ಹೊಸ ಪ್ರಯತ್ನಕ್ಕೆ ಕೈ ಹಾಕಿದ ರಿಷಬ್ ಶೆಟ್ಟಿ: ಕನಸು ಹುಟ್ಟಿದ ಊರು 'ಕೆರಾಡಿ' ಹೆಸರಿಟ್ಟ ಡಿವೈನ್ ಸ್ಟಾರ್!
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ‘ಕಾಂತಾರ’ ಸಿನಿಮಾದ ಸೂಪರ್ ಸಕ್ಸಸ್ ನಂತರ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ತಮ್ಮ ಹೊಸ ಹೆಜ್ಜೆ ಬಗ್ಗೆ ರಿಷಬ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Published: 25th May 2023 11:25 AM | Last Updated: 25th May 2023 11:25 AM | A+A A-

ರಿಷಬ್ ಶೆಟ್ಟಿ
ಬೆಂಗಳೂರು: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ‘ಕಾಂತಾರ’ ಸಿನಿಮಾದ ಸೂಪರ್ ಸಕ್ಸಸ್ ನಂತರ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ತಮ್ಮ ಹೊಸ ಹೆಜ್ಜೆ ಬಗ್ಗೆ ರಿಷಬ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೆರಾಡಿ ಹೆಸರಿನಲ್ಲಿ ಹೊಸ ಉದ್ಯಮಕ್ಕೆ ಕೈ ಹಾಕಿದ ರಿಷಬ್ ಶೆಟ್ಟಿ.
ನಟ, ನಿರ್ದೇಶಕ, ನಿರ್ಮಾಪಕನಾಗಿ ಸೈ ಎನಿಸಿಕೊಂಡಿರುವ ರಿಷಬ್ ಶೆಟ್ಟಿ ಅವರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಘೋಷಣೆ ಮಾಡಿದ್ದಾರೆ. ಒಂದು ಸಿನಿಮಾದ ಗೆಲುವಿಗೆ ಅದರ ನಿರ್ಮಾಣದಷ್ಟೇ, ಪ್ರಚಾರದ ಅಗತ್ಯವೂ ಇದೆ. ಕಳೆದ ಕೆಲವು ವರ್ಷಗಳಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಅದನ್ನು ಸೂಕ್ತ ಪ್ರಚಾರದ ಮೂಲಕ ಜನರಿಗೆ ತಲುಪಿಸಿದ ಅನುಭವದೊಂದಿಗೆ ಇಂದು ನಮ್ಮ ತಂಡ ಹೊಸ ಹೆಜ್ಜೆ ಇರಿಸುತ್ತಿದೆ.
ಹೊಸ ಹೆಜ್ಜೆ, ಹೊಸ ಕನಸು!#kerady #keradystudios #rishabshettyfilms #moviemarketing #kannadafilmindustry pic.twitter.com/H67tiPQCDE
— Rishab Shetty (@shetty_rishab) May 25, 2023
‘ಕೆರಾಡಿ ಸ್ಟುಡಿಯೋಸ್’ ಎಂಬ ವೇದಿಕೆಯ ಮೂಲಕ ಚಿತ್ರಗಳ ಮಾರ್ಕೆಟಿಂಗ್, ಪ್ರಚಾರ ಮತ್ತು ಇತರ ಸೇವೆಗಳನ್ನು ಪ್ರಾರಂಭಿಸಿದ್ದೇವೆ. ಇದು ಉತ್ತಮ ಚಿತ್ರಗಳು ಮತ್ತು ಪ್ರೇಕ್ಷಕರ ನಡುವೆ ಸೇತುವೆ ಆಗಬೇಕೆಂಬುದೇ ನಮ್ಮ ಆಶಯ ಎಂದು ರಿಷಬ್ ಪತ್ರ ಬರೆದಿದ್ದಾರೆ.
ಅಂದ ಹಾಗೆ ಕೆರಾಡಿ.. ನಾನು ಹುಟ್ಟಿ ಬೆಳೆದ, ನನ್ನ ಹೃದಯಕ್ಕೆ ಬಹಳ ಹತ್ತಿರವಾದ ಊರು. ಎಲ್ಲಕ್ಕಿಂತಲೂ ಹೆಚ್ಚಾಗಿ ನನ್ನೊಳಗೆ ಸಿನಿಮಾದ ಕನಸು ಹುಟ್ಟಿದ್ದು ಇಲ್ಲೇ! ಈ ಪ್ರಯತ್ನವನ್ನು ನನ್ನ ಕೆರಾಡಿಗೆ ಅರ್ಪಿಸಿ, ಚಿತ್ರರಂಗಕ್ಕೆ ನಮ್ಮ ಅಳಿಲು ಸೇವೆಯನ್ನು ಮುಂದುವರೆಸಲಿದ್ದೇವೆ. ನಿಮ್ಮ ಸಹಕಾರವಿರಲಿ’ ಎಂದು ರಿಷಬ್ ಕೋರಿದ್ದಾರೆ.
ರಿಷಬ್ ಶೆಟ್ಟಿ ಅವರು ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಮೂರೂ ಕ್ಷೇತ್ರದಲ್ಲಿ ಅವರು ಯಶಸ್ಸು ಕಂಡಿದ್ದಾರೆ. ಈಗ ಅವರು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅವರು ಸಿನಿಮಾಗಳ ಪ್ರಚಾರ ಹಾಗೂ ಅದಕ್ಕೆ ಸಂಬಂಧಿಸಿದ ಇತರ ಸೇವೆಗಳನ್ನು ನೀಡಲು ಹೊಸ ವೇದಿಕೆ ಕಟ್ಟಿದ್ದಾರೆ.
ಅವರ ಹೊಸ ಪ್ರಯತ್ನಕ್ಕೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಿವೆ. ಅವರು ಈ ಕ್ಷೇತ್ರದಲ್ಲೂ ಯಶಸ್ಸು ಕಾಣಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.
ನಮ್ಮ ಕನಸಿನ 'ಕೆರಾಡಿ', ಇದೀಗ ಚಿತ್ರಪ್ರಚಾರಕ್ಕೆ ಆಗಿದೆ ರೆಡಿ! #kerady #keradystudios #rishabshettyfilms #moviemarketing #kannadafilmindustry pic.twitter.com/hOGqKMlyQV
— Rishab Shetty (@shetty_rishab) May 25, 2023