ಸ್ಯಾಂಡಲ್ ವುಡ್ ನಟ ನಾಗಭೂಷಣ್ ವಿರುದ್ಧ ಅಪಘಾತ ಕೇಸು:ಮಹಿಳೆ ಸಾವು, ಪತಿ ಗಂಭೀರ ಗಾಯ
ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ತಮ್ಮ ಮನೋಜ್ಞ ಅಭಿನಯ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ನಟ ನಾಗಭೂಷಣ್ ವಿರುದ್ಧ ಹಿಟ್ ಅಂಡ್ ರನ್ ಕೇಸು ದಾಖಲಾಗಿ ಪೊಲೀಸರು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
Published: 01st October 2023 10:59 AM | Last Updated: 02nd October 2023 10:03 AM | A+A A-

ಅಪಘಾತಗೊಂಡ ನಟ ನಾಗಭೂಷಣ್ ಕಾರು
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ತಮ್ಮ ಮನೋಜ್ಞ ಅಭಿನಯ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ನಟ ನಾಗಭೂಷಣ್ ವಿರುದ್ಧ ಹಿಟ್ ಅಂಡ್ ರನ್ ಕೇಸು ದಾಖಲಾಗಿ ಪೊಲೀಸರು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ರಾತ್ರಿ ಬೆಂಗಳೂರಿನಲ್ಲಿ ನಟ ನಾಗಭೂಷಣ್ ಕಾರು ಕನಕಪುರ ರಸ್ತೆಯ ವಸಂತಪುರ ರಸ್ತೆಯ ಅಪಾರ್ಟ್ ಮೆಂಟ್ ಬಳಿ ಆಪಘಾತವಾಗಿದ್ದು, ಫುಟ್ ಪಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ 48 ವರ್ಷದ ಪ್ರೇಮಾ ಎಂಬ ಮಹಿಳೆ ಮೃತಪಟ್ಟರೆ, ಅವರ ಪತಿ ಗಂಭೀರ ಗಾಯಗೊಂಡಿದ್ದಾರೆ. ಉತ್ತರ ಹಳ್ಳಿಯ ಕೆ ಎಸ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಮುಂದಿನ ತನಿಖೆ ನಡೆಯುತ್ತಿದೆ.
ಖಾಸಗಿ ವಾಹಿನಿಯ ಕಾರ್ಯಕ್ರಮ ಮುಗಿಸಿ ಬರುವ ವೇಳೆ ನಾಗಭೂಷಣ ಅವರ ಕಾರು ಅಪಘಾತಕ್ಕೀಡಾಗಿದೆ. ಗಾಯಾಳುಗಳನ್ನು ನಾಗಭೂಷಣ ಅವರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರೇಮ ಮೃತಪಟ್ಟಿದ್ದಾರೆ.
ನಾಗಭೂಷಣ್ ಅವರು ಕಳೆದ ರಾತ್ರಿ ಕಾರನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಫುಟ್ಪಾತ್ನಲ್ಲಿ ನಡೆದುಹೋಗುತ್ತಿದ್ದ ಕೃಷ್ಣ ಬಿ (58ವ) ಮತ್ತು ಅವರ ಪತ್ನಿ ಎಸ್ ಪ್ರೇಮ ಅವರಿಗೆ ಡಿಕ್ಕಿ ಹೊಡೆದಿದೆ. ಫುಟ್ ಪಾತ್ಗೆ ಬಂದ ಕಾರು ನಂತರ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಪ್ರೇಮ ಅವರ ಮುಖ, ತಲೆಗೆ ಗಾಯವಾಗಿ ತೀವ್ರ ರಕ್ತಸ್ರಾವವಾಗಿ ಮೂಗು ಹಾಗೂ ಬಾಯಿಯಿಂದ ರಕ್ತಬಂದು ಆಸ್ಪತ್ರೆಗೆ ಕರೆದೊಯ್ಯುವಾಗಲೇ ಮೃತಪಟ್ಟಿದ್ದಾರೆ.
ಇತ್ತೀಚೆಗೆ ಕನ್ನಡದಲ್ಲಿ ಹಿಟ್ ಆಗಿರುವ ಕೌಸಲ್ಯಾ ಸುಪ್ರಜಾ ರಾಮ ಚಿತ್ರದಲ್ಲಿ ನಾಗಭೂಷಣ್ ನಟಿಸಿ ಜನಮೆಚ್ಚುಗೆ ಗಳಿಸಿದ್ದರು.