲ್ಲಿಯೇ ಕೈ ಬಿಡುತ್ತೇನೆ. ಬಿಜೆಪಿಯವನು ಅಂತಾ ನಾನು ಈ ಸಿನಿಮಾ ಮಾಡಲು ಹೋಗಲ್ಲ. ಶ್ರೀಗಳು ನೈಜತೆ ಇದ್ದರೆ ಅದರ ಬಗ್ಗೆ ಯೋಚನೆ ಮಾಡಿ ಎಂದು ಸೂಚಿಸಿದ್ದಾರೆ.

ಸ್ವಾಮೀಜಿ ಮಾತಿನಿಂದಲೇ ಸಿನಿಮಾ ನಿರ್ಮಾಣ ಕೈಬಿಟ್ಟಿದ್ದೇನೆ: ಸಿನಿಮಾ ಮಾಡಬೇಕು ಎಂದರೆ ನಾಲ್ಕಾರು ಹಾಡುಗಳನ್ನು ಹಾಕುತ್ತೇವೆ. ಹಾಡುಗಳನ್ನು ಹಾಕಿದ ನಂತರ ಕೆಲವರ ಮನಸ್ಸಿಗೆ ಬೇಜಾರು ಆಗಬಾರದು. ಕಾಂಟ್ರವರ್ಸಿ ಸಿನಿಮಾ ಮಾಡುವುದು ಬೇಡ ಎಂದುಕೊಂಡಿದ್ದೇನೆ. ನಾನು ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ ನಂತರ ಜಾತಿ ವೈಷಮ್ಯ ಉಂಟಾಗುವ ಸೂಚನೆ ಬಂದಿತು. ಕೆಲವರು ಸಿನಿಮಾ ಮಾಡುವುದು ಬೇಡ ಎಂದು ಹೇಳಿದ್ದರು. ಆದರೆ, ಈಗ ಆದಿಚುಂಚನಗಿರಿ ಸ್ವಾಮೀಜಿ ಅವರು ಯಾರ ಮನಸ್ಸಿಗೂ ನೋವು ಮಾಡದಂತಹ ಸಿನಿಮಾ ಮಾಡುವುಂತೆ ಸೂಚನೆ ನಿಡಿದ್ದರು. ಈ ಹಿನ್ನೆಲೆಯಲ್ಲಿ ನಾನು ಸಿನಿಮಾವನ್ನು ಕೈಬಿಟ್ಟಿದ್ದೇನೆ.

<strong>ನಿರ್ಮಲಾನಂದ ಸ್ವಾಮಿಗಳನ್ನು ಭೇಟಿ ಮಾಡಿದ ಸಚಿವ ಮುನಿರತ್ನ </strong>
ನಿರ್ಮಲಾನಂದ ಸ್ವಾಮಿಗಳನ್ನು ಭೇಟಿ ಮಾಡಿದ ಸಚಿವ ಮುನಿರತ್ನ 

ಬಿಜೆಪಿ ಮಂಡ್ಯ ರಾಜಕಾರಣಕ್ಕಾಗಿ ಸಿನಿಮಾ ನಿರ್ಮಾಣದ ಮೂಲಕ ನನ್ನನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆಲೋಚನೆಯೇ ಇಲ್ಲ. ನಾನು 25 ವರ್ಷಗಳಿಂದ ಸಿನಿಮಾ ಮಾಡುತ್ತಿದ್ದೇನೆ. ಕೊನೆಯದಾಗಿ ಕುರುಕ್ಷೇತ್ರ ಸಿನಿಮಾ ಮಾಡಿದ್ದೇನೆ. ಇನ್ನು ಶ್ರೀಗಳ ಬಗ್ಗೆ ಅಪಾರ ಗೌರವವಿದ್ದು, ಅವರು ಹೇಳಿದ ಮೇಲೆ ಎರಡನೇ ಮಾತುಗಳನ್ನು ಹೇಳದೇ ಸಿನಿಮಾ  ನಿರ್ಮಾಣ ಕೈಬಿಡಲು ಒಪ್ಪಿಗೊಂಡಿದ್ದೇನೆ ಎಂದು ಮುನಿರತ್ನ ಅವರು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com